ದಾವಣಗೆರೆ
ಮಣ್ಣಿನ ಮಕ್ಕಳು ಎಂಬುದಾಗಿ ಹೇಳಿಕೊಳ್ಳುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಿಂದ ರಾಜ್ಯ ಸರ್ಕಾರವನ್ನು ಆಪರೇಟ್ ಮಾಡುತ್ತಿದ್ದಾರೆಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಸ್ಟಾರ್ ಹೋಟೆಲ್‍ನಲ್ಲಿ ವರ್ಷಕ್ಕೆ 100 ಕೋಟಿ ರೂಪಾಯಿಗಳಿಗೆ ರೂಮ್ ಲೀಸ್‍ಗೆ ಪಡೆದು ಅಲ್ಲೆ ವಾಸ್ತವ್ಯ ಹೂಡಿ ಅಲ್ಲಿಂದಲೇ ಸರ್ಕಾರವನ್ನು ಆಪರೇಟ್ ಮಾಡುತ್ತಿದ್ದಾರೆ. ಏಕೆ ಇವರಿಗೆ ವಿಧಾನಸೌಧ, ಸರ್ಕಾರಿ ಬಂಗಲೆಗಳಿಲ್ಲವೇ? ಇವರು ಮೋಜುಮಸ್ತಿಗೆ ಅಲ್ಲಿ ರೂಮ್ ಮಾಡಿದ್ದಾರೆಂದು ದೂರಿದರು.
ವರ್ಗಾವಣೆ ದಂಧೆ:
ಮುಖ್ಯಮಂತ್ರಿ ಸಹೋದರ ಹೆಚ್.ಡಿ.ರೇವಣ್ಣ ಕಮಿಷನ್ ಆಸೆಗಾಗಿ, ಎಲ್ಲಾ ಇಲಾಖೆಗಳ ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಿಕೊಂಡಿದ್ದು, ಇದೊಂದು ಕಮಿಷನ್ ಏಜೆಂಟ್ ಸರ್ಕಾರವಾಗಿದ್ದು, ರೇವಣ್ಣ ವರ್ಗಾವಣೆ ದಂಧೆಯಲ್ಲಿ ತೊಡಗಿ ಲೂಟಿ ಹೊಡೆಯುತ್ತಿದ್ದಾರೆಂದು ಆರೋಪಿಸಿದರು.
ಹೈಕಮಾಂಡ್ ಇಲ್ಲದ “ಕೈ”:
ಕಾಂಗ್ರೆಸ್ ಪಕ್ಷ ಎಷ್ಟು ದಿನ ಜೆಡಿಎಸ್‍ನೊಂದಿಗೆ ಸರ್ಕಾರದಲ್ಲಿ ಮುಂದುವರೆಯುತ್ತೋ, ಅಷ್ಟರ ಮಟ್ಟಿಗೆ ಅಧೋಗತಿಗೆ ಹೋಗಲಿದೆ. ಕಾಂಗ್ರೆಸ್‍ಗೆ ರಾಜ್ಯದಲ್ಲಿ ಹೈಕಮಾಂಡ್ ಇಲ್ಲವಾಗಿದೆ. ಹೀಗಾಗಿ ರಾಜ್ಯದ ಕಾಂಗ್ರೆಸ್ ನಾಯಕರು ಜೆಡಿಎಸ್ ವರಿಷ್ಠ ದೇವೇಗೌಡರ ಮಂಡಿಯೂರಿದ್ದಾರೆಂದು ಟೀಕಿಸಿದರು.
ಬೆಂಬಲ ವಾಪಾಸ್ ತಕ್ಕೊಳ್ಳಿ:
ನಾವು ಹೇಳುತ್ತಿಲ್ಲ, ಶಾಸಕ ಸತೀಶ್ ಜಾರಕಿಹೊಳಿ ಅವರೇ ಈ ಸರ್ಕಾರ ಟೇಕಪ್ ಆಗಿಲ್ಲ ಎಂದಿದ್ದಾರೆ. ಹೆಚ್.ಕೆ.ಪಾಟೀಲ್ ಅವರೇ ಸ್ವತಃ ಈ ಸರ್ಕಾರಕ್ಕೆ ಮೈಸೂರು, ಬೆಂಗಳೂರು ಹಾಗೂ ಹಾಸನ ಮಾತ್ರ ಕಾಣುತ್ತಿವೆ. ಉಳಿದ ಯಾವ ಜಿಲ್ಲೆಯೂ ಕಾಣುತ್ತಿಲ್ಲವೇ ಎಂಬುದಾಗಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‍ನವರಿಗೆ ಮಾನ, ಮರ್ಯಾದೆ ಇದ್ದರೆ, ತಕ್ಷಣವೇ ಜೆಡಿಎಸ್‍ಗೆ ಕೊಟ್ಟಿರುವ ಬೆಂಬಲವನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.
ಮುಂದುವರೆದ ಸರಣಿ ಆತ್ಮಹತ್ಯೆ:
ಹೊನ್ನಾಳಿ ತಾಲೂಕು ಒಂದರಲ್ಲೇ ಕಳೆದ ಎರಡು ದಿನಗಳಲ್ಲಿ ಸಾಲದ ಶೂಲಕ್ಕೆ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನಾಳಿ ದೊಡ್ಡಕೇರಿಯ ಅಣ್ಣಪ್ಪ, ಹಳೇ ಜೋಗದ ಹಾಲೇಶಪ್ಪ, ಕಮ್ಮರಗಟ್ಟೆ ತಾಂಡದ ಸಂತೋಷ್ ಎಂಬುವರು ಸಾಲದ ಶೂಲಕ್ಕೆ ಬಲಿಯಾಗಿದ್ದು. ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಆದರೆ, ರಾಜ್ಯ ಸರ್ಕಾರ ರೈತರ ಆತ್ಮಹತ್ಯೆ ತಡೆಗೆ ಮುಂದಾಗಿಲ್ಲ ಎಂದು ಆಪಾದಿಸಿದರು.
ಊರು ಬಿಟ್ಟ ರೈತ:
ಕೋಟೆ ಮಲ್ಲೂರಿನ ಬಸವರಾಜಪ್ಪ ಎಂಬ ರೈತ ಎಕ್ಸಿಸ್ ಬ್ಯಾಂಕಿನಿಂದ ಸಾಲ ಪಡೆದಿದ್ದರು. ಆದರೆ, ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಕಲ್ಲತ್ತಾದ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಬಂದಿರುವುದರಿಂದ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಸವರಾಜಪ್ಪ ಭಯಭೀತರಾಗಿ ಮನೆ ಬಿಟ್ಟು ಹೋಗಿದ್ದು, ಇಡೀ ಕುಟುಂಬದ ಸದಸ್ಯರು ಹುಡುಕುತ್ತಿದ್ದರೂ ಪತ್ತೆಯಾಗಿಲ್ಲ. ಹೀಗಾಗಿ ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ ಎಂದರು.
ಕಾಣೆಯಾಗಿರುವ ಮಂತ್ರಿಗಳು:
ಚುನಾವಣೆಯ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆಯೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, ಮುಖ್ಯಮಂತ್ರಿಯಾಗುವುದು ಅವರಿಗೆ ಗೊತ್ತೇ ಇರಲಿಲ್ಲ. ಲಾಟರಿ ಹೊಡೆದು ಸಿಎಂ ಆಗಿದ್ದಾರೆ. ಸಾಲ ಮನ್ನಾಕ್ಕೆ ಯಾವುದೇ ಪ್ರಯತ್ನ ಮಾಡಿರಲಿಲ್ಲ. ಯಡಿಯೂರಪ್ಪನವರು ರಾಜ್ಯಾದ್ಯಂತ ಹೋರಾಟ ನಡೆಸಿದ ಪರಿಣಾಮ ಸಾಲ ಮನ್ನಾ ಘೋಷಣೆ ಮಾಡಿ, ಯಾರಿಗೂ ಸಹ ಋಣಮುಕ್ತ ಪತ್ರ ಕೊಡಿಸದೆಯೇ, ರೈತರ ಸಾವಿಗೂ ನಮಗೂ ಸಂಬಂಧವಿಲ್ಲ ಎನ್ನುವರಂತೆ ದೇವಸ್ಥಾನ ಸುತ್ತುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಯಾವೊಬ್ಬ ಜಿಲ್ಲಾ ಮಂತ್ರಿಗಳು ಸಹ ಮೃತಪಟ್ಟ ರೈತರ ಮನೆ ಭೇಟಿ ನೀಡಿ ಸಾಂತ್ವಾನ ಹೇಳುತ್ತಿಲ್ಲ. ರಬ ಪರಿಶೀಲನೆ ಪ್ರವಾಸ ಕೈಗೊಳ್ಳುತ್ತಿಲ್ಲ. ವಿಧಾನ ಸೌಧದಲ್ಲಿಯೂ ಮಂತ್ರಿಗಳು ಸಿಗುತ್ತಿಲ್ಲ. ಆದ್ದರಿಂದ ಮಂತ್ರಿಗಳನ್ನು ಹುಡುಕಿ ಕೊಡಿ ಎಂಬುದಾಗಿ ಪೊಲೀಸರಿಗೆ ದೂರು ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದರು.
ಋಣಮುಕ್ತ ಮಾಡಿ:
ತಕ್ಷಣವೇ ಮುಖ್ಯಮಂತ್ರಿ ಕುಮಾರಸ್ವಾಮಿ ಕೊಟ್ಟ ಮಾತಿನಂತೆ ರೈತರ ಸಾಲ ಮನ್ನಾ ಮಾಡಿ, ರೈತರಿಗೆ ಋಣಮುಕ್ತ ಪತ್ರ ಕೊಡಿಸಬೇಕು. ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ಬೆಳಗಾವಿ ಅಧಿವೇಶನದಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನಾಗರಾಜ್, ಕಲ್ಕೆರೆ ಬಾಬು, ಚೋರಡಿ ಶಿವು, ಮಾರುತಿ ನಾಯ್ಕ ಮತ್ತಿತರರಿದ್ದರು.