ಪ್ರಜಾಪ್ರಭುತ್ವದ ಉಳಿವಿಗೆ ಬಿಜೆಪಿ ತಿರಸ್ಕರಿಸಲು ಕರೆ

ದಾವಣಗೆರೆ:

       ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯಬೇಕಾದರೆ, ಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಪಕ್ಷವನ್ನು ಮತದಾರರು ತಿರಸ್ಕರಿಸಬೇಕೆಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ ಲೋಕೇಶ್ ಕರೆ ನೀಡಿದರು.ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ವತಿಯಿಂದ ಏರ್ಪಡಿಸಿದ್ದ ಸಿಪಿಐ ರಾಜಕೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

      ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಲಾಗುತ್ತಿದೆ. ಹೀಗಾಗಿ ಪ್ರಜಾಪ್ರಭುತ್ವ ಅಪಾಯದ ಸುಳಿಯಲ್ಲಿದೆ. ಅಲ್ಲದೆ, ಸಂವಿಧಾನ ಬದಲಿಸುವುದಾಗಿ ಸಂಸದರೇ ಹೇಳುತ್ತಿದ್ದಾರೆ. ದೆಹಲಿಯ ಜಂತರ್ ಮಂತರ್‍ನಲ್ಲಿ ಮನುವಾದಿಗಳು ಸಂವಿಧಾನದ ಪ್ರತಿ ಸುಡುವ ಮೂಲಕ ವಿಜೃಂಭಿಸಿದ್ದಾರೆ. ಹೀಗಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯಬೇಕಾದರೆ, ಬಿಜೆಪಿ ಯೇತರ ಪಕ್ಷಗಳನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

       ಮೋದಿ ಸರ್ಕಾರವು ಸಾಮಾನ್ಯ ಜನರ ಬದುಕು ಕಸಿಯುವ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ ಎಂದ ಅವರು 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಕೇವಲ ಶೇ.31 ರಷ್ಟು ಮಾತ್ರ ಮತದಾನ ನಡೆದಿರುವುದು. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಒಂದೆಡೆ ತರುವ ಪ್ರಯತ್ನ ಮಾಡಿದರೆ ಮಾತ್ರ ದೇಶದಲ್ಲಿ ಬದುಕುವ ಜನಸಾಮಾನ್ಯರ ಹಕ್ಕುಗಳು ಉಳಿಯಲಿವೆ ಎಂದರು.

         ಕಳೆದ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮೋದಿ ನೀಡಿದ ಯಾವುದೇ ಭರವಸೆಗಳು ಈಡೇರಿಲ್ಲ. ಮೋದಿ ಹೇಳಿದಂತೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ, ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗಲಿಲ್ಲ. ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಯಾಗಲಿಲ್ಲ. ಅಗತ್ಯ ವಸ್ತುಗಳ ಬೆಲೆ ಕಡಿಮೆ ಆಗಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

         ಮೋದಿ ಸರ್ಕಾರ ನೀಡಿದ ಯಾವ ಭರವಸೆಗಳು ಈಡೇರಿಸಲಿಲ್ಲ ಆದರೆ, ಚುನಾವಣಾ ಪ್ರಣಾಳಿಕೆಯಲ್ಲಿ ಇರದಿದ್ದ ಜಿಎಸ್‍ಟಿ ಜಾರಿಗೆ ತರುವ ಮೂಲಕ, ನೋಟು ಅಮಾನ್ಯೀಕರಣ ಮಾಡಿ, ಆಧಾರ್ ಕಡ್ಡಾಯಗೊಳಿಸಿ ಜನರ ಬದುಕನ್ನು ದುಸ್ತರಗೊಳಿಸಿದೆ ಎಂದು ಆರೋಪಿಸಿದರು.

        ಬಹುರಾಷ್ಟ್ರೀಯ ಕಂಪನಿಗಳ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವ ಬಿಜೆಪಿ ಸರ್ಕಾರ ಜನಸಾಮಾನ್ಯರಿಗಾಗಿ ಯಾವುದೇ ಮಹತ್ತರ ಯೋಜನೆ ಜಾರಿಗೆ ತಂದಿಲ್ಲ ಎಂದು ಆರೋಪಿಸಿದ ಅವರು, ಇಷ್ಟು ದಿನಗಳ ಕಾಲ ರಾಮಂದಿರ ನಿರ್ಮಾಣ ಹೆಸರಿನಲ್ಲಿ ಚುನಾವಣೆ ಎದುರಿಸಲು ಮುಂದಾಗಿದ್ದ ಬಿಜೆಪಿ ಈಗ, ಪುಲ್ವಾಮಾದಲ್ಲಿ ಉಗ್ರರದಾಳಿಗೆ ಸೈನಿಕರು ಹುತಾತ್ಮರಾಗಿರುವುದನ್ನು ಹಾಗೂ ಭಾರತೀಯ ಸೇನೆಯು ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬರಲು ಹವಣಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

          ಭ್ರಷ್ಠಾಚಾರ ನಿರ್ಮೂಲನೆ ಮಾಡುವುದಾಗಿ ಹೇಳುವ ಪ್ರಧಾನಿ ನರೇಂದ್ರ ಮೋದಿ, ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಬಾಯಿ ಬಿಡುತ್ತಿಲ್ಲ. ನ್ಯಾಯಾಲಯ ರಫೇಲ್ ಹಗರಣದ ತನಿಖೆ ನಡೆಸಬೇಕೆಂದು ತೀರ್ಪು ಎಲ್ಲಿ ಕೊಟ್ಟುಬಿಡುತ್ತದೆಯೋ ಎಂಬ ಕಾರಣಕ್ಕೆ ಈಗ ಕೇಂದ್ರ ಸರ್ಕಾರವು ರಫೇಲ್ ಒಪ್ಪಂದದ ಕಡತಗಳು ಕಳೆದು ಹೋಗಿವೆ ಎಂಬುದಾಗಿ ಅಟಾರ್ನಿ ಜನರಲ್ ಮೂಲಕ ಸುಪ್ರೀಂ ಕೋರ್ಟ್‍ಗೆ ಸುಳ್ಳು ಅಫಿಡಿವೇಟ್ ಸಲ್ಲಿಸಿದೆ ಎಂದು ಗಂಭೀರ ಆರೋಪ ಮಾಡಿದರು.ಕಾರ್ಯಕ್ರಮದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆರಾಮಚಂದ್ರಪ್ಪ, ಖಜಾಂಚಿ ಆನಂದರಾಜ್, ಪಾಲಿಕೆ ಸದಸ್ಯ ಆವರಗೆರೆ ಉಮೇಶ್, ಎಂ.ಬಿ.ಶಾರದಮ್ಮ, ಸಿಪಿಐ ತಾಲೂಕು ಕಾರ್ಯದರ್ಶಿ ಆವರಗೆರೆ ವಾಸು, ಐರಣಿ ಚಂದ್ರು, ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap