ಆರೋಗ್ಯದ ಕಡೆಗೆ ಗಮನ ಹರಿಸಲು ಕರೆ

ಹುಳಿಯಾರು 

        ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಹುಳಿಯಾರಿನ ಸಾಕ್ಷ್ಯ ಕಣ್ಣಿನ ಹಾಗೂ ದಂತ ಆಸ್ಪತ್ರೆಯ ಸಹಯೋಗದಲ್ಲಿ ಗುರುವಾರ ಹುಳಿಯಾರಿನ ಸಾಕ್ಷ್ಯ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.

        ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಹೃದಯ ತಜ್ಞರಾದ ಡಾ.ಲತಾ, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ನಲವತ್ತು ದಾಟಿದ ನಂತರ ಕಡ್ಡಾಯವಾಗಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಮಸ್ಯೆಯಾಗುತ್ತಿದೆ. ಹೀಗಾಗಿ ವಿವಿಧ ಕಾಯಿಲೆಗಳಿಂದ ಗ್ರಾಮೀಣ ಪ್ರದೇಶದ ಜನರು ತುತ್ತಾಗುತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ ಉಚಿತ ಆರೋಗ್ಯ ಶಿಬಿರಗಳು ಅವರಿಗೆ ವರದಾನವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

        ನರರೋಗ ಹಾಗೂ ಮೂತ್ರಪಿಂಡ ತಜ್ಞರಾದ ಡಾ.ಹಿತೇಶ್ ಮಾತನಾಡಿ, ಆರೋಗ್ಯದ ಬಗ್ಗೆ ಯಾರೂ ಕಡೆಗಣನೆ ಮಾಡಬಾರದು. ಬಡವರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು ಸಕಾಲಕ್ಕೆ ವೈದ್ಯರ ಬಳಿ ತೆರಳಿ ಆರೋಗ್ಯ ಪರೀಕ್ಷಿಸಿಕೊಳ್ಳಲು ಈ ಆರೋಗ್ಯ ತಪಾಸಣಾ ಶಿಬಿರ ಸಹಕಾರಿಯಾಗಲಿದೆ. ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ ಎಂದರು.

          ಆಸ್ಪತ್ರೆ ಮುಖ್ಯಸ್ಥರಾದ ವಸಂತ ಕುಲಕರ್ಣಿ ಮಾತನಾಡಿ, ಸಮಾಜ ಸೇವೆಗಳಿಗೆ ಪ್ರತಿಯೊಬ್ಬರೂ ಕೈ ಜೋಡಿಸಿದಾಗ ಸಮಾಜದ ಪ್ರಗತಿ ಸಾಧ್ಯ. ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಶಿಬಿರಗಳ ಅವಶ್ಯಕತೆ ಇದ್ದು ನಮ್ಮ ಆಸ್ಪತ್ರೆಯು ಸಾಮಾಜಿಕ ಕಳಕಳಿಯಿಂದ ಹಲವಾರು ಶಿಬಿರವನ್ನು ಗ್ರಾಮಾಂತರ ಪ್ರದೇಶದಲ್ಲಿ ಆಯೋಜಿಸಿಕೊಂಡು ಬರುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದಲೂ ನೇತ್ರ ತಪಾಸಣ ಶಿಬಿರವನ್ನು ಉಚಿತವಾಗಿ ಆಯೋಜಿಸಿಕೊಂಡು ಬರಲಾಗುತ್ತಿದ್ದು ಹೋಬಳಿಯ ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

           ಶಿಬಿರದಲ್ಲಿ ಉಚಿತವಾಗಿ ಹೃದಯ, ಮೂತ್ರಪಿಂಡ, ನರರೋಗ, ಎಕೋ, ಇಸಿಜಿ, ಬಿಪಿ, ಶುಗರ್, ನೇತ್ರ ತಪಾಸಣೆ, ದಂತ ತಪಾಸಣೆ ಮಾಡಲಾಯಿತು. ವಿವಿಧ ಗ್ರಾಮಗಳ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ರೋಗಿಗಳನ್ನು ವೈದ್ಯರು ತಪಾಸಣೆ ನಡೆಸಿ ಉಚಿತ ಔಷಧಿ ವಿತರಿಸಿದರು ಮತ್ತು ವೈದ್ಯಕೀಯ ಸಲಹೆಗಳನ್ನು ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅಗತ್ಯವಿರುವ ರೋಗಿಗಳನ್ನು ಬೆಂಗಳೂರು ಸಪ್ತಗಿರಿ ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯಲಾಯಿತು.

         ಈ ಸಂದರ್ಭದಲ್ಲಿ ಸಾಕ್ಷ್ಯ ಆಸ್ಪತ್ರೆಯ ಪವನ್, ಲಕ್ಷ್ಮಿ, ಮಧುಸೂದನ್, ದೀಪಶ್ರೀ, ಉಪನ್ಯಾಸಕರಾದ ನರೇಂದ್ರ ಬಾಬು ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link