ಬೆಂಗಳೂರು
ಹವಾಲ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 75,70,000 ಸಾವಿರ ನಗದು ಹಾಗೂ ಒಂದು ಹುಂಡೈ ಕ್ರೆಟಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಹೈದರಾಬಾದ್‍ನ ನಿಸ್ಸಾರ್ ಅಹಮದ್(35) ತಮಿಳುನಾಡಿನ ಊಟಿಯ ನಂದೀಶ್(52)ಬಂಧಿತ ಆರೋಪಿಗಳಾಗಿದ್ಧಾರೆ .ವಿ.ವಿ.ಪುರಂನ ಎಸ್‍ಬಿಐ ಬ್ಯಾಂಕ್‍ನ ಮುಂಭಾಗ ಒಂದು ಬಿಳಿ ಬಣ್ಣದ ಹುಂಡೈ ಕ್ರೆಟಾ ಕಾರಿನಲ್ಲಿ ಆರೋಪಿಗಳು ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸಂಘಟಿತ ರೀತಿಯಲ್ಲಿ ಬೆಂಗಳೂರಿನ ಕೆಲವು ವ್ಯಾಪಾರಿಗಳಿಂದ ಲಕ್ಷಗಟ್ಟಲೆ ಹಣವನ್ನು ಸಂಗ್ರಹ ಮಾಡಿ ಹವಾಲ ಮೂಲಕ ಹೊರ ರಾಜ್ಯದ ವ್ಯಾಪಾರಿಗಳಿಗೆ ಕಳುಹಿಸುತ್ತಾ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಆರೋಪಿಗಳಿಂದ ಹವಾಲ ದಂಧೆಯಲ್ಲಿ ಸಂಗ್ರಹಿಸಿದ್ದ ನಗದು ಹಣ ರೂ.75,70,000/-, ಒಂದು ಹುಂಡೈ ಕ್ರೆಟಾ ಕಾರು, ಒಂದು ಕಪ್ಪುಬಣ್ಣದ ಬ್ಯಾಗ್‍ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.ಹೈದ್ರಾಬಾದ್‍ನ ಮುಜಾಹಿದ್ ಆಲಂ ಖಾನ್ ಇತ್ತೀಚೆಗೆ ಊಟಿಯಲ್ಲಿ ಒಂದು ಬಂಗ್ಲೆಯನ್ನು ರೂ 7 ಕೋಟಿ 15 ಲಕ್ಷಕ್ಕೆ ಖರೀದಿಸಿದ್ದು ಅದನ್ನು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ನಂದೀಶ್ ರವರಿಗೆ ಕಮೀಷನ್ ಹಣವನ್ನು ಬ್ಲಾಕ್‍ಮನಿ ಮೂಲಕ ಕೊಡಬೇಕಾಗಿದ್ದರಿಂದ ಬೆಂಗಳೂರಿನಲ್ಲಿರುವ ಹವಾಲ ಬ್ರೋಕರ್ ದಿನೇಶ್ ಎಂಬುವವನಿಂದ ಕಮೀಷನ್ ಮೂಲಕ ಹಣವನ್ನು ವ್ಯವಹರಿಸಲು ಒಪ್ಪಿ, ಅದರಂತೆ ನಿಸ್ಸಾರ್‍ನನ್ನು ಬೆಂಗಳೂರಿನಲ್ಲಿ ದಿನೇಶ್ ರವರನ್ನು ಸಂಪರ್ಕಿಸಲು ತಿಳಿಸಿದ್ದರಿಂದ ನಿಸ್ಸಾರ್ ಬೆಂಗಳೂರಿಗೆ ಬಂದು ನಂದೀಶ್ ರವರನ್ನು ಸಂಪರ್ಕಿಸಿ ಅವರ ಕಾರಿನಲ್ಲಿ ವಿ.ವಿ.ಪುರಂ ನಲ್ಲಿ ದಿನೇಶ್ ಮೂಲಕ 75 ಲಕ್ಷ ರೂಗಳನ್ನು ಹವಾಲ ಮೂಲಕ ಪಡೆದುಕೊಂಡಿದ್ದುದಾಗಿ ವಿಚಾರಣೆಯಿಂದ ತಿಳಿದುಬಂದಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
