ತಿಪಟೂರು
ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದ್ದು ಅವ್ಯಾವಹತವಾಗಿ ನಡೆಯುತ್ತಿರುವ ಮರಳು ದಂಧೆಗೆ ಸೋಮವಾರ ತಡರಾತ್ರಿ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿ ಇಂದು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಪರುವಗೊಂಡನಹಳ್ಳಿಯಲ್ಲಿ ಸೋಮವಾರ ರಾತ್ರಿ ಸುಮಾರು 55 ವರ್ಷ ವಯಸ್ಸಿನ ಕಾಂತರಾಜು ಅಪಾಯದ ಮುನ್ಸೂಚನೆಯಿಲ್ಲದೆ ರಾತ್ರಿಹೊತ್ತು ಸಿಗುವ ಹಣಕ್ಕೆ ಆಸೆ ಬಿದ್ದು ರಾತ್ರಿ ಟ್ರ್ಯಾಕ್ಟರ್ ಓಡಿಸಲು ಹೋಗಿ ಗುಂಡಿಯನ್ನು ಹತ್ತಿಸುವ ಬರದಲ್ಲಿ ಟ್ರ್ಯಾಕ್ಟರ್‍ನ ಇಂಜಿನ್ ಮಗುಚಿ ಬಿದ್ದಿದ್ದರಿಂದ ಎಂಜಿನ್ ಅಡಿಗೆ ಸಿಲುಕಿ ಮೃತಪಟ್ಟಿದ್ದಾನೆ.
ಈ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ವರದಿಗಳು ಸರಣಿ ಲೇಖನಗಳು ಬಂದಿವೆ. ಆದರೂ ತಾಲ್ಲೂಕು ಆಡಳಿತವಾಗಲಿ ಆರಕ್ಷಕ ಇಲಾಖೆಯಾಗಲಿ ವರದಿಗಳು ಬಂದ ದಿನಗಳಲ್ಲಿ ಸ್ಥಳ ಪರಿಶೀಲಿಸಿ ಇನ್ನು ಮುಂದೆ ಮರಳು ತೆಗೆಯುವಂತಿಲ್ಲವೆಂದು ಹೇಳಿ ಬರುತ್ತಾರೆ. ಆದರೆ ಇದು ತಾಲ್ಲೂಕು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದ್ದು ಈಗಲಾದರೂ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ಕೆರೆಗಳ ಹತ್ತಿರ ಸೂಕ್ತವಾದ ಪೊಲೀಸ್ ಪಹರೆಯನ್ನು ಹಾಕಿಸಿ ಇನ್ನಾದರೂ ಕೂಲಿ ಆಸೆಗೆ ಬರುವ ಅಮಾಯಕರ ಪ್ರಾಣವನ್ನು ಉಳಿಸುವ ಜವಾಬ್ದಾರಿ ತಾಲ್ಲೂಕು ಆಡಳಿತದ ಮೇಲಿದೆ.