ಚಿತ್ರದುರ್ಗ
ಈಗಾಗಲೇ ಅನುಷ್ಠಾನಗೊಳಿಸಿರುವ ಶುದ್ದ ಘಟಕಗಳನ್ನು ರಿಪೇರಿ ಮಾಡಲು ಖಾಸಗಿ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ನಿಗಧಿತ ಅವಧಿಯೊಳಗೆ ರಿಪೇರಿ ಮಾಡದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚನೆ ನೀಡಲಾಗಿದೆ. ಅದರಂತೆ ಪ್ರತಿಯೊಂದು ವಾರ್ಡಿಗೂ ಒಂದೊಂದು ಶುದ್ದ ಕುಡಿಯುವ ನೀರಿನ ಘಟಕ ಅಳವಡಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಪ್ರಸ್ತಾವನೆ ಸಲ್ಲಿಸಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲಾಗವುದು ಎಂದು ವಿಧಾನಪರಿಷತ್ ಸದಸ್ಯ ಟಿ.ರಘುಆಚಾರ್ ಭರವಸೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚಿತ್ರದುರ್ಗ ನಗರವನ್ನು ಸುಂದರ ನಗರವನ್ನಾಗಿ ಮಾಡಲಾಗುವುದು. ನೀರು, ರಸ್ತೆ, ಚರಂಡಿ ಸೇರಿದಂತೆ ನಗರದ ಸಮಗ್ರ ಅಭಿವೃದ್ದಿಗೆ 208 ಕೋಟಿ ರೂಪಾಯಿ ಪ್ರಸ್ತಾವನೆ ಅಧಿಕಾರಿಗಳು ಸಲ್ಲಿಸಿದ್ದು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಅನುದಾನ ತಂದು ಚಳ್ಳಕೆರೆಗಿಂತ ಉತ್ತಮ ಸಿಟಿಯನ್ನಾಗಿ ಮಾಡುವುದಾಗಿ ತಿಳಿಸಿದರು.
ಚಳ್ಳಕೆರೆ ಮತ್ತು ಮೊಳಕಾಲ್ಮೂರಿನಲ್ಲಿ ಶಾಲಾ ಮಕ್ಕಳಿಗೆ ಶುದ್ದ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ರಾಜ್ಯದಲ್ಲಿಯೇ ಮೊದಲು. ಉಚಿತವಾಗಿ ನೀಡುವ ಮೂಲಕ ಬಿಸಿಯೂಟದ ಜೊತೆ ಶುದ್ದ ನೀರು ನೀಡಲಾಗುತ್ತಿದೆ. ಇನ್ನು ಒಂದು ವಾರದೊಳಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ಶುದ್ದ ಕುಡಿಯುವ ನೀರು ನೀಡಲಾಗುವುದು ಎಂದು ಅವರು, ಕೋಟೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಹಣ ಮಂಜೂರು ಮಾಡಿದ್ದೆ. ಪುರಾತತ್ವ ಇಲಾಖೆ ಅಧಿಕಾರಿಗಳು ಅನುಮತಿ ನೀಡಲಿಲ್ಲ. ಕೋಟೆ ಒಳಗೆ ಇರುವ ಘಟಕ ಹಾಳಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ರಿಪೇರಿ ಮಾಡಿಸಲಾಗುವುದು. ಅಲ್ಲದೆ ಕೋಟೆ ಮೇಲ್ಭಾಗದಲ್ಲಿರುವ ಏಕನಾಥೇಶ್ವರಿ ದೇವಾಲಯಕ್ಕೆ ಬರುವ ಭಕ್ತರಿಗೆ ಸೌಲಭ್ಯ ಇಲ್ಲವೆಂಬುದು ತಿಳಿದಿದೆ. ಮುಂದಿನ ದಿನಗಳಲ್ಲಿ ಭಕ್ತರಿಗೆ ಅಗತ್ಯವಾದ ನೀರು, ಶೌಚಾಲಯ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಲಾಗುವುದು ಎಂದರು.
ನಾನು ಎಂಎಲ್ಸಿ ಆಗಿ ಶಾಸಕರು, ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಡ್ಡಾಯವಾಗಿ ಓದುವಂತೆ ಖಾಸಗಿ ಬಿಲ್ ತರಲು ಹೋರಾಟ ಮಾಡುತ್ತಿದ್ದಾನೆ.ನನ್ನ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಲು ಆಗಲಿಲ್ಲ ನನ್ನ ಹೆಂಡತಿ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಇದರಿಂದ ನನ್ನ ಮನಸ್ಸಿಗೆ ಬೇಸರವಾಗಿದೆ. ಮುಂದಿನ ಚುನಾವಣೆಯಲ್ಲಿ ಸ್ಫರ್ಧಿಸಲ್ಲ. ಆಗಂತ ನಿವೃತ್ತಿ ಅಲ್ಲ ಹತ್ತು ವರ್ಷಗಳ ಕಾಲ ರಾಜಕಾರಣದಿಂದ ವಿಶ್ರಾಂತಿ ಪಡೆಯಲು ತೀರ್ಮಾನಿಸಿದ್ದೇನೆ. ಕಳೆದ ಐದು ವರ್ಷದಲ್ಲಿ ವಿಧಾನಪರಿಷತ್ ಸದಸ್ಯನಾಗಿ ಅಭಿವೃದ್ದಿ ಮಾಡುವ ವಿಚಾರದಲ್ಲಿ ನಾನು ತಪ್ಪು ಮಾಡಿದ್ದೇನೆ. ಮುಂದೆ ಅಂತಹ ತಪ್ಪು ಆಗದಂತೆ ನೋಡಿಕೊಳ್ಳುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಬಿಡುವುದು ಬೇರೆ ವಿಚಾರ. ಚಿತ್ರದುರ್ಗ ನಗರದ ಅಭಿವೃದ್ದಿ ಮಾಡಲೇಬೇಕೆಂಬ ಸಂಕಲ್ಪ ಮಾಡಿದ್ದೆನೆ. ಇನ್ನೂ ಮೂರುವರೆ ವರ್ಷ ಅಧಿಕಾರಾವಧಿ ಇದೆ. ಅಷ್ಟರಲ್ಲಿ ಚಿತ್ರದುರ್ಗ ನಗರವನ್ನು ಚಳ್ಳಕೆರೆ ನಗರಕ್ಕಿಂತ ಸುಂದರವಾಗಿ ಮಾಡಲಾಗುವುದು ಎಂದು ಹೇಳಿದರು.
ಖಾಸಗಿ ಬಿಲ್ ಜಾರಿಗೆ ತರುವ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಾಗುವುದು. ಅದು ಜಾರಿಗೆ ಬರುವರೆಗೂ ಹೋರಾಟ ಮಾಡುತ್ತೇನೆ. ಮಸೂದೆ ಜಾರಿಯಾದರೆ ನನ್ನ ಪತ್ನಿ ನನ್ನ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬಹುದು. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ. ನನ್ನ ಮಗ 1ನೇ ತರಗತಿ. ಕುಟುಂಬದೊಂದಿಗೆ ಸಮಯ ಕಳೆಯಲು ಆಗುವುದಿಲ್ಲ. ಅದಕ್ಕಾಗಿ ಹತ್ತು ವರ್ಷ ಚುನಾವಣೆಯಿಂದ ದೂರು ಉಳಿಯುತ್ತೇನೆ. ನಂತರ ನೋಡೋಣ ಎಂದರು.
ಸಾಣೇಹಳ್ಳಿ ಮಠದ ನಾಟಕೋತ್ಸವವಕ್ಕೆ ಪರಮೇಶ್ವರ್ ಅವರನ್ನು ಆಹ್ವಾನಿಸಿದ್ದರಿಂದಲೇ ಬಂದಿದ್ದು. ಬಂದ ಅತಿಥಿಗಳಿಗೆ ಗೌರವ ಕೊಡಬೇಕೆ ಹೊರತು ಅಪಮಾನ ಮಾಡಬಾರದು. ಉಪಮುಖ್ಯಮಂತ್ರಿ ಮಾಡುವ ಊಟವನ್ನು ತಪಾಸಣೆ ಮಾಡುವುದು ಶಿಷ್ಟಾಚಾರ. ಅದರಂತೆ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಪರಮೇಶ್ವರ್ ಊಟ ತಪಾಸಣೆ ಮಾಡಿ ಎಂದು ಹೇಳಿಲ್ಲ. ನಾನೊಬ್ಬ ಮಠದ ಭಕ್ತ. ಸ್ವಾಮೀಜಿ ಇಂತಹ ಹೇಳಿಕೆ ನೀಡಬಾರದಾಗಿತ್ತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನನ್ನ ಮನೆಗೆ ಉಪಮುಖ್ಯಮಂತ್ರಿ ಬಂದಾಗ ಅವರು ಊಟ ಮಾಡುವ ಮೊದಲು ತಪಾಸಣೆ ಮಾಡುವುದು ಸಹಜ. ಆಗಂತ ತಪಾಸಣೆ ಮಾಡುವುದು ಬೇಡ ಎನ್ನುವುದು ಯಾವ ನ್ಯಾಯ. ಬೇಕಾಗಿದ್ದರೆ ಊಟ ತಪಾಸಣೆ ಮಾಡುವುದು ತಪ್ಪು ಎಂದು ಹೇಳಲಿ ಅಭ್ಯಂತರವಿಲ್ಲ. ಆದರೆ ಮಂತ್ರಿ ಸತ್ತರೆ ಏನು ಆಗಲ್ಲ ಎಂದು ಹೇಳಿರುವುದು ತರವಲ್ಲ ಅದು ಇಂತಹ ದೊಡ್ಡ ಸ್ವಾಮೀಜಿ ಅವರ ಬಾಯಲ್ಲಿ ಅಂತಹ ಮಾತು ಬರಬಾರದು. ಸಾವು ನಮ್ಮ ಕೈಯಲ್ಲಿ ಇಲ್ಲ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸೂಚ್ಯವಾಗಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ