ಹೋರಾಟದ ಮೂಲಕವೇ ಸೌಲಬ್ಯ ಪಡೆದುಕೊಳ್ಳಬೇಕು

ಚಿತ್ರದುರ್ಗ:

      ಅಧಿಕಾರಿಗಳು ಹೇಳಿದ್ದಕ್ಕೆಲ್ಲಾ ತಲೆದೂಗುವ ಬದಲು ಹೋರಾಟದ ಮೂಲಕ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ ಅಂಗನವಾಡಿ ಕಾರ್ಯಕರ್ತೆಯರನ್ನು ಎಚ್ಚರಿಸಿದರು.

          ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಕಾರ್ಯಾಲಯದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಜಿಲ್ಲಾ ಮಂಡಳಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

          ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹಕ್ಕುಗಳನ್ನು ಪಡೆಯಲು ಪ್ರತಿಯೊಂದು ವಿಚಾರಕ್ಕೂ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಎಲ್ಲವನ್ನು ದಾಖಲೆ ಸಮೇತ ಇಟ್ಟುಕೊಂಡಾಗ ಮಾತ್ರ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ನಮ್ಮ ಹೋರಾಟಕ್ಕೆ ಮಣಿಯುತ್ತಾರೆ. ಬಾಯಿಮಾತಿನಲ್ಲಿ ಏನು ಆಗುವುದಿಲ್ಲ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆಗಿಂದಾಗ್ಗೆ ಸಭೆಗಳನ್ನು ನಡೆಸಿ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ ಎಂದು ತಿಳಿಸಿದರು.

           ಇಂದ್ರಧನುಷ್, ವಿಧವೆಯರಿಗೆ ವೇತನ ಕೊಡಿಸುವುದು, ಕುಷ್ಟರೋಗದ ಕೆಲಸ ಎಲ್ಲದಕ್ಕೂ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವುದು ಸರಿಯಲ್ಲ. ಅಧಿಕಾರಿಗಳು ಹೇಳುವ ಕೆಲಸವನ್ನು ಮಾಡಿ ಬೇಡವೆನ್ನುವುದಿಲ್ಲ. ಆದರೆ ಅಂಗನವಾಡಿ ಕೆಲಸಗಳನ್ನು ಹಿಂದಕ್ಕೆ ಇಟ್ಟು ಬೇರೆ ಇಲಾಖೆಗಳ ಕೆಲಸ ಮಾಡಬೇಡಿ. ಅಧಿಕಾರಿಗಳು ಹೇಳಿದ್ದಕ್ಕೆಲ್ಲಾ ಗೋಣು ಹಾಕುವ ಬದಲು ನಿಮ್ಮ ನ್ಯಾಯಯುತವಾದ ಹಕ್ಕುಗಳನ್ನು ಕೇಳಿ ಪಡೆಯಿರಿ ಎಂದು ಕಿವಿಮಾತು ಹೇಳಿದರು.

           ದೇಶದ ಪ್ರಧಾನಿ ನರೇಂದ್ರಮೋದಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸಭೆಯಲ್ಲಿ ಭಾಗವಹಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಮಸ್ಯೆಗಳ ಕುರಿತು ಮಾತನಾಡಿದ್ದೇನೆ. ವಿಧಾನಸಭೆಯಲ್ಲಿ ನಮ್ಮ ಪರವಾಗಿ ಮಾತನಾಡುವವರು ಒಬ್ಬರು ಇಲ್ಲ.

            ಹೋರಾಟವೇ ನಮಗೆ ಇರುವ ಅಸ್ತ್ರ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ.ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಮಾಲೀಕರ ಪರವಾಗಿ ಕಾನೂನು ಜಾರಿಗೆ ತರುತ್ತಿದೆ. ಹಿರಿಯರ ತ್ಯಾಗ ಬಲಿದಾನಗಳಿಂದ ದೇಶಕ್ಕೆ ಸಿಕ್ಕಿರುವ ಸ್ವಾತಂತ್ರವನ್ನು ಹಾಳು ಮಾಡಲು ಹೊರಟಿರುವ ಮೋದಿ ವಿರುದ್ದ ಹೋರಾಡಬೇಕಿದೆ ಎಂದರು. ನಲವತ್ತೇಳು ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ದೇಶದಲ್ಲಿದ್ದಾರೆ. ಮರೆತು ಮಲಗಬೇಡಿ ಎಂದು ಜಾಗೃತಿಗೊಳಿಸಿದರು.

         ಎ.ಐ.ಟಿ.ಯು.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‍ಬಾಬು, ಗೌರವಾಧ್ಯಕ್ಷ ಸಿ.ವೈ.ಶಿವರುದ್ರಪ್ಪ, ಕೆ.ಎನ್.ರಮೇಶ್, ಎಸ್.ಸಿ.ಕುಮಾರ್, ಜಮುನಾಭಾಯಿ, ಭಾಗ್ಯಮ್ಮ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link