ನನ್ನ ಪ್ರಕಾರ ಜೆಡಿಎಸ್ ಪಕ್ಷವೇ ಅಲ್ಲ: ಸಿದ್ದರಾಮಯ್ಯ

ಬೆಂಗಳೂರು

      ಜೆಡಿಎಸ್ ಪಕ್ಷದವರು ಯಾವತ್ತೂ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ಅವರು ಬೇರೆಯವರ ಕುದುರೆ ಮೇಲೆ ಏರಿ ಬಂದು ಅಧಿಕಾರಕ್ಕೆ ಬರುವವರು. ನನ್ನ ಪ್ರಕಾರ ಜೆಡಿಎಸ್ ಎನ್ನುವುದು ರಾಜಕೀಯ ಪಕ್ಷವೇ ಅಲ್ಲ ಎಂದು ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಉಪಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲ. ಕೆಲವು ಬಾರಿ ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.

    ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ. ಜೊತೆ ಕಾಂಗ್ರೆಸ್‍ನದ್ದು ನೇರ ಹೋರಾಟವಾಗಿದ್ದು, ಬಿಜೆಪಿಯೊಂದಿಗೆ ಜೆಡಿಎಸ್ ನಾಯಕರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಎಲ್ಲರೂ ಸೇರಿ ಬಿಜೆಪಿ, ಜೆಡಿಎಸ್ ಅನ್ನು ಸೋಲಿಸಬೇಕು ಎಂದು ಕರೆ ನೀಡಿದರು.

ಕುಮಾರ ಸ್ವಾಮಿ ಕಣ್ಣೀರು ಹಾಕಿ ಭಾವನಾತ್ಮಕವಾಗಿ ಜನರ ಸೆಳೆಯುವ ಕೆಲಸ ಮಾಡಬಾರದು. ಅವರ ನಾಟಕ ದೇವೇಗೌಡರ ಕಾಲದಿಂದಲೂ ಇದೆ. ದೇವೇಗೌಡರ ಕಣ್ಣೀರಿನ ನಾಟಕವನ್ನೇ ಕುಮಾರಸ್ವಾಮಿ ಮುಂದುವರೆಸಿದ್ದಾರೆ ಎಂದು ಸಿದ್ದರಾಮಯ್ಯ ಕುಟುಕಿದರು.

ಶಿರಾ ಮತ್ತು ರಾಜರಾಜೇಶ್ವರಿ ನಗರ ಎರಡೂ ಕ್ಷೇತ್ರಗಳ ಅವಧಿ ಇನ್ನೂ ಎರಡೂವರೆ ವರ್ಷ ಇತ್ತು. ಶಿರಾದಲ್ಲಿ ಸತ್ಯಾನಾರಾಯಣ ಅವರ ಅಕಾಲಿಕ ಮರಣದಿಂದ ಈಗ ಉಪ ಚುನಾವಣೆ ಎದುರಾಗಿದೆ. ಕಳೆದ ಬಾರಿ ಜಯಚಂದ್ರ 10 ಸಾವಿರ ಮತಗಳ ಅಂತರದಿಂದ ಸೋಲು ಅನುಭಸಿದ್ದರು. ಈ ಬಾರಿ ಅವರು ಗೆಲ್ಲಲಿದ್ದಾರೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಯಡಿಯೂರಪ್ಪ ಆರಂಭದಲ್ಲಿ ಮುಖ್ಯಮಂತ್ರಿ ಆಗಿದ್ದರೂ ಅವರಿಗೆ ಬಹುಮತ ಸಾಬೀತುಪಡಿಸಲು ಆಗಲಿಲ್ಲ. ನಂತರ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ಮಾಡಿದೆವು. ಕುಮಾರಸ್ವಾಮಿಗೆ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಯಡಿಯೂರಪ್ಪ ಕಾಂಗ್ರೆಸ್ ಜೆಡಿಎಸ್ ಶಾಸಕರಿಗೆ ನೂರಾರು ಕೋಟಿ ರೂ. ಖರ್ಚು ಮಾಡಿ ಪಕ್ಷಕ್ಕೆ ಸೆಳೆದುಕೊಂಡರು. ಅವರು ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದಾರೆ. ಅವರು ಇನ್ನೂ ಎರಡೂವರೆ ವರ್ಷ ಇರುತ್ತೇವೆ ಎಂದುಕೊಂಡಿದ್ದಾರೆ. ನಮಗೆ ಈ ಉಪ ಚುನಾವಣೆ ಅಗತ್ಯವಿರಲಿಲ್ಲ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.

ಬಹಳ ಜನರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಶಿರಾ ಬಾರ್ ಅಸೋಸಿಯೇಷನ್‍ನ 90 ಕ್ಕೂ ಹೆಚ್ಚು ವಕೀಲರು ಕಾಂಗ್ರೆಸ್ ಸೇರಿರುವುದು ಒಳ್ಳೆಯ ಬೆಳವಣಿಗೆ. ಶಿರಾದಲ್ಲಿ ಜಿಲ್ಲಾ ನ್ಯಾಯಾಲಯ ಮಾಡಬೇಕು ಎಂಬ ಬೇಡಿಕೆಗೆ ನಮ್ಮ ಬೆಂಬಲ ಇದೆ. ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಈ ಉಪ ಚುನಾವಣೆಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸಬೇಕು ಎಂದರು.

ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ಸಾಲ ಹೆಚ್ಚಾಗಿದ್ದು, 4 ಲಕ್ಷ ಕೋಟಿ ಸಾಲ ಆಗಿದೆ. ಪ್ರತಿ ವರ್ಷ 23 ಸಾವಿರ ಕೋಟಿ ಬಡ್ಡಿ ಕಟ್ಟುತ್ತಿದ್ದೇವೆ. ಭ್ರಷ್ಟಾಚಾರ ಜನವಿರೋಧಿ ನೀತಿಗಳಲ್ಲಿ ಬಿಜೆಪಿ ಸರ್ಕಾರ ತೊಡಗಿದ್ದು ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap