ಡಿ.2ರಂದು ಕರಿಬಸವೇಶ್ವರ ಸ್ವಾಮಿ ರಥೋತ್ಸವ

ದಾವಣಗೆರೆ:

      ಸಮೀಪದ ಯರಗುಂಟೆಯ ಶ್ರೀಗುರು ಕರಿಬಸವೇಶ್ವರ ಸ್ವಾಮಿಯ ಗದ್ದಿಗೆ ಮಠದಲ್ಲಿ ಡಿಸೆಂಬರ್ 2ರಂದು ಶ್ರೀಕರಿಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದೆ ಎಂದು ಮಠದ ಶ್ರೀಪರಮೇಶ್ವರ ಸ್ವಾಮೀಜಿ ತಿಳಿಸಿದರು.

     ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥೋತ್ಸವದ ಪ್ರಯುಕ್ತ ಡಿ.1ರಂದು ಬ್ರಾಹ್ಮಿ ಮುಹೂರ್ತದಲ್ಲಿ ಬೆಳಿಗ್ಗೆ 5 ಗಂಟೆಗೆ ಶ್ರೀವಿನಾಯಕ ಸ್ವಾಮಿ ಪೂಜೆ, ಧ್ವಜಾರೋಹಣ ನೆರವೇರಲಿದೆ. ಬೆಳಿಗ್ಗೆ 6 ಗಂಟೆಗೆ ಮಹಾಗಣಪತಿ ಪೂಜೆ, ನವಗ್ರಹ ಪೂಜೆ, ರುದ್ರಹೋಮ, ಮಹಾಮಂಗಳಾರತಿ ನೆರವೇರಲಿದೆ. ರಾತ್ರಿ 9.35ರಿಂದ ಶ್ರೀಮಠದಿಂದ ಅರಿಶಿಣ ಎಣ್ಣೆ ಕಾರ್ಯಕ್ರಮ, 10.30ಕ್ಕೆ ಗ್ರಾಮದ ಎ.ಡಿ.ಬಸಪ್ಪ ದಳಪತಿ ಅವರ ಮನೆಯಿಂದ ರಥದ ಕಳಸವನ್ನು ಶ್ರೀಮಠಕ್ಕೆ ತಂದು ಕಳಸಾರೋಹಣ ಮಾಡಲಾಗುವುದು. ನಂತರ ಹರಿಹರ ತಾಲೂಕಿನ ಕೆ.ಬೇವಿನಹಳ್ಳಿಯ ಶ್ರೀಕಾಶಿವಿಶ್ವನಾಥ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ ಎಂದು ಮಾಹಿತಿ ನೀಡಿದರು.

      ಡಿ.2ರಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ಹಾಗೂ ಕೊಟ್ಟೂರಿನ ಶ್ರೀಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದ ಸಮ್ಮುಖವನ್ನು ತಾವರಕೆರೆ ಶಿಲಾಮಠದ ಶ್ರೀಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ನೇತೃತ್ವವನ್ನು ಚನ್ನಗಿರಿ ಹಿರೇಮಠದ ಶ್ರೀಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ವಹಿಸುವರು. ಹಗರಿಬೊಮ್ಮನಹಳ್ಳಿ ಹಾಲಸ್ವಾಮಿ ಮಠದ ಶ್ರೀಹಾಲಶಂಕರ ಸ್ವಾಮೀಜಿ, ಶಿರಾದ ಮೌಲ್ವಿ ಹಜರತ್ ಸೈಯದ್ ಖಾದರ್ ಷಾ ಖಾದ್ರಿ, ಗಂಗಾವತಿಯ ಎಸ್.ಬಿ.ಖಾದ್ರಿ ಉಪಸ್ಥಿತರಿರಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಪಾಲಿಕೆ ಸದಸ್ಯ ಎಸ್.ಬಸಪ್ಪ, ನಗರಸಭಾ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಕಾಂಗ್ರೆಸ್ ಮುಖಂಡ ಮುದೇಗೌಡ್ರು ಗಿರೀಶ್, ಕಳಸಪ್ಪರ ಚನ್ನಬಸಪ್ಪ, ಮಹಾಂತೇಶ್ ಶಾಸ್ತ್ರೀ, ಹೆಚ್.ಬಿ.ಬಸವರಾಜಪ್ಪ, ತೆಲಿಗಿ ಮಲ್ಲಿಕಾರ್ಜುನ್ ಮತ್ತಿತರರು ಭಾಗವಹಿಸಲಿದ್ದಾರೆಎಂದು ಮಾಹಿತಿ ನೀಡಿದರು.

      ವೇದಿಕೆ ಕಾರ್ಯಕ್ರಮ ಮುಕ್ತಾಯವಾದ ನಂತರ ಮಧ್ಯಾಹ್ನ 1 ಗಂಟೆಗೆ ನಡೆಯುವ ಶ್ರೀಗುರು ಕರಿಬಸವೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಮಹಿಳೆಯರೇ ಹೂವಿನ ತೇರು ಎಳೆಯುವುದು ವಿಶೇಷವಾಗಿದೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.

       ಸುದ್ದಿಗೋಷ್ಠಿಯಲ್ಲಿ ಮಠದ ಅಧ್ಯಕ್ಷ ನಾರಪ್ಪ, ಉಪಾಧ್ಯಕ್ಷ ಬಿ.ಆರ್.ಚನ್ನಬಸಪ್ಪ, ಕಾರ್ಯದರ್ಶಿ ಬಿ.ಡಿ.ಬಸವರಾಜಪ್ಪ, ಎನ್.ಎಸ್.ರಾಜು, ಕರಿಬಸಪ್ಪ, ಮಂಜುನಾಥ್, ವಿಜಯ್, ವಿರೂಪಾಕ್ಷಿ, ರಾಕೇಶ್, ಪ್ರಭು ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link