ನರೇಗಾ ಕೆಲಸ ಕೊಟ್ಟು ಗುಳೆ ತಡೆಯಿರಿ

ದಾವಣಗೆರೆ:

       ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ನೀಡುವ ಮೂಲಕ, ಜಿಲ್ಲೆಯಿಂದ ಕೃಷಿ ಕಾರ್ಮಿಕರು, ಗ್ರಾಮೀಣ ಭಾಗದ ಜನತೆ ಕಾಫಿಸೀಮೆ ಸೇರಿದಂತೆ ಇತರೆಡೆಗೆ ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಯಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರ ಪೀಡಿತ ತಾಲೂಕುಗಳಾದ ಜಗಳೂರು ಹಾಗೂ ಹರಪನಹಳ್ಳಿ ತಾಲೂಕಿನ ಗ್ರಾಮೀಣ ಪ್ರದೇಶದ ಕೃಷಿ ಕೂಲಿ ಕಾರ್ಮಿಕರು, ರೈತರು ಉದ್ಯೋಗ ಅರಸಿ ಬೇರೆಡೆಗೆ ಗುಳೆ ಹೋಗುತ್ತಿದ್ದಾರೆ. ಇದರಿಂದ ಇವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ನರೇಗಾ ಅಡಿಯಲ್ಲಿ ಸ್ಥಳೀಯವಾಗಿಯೇ 150 ದಿನಗಳ ಕಾಲ ಕೆಲಸ ನೀಡಿ ಗುಳೆ ತಡೆಯಬೇಕೆಂದು ತಾಕೀತು ಮಾಡಿದರು.

       ದುಡಿಯುವ ಕೈಗಳಿಗೆ ಕೆಲಸ ನೀಡುವ ಕೇಂದ್ರ ಸರ್ಕಾರ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳೂ ಸಹ ಗುತ್ತಿಗೆದಾರರು, ಜನ ಪ್ರತಿನಿಧಿಗಳ ಪಾಲಾಗದಂತೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗದ ಪ್ರಭಾವಿಗಳು, ಗುತ್ತಿಗೆದಾರರು 150-200 ಜಾಬ್ ಕಾರ್ಡ್ ಇಟ್ಟುಕೊಂಡು, ಖಾತರಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪವಿದ್ದು, ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕೆಂದು ಸೂಚನೆ ನೀಡಿದರು.

       ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲೆಯ ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ತಾಲೂಕು ಬರ ಪೀಡಿತವೆಂದು ಘೋಷಣೆಯಾಗಿದ್ದು, ಈ ತಾಲೂಕುಗಳ ಜನರಿಗೆ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ 100 ದಿನಗಳ ಬದಲಿಗೆ 150 ದಿನ ಕೆಲಸ ನೀಡಲು ಅವಕಾಶವಿದೆ. ಆದರೆ, ಗುಳೆ ಹೋಗುವ ಕೆಲಸಗಾರರು ಕುಶಲ ಕಾರ್ಮಿಕರಾಗಿದ್ದಾರೆ. ನರೇಗಾ ಕೆಲಸಕ್ಕೆ ಮಹಿಳೆಯರು ಮತ್ತು ವಯೋವೃದ್ಧರು ಮಾತ್ರ ಬರುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಯಾರೇ ಕೆಲಸ ಕೇಳಿದ 15 ದಿನದೊಳಗೆ ಕೆಲಸ ನೀಡಲು ಆಯಾ ತಾಪಂ ಇಓಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಮಾಡಿದ ಕೆಲಸಕ್ಕೆ ನಿಗದಿತ ಸಮಯದೊಳಗೆ ಕೂಲಿ ಹಣವನ್ನು ನೀಡಬೇಕು ಎಂದರು.

         ಕಂಚಿಕೇರಿ ಗ್ರಾ.ಪಂ. ಅಧ್ಯಕ್ಷ ಹಾಗೂ ದಿಶಾ ಸಮಿತಿ ಸದಸ್ಯ ಬಸವರಾಜಪ್ಪ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ 26 ಲಕ್ಷ ರು. ಮೌಲ್ಯದ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಜನಪ್ರತಿನಿಧಿಗಳ ಗಮನಕ್ಕೆ ತರುವುದಿಲ್ಲ. ಇಂಜಿನಿಯರ್‍ಗಳು, ಸ್ಥಳಕ್ಕೆ ಬರುವುದಿಲ್ಲ. ಕ್ರಿಯಾಯೋಜನೆ ರೂಪಿಸುವಾಗಲೂ ಸ್ಥಳಕ್ಕೆ ಭೇಟಿ ನೀಡುವುದಿಲ್ಲ. ಕೊಳವೆ ಬಾವಿ ಕೊರೆಸಿಲ್ಲ. ನಲ್ಲಿ ಸಹ ಇಲ್ಲ. ಆದರೂ, ಕಾಮಗಾರಿಗೆ ಖರ್ಚು ತೋರಿಸಲಾಗಿದೆ. ಹಳೇಯ ಕೆಲಸಕ್ಕೆ ಹೊಸ ಫಲಕ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

        ಜಿಲ್ಲಾಧಿಕಾರಿ ಡಾ.ಬಗಾದಿ ಮಾತನಾಡಿ, ಇಂಜಿನಿಯರ್‍ಗಳು ಸ್ಥಳಕ್ಕೆ ಹೋಗಿ ವಾಸ್ತವ ವಿಚಾರ ಅರಿತು, ಸ್ಥಳ ಪರಿಶೀಲಿಸಿದ ನಂತರ ಕ್ರಿಯಾ ಯೋಜನೆ ರೂಪಿಸಬೇಕು. ಅದನ್ನು ಬಿಟ್ಟು ನಾಲ್ಕು ಗೋಡೆ ಮಧ್ಯೆ ಕಚೇರಿಯಲ್ಲೇ ಕುಳಿತು ಕ್ರಿಯಾ ಯೋಜನೆ ರೂಪಿಸುವುದಲ್ಲ. ಹೊನ್ನಾಳಿ ತಾಲೂಕಿನ ಬೆಳಗುತ್ತಿಗೆ ಗ್ರಾಮಕ್ಕೆ ಪೈಪ್‍ಲೈನ್ ಅಳವಡಿಸಿ, ನೀರು ಪೂರೈಸುವ ಬಗ್ಗೆ ಸ್ಥಳಕ್ಕೆ ಹೋಗಿ, ಕ್ರಿಯಾ ಯೋಜನೆ ರೂಪಿಸಬೇಕೆಂದು ಹೇಳಿದರು.

       ಸಭೆಯಲ್ಲಿ ಶಾಸಕ ಎಸ್.ಎ.ರವೀಂದ್ರನಾಥ, ಜಿಪಂ ಸಿಇಓ ಎಸ್.ಅಶ್ವತಿ, ಉಪ ಕಾರ್ಯದರ್ಶಿ ಜಿ.ಎಸ್.ಷಡಕ್ಷರಪ್ಪ, ಮುಖ್ಯ ಲೆಕ್ಕಾಧಿಕಾರಿ ಆಂಜನೇಯ, ದಾವಣಗೆರೆ ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಇಓ ಎಲ್.ಎಸ್.ಪ್ರಭುದೇವ, ಹರಪನಹಳ್ಳಿ ತಾ.ಪಂ.ಅಧ್ಯಕ್ಷೆ ಅನ್ನಪೂರ್ಣಮ್ಮ, ಇಓ ಜಾನಕಿರಾಮ, ಬೆಳಗುತ್ತಿ ಗ್ರಾಪಂ ಅಧ್ಯಕ್ಷೆ ರೇಖಾ, ಸಮಿತಿ ಸದಸ್ಯರಾದ ಆರ್.ಲಕ್ಷ್ಮಣ, ನಾಗರತ್ನ ನಾಯ್ಕ, ಮಂಜಾನಾಯ್ಕ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link