ಚಳ್ಳಕೆರೆ
ನ್ಯಾಯಾಂಗದ ಇತಿಹಾಸದಲ್ಲಿ ಪ್ರತಿಯೊಬ್ಬ ವಕೀಲರು ಸಹ ತಮ್ಮ ಕಕ್ಷಿದಾರರ ಹಿತವನ್ನು ಕಾಪಾಡುವುದಲ್ಲದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಂಗದ ಚೌಕಟ್ಟಿನಲ್ಲೇ ಹೋರಾಟ ನಡೆಸುತ್ತಾ ಬಂದಿದ್ಧಾರೆ. ಆದರೆ, ವಕೀಲ ವೃತ್ತಿಯ ಘನತೆ, ಗೌರವ ಕಾಪಾಡುವ ನಿಟ್ಟಿನಲ್ಲಿ ಕಕ್ಷಿದಾರರ ಹಿತವನ್ನು ನಿರ್ಲಕ್ಷಿಸಲಾಗದು. ಆದರೆ, ತನ್ನ ವಿರುದ್ದ ವಕೀಲನೊಬ್ಬ ಧ್ವನಿ ಎತ್ತುತ್ತಾನೆಂಬ ಕೋಪದಿಂದ ವಕೀಲನನ್ನೇ ದುಷ್ಕರ್ಮಿಗಳು ಕೊಲೆ ಮಾಡಿದ ಪ್ರಕರಣವನ್ನು ತಾಲ್ಲೂಕು ವಕೀಲರ ಸಂಘ ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ ತಿಳಿಸಿದ್ಧಾರೆ.
ಅವರು, ಶುಕ್ರವಾರ ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಾಲ್ಲೂಕು ವಕೀಲರ ಸಂಘದ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವವನ್ನು ವಹಿಸಿ ಮಾನ್ಯ ತಹಶೀಲ್ದಾರ್‍ಗೆ ಮನವಿ ಅರ್ಪಿಸುವ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಿಂದಗಿ ವಕೀಲರಾದ ದತ್ತು ಲಕ್ಷ್ಮಣ ಬಂಡಿ ವಡ್ಡಾರ್‍ರವರನ್ನು ಅಲ್ಲಿನ ದುಷ್ಕರ್ಮಿಗಳು ಅ.31ರ ಸಂಜೆ ಮನೆಗೆ ಹೋಗುವ ಯತ್ನದಲ್ಲಿದ್ದಾಗ ತಡೆದು ಕೊಲೆ ಮಾಡಿರುತ್ತಾರೆ. ವಕೀಲರಿಗೆ ರಕ್ಷಣಯೇ ಇಲ್ಲದಂತಾಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಅವರು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೇದಾರ್ ಚಂದ್ರಶೇಖರ್, ಜಿಲ್ಲಾಧಿಕಾರಿಗಳ ಮೂಲಕ ತಮ್ಮ ಮನವಿಯನ್ನು ಮುಂದಿನ ಆದೇಶಕ್ಕಾಗಿ ಸರ್ಕಾರಕ್ಕೆ ಕಳುಹಿಸಿಕೊಡುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಹಿರಿಯ ನ್ಯಾಯವಾದಿಗಳಾದ ಜಿ.ಎಸ್.ಶರಣಪಯ್ಯ, ಮಧುರೆ ಆನಂದಪ್ಪ, ಎಂ.ಎಸ್.ರಾಜಾರಾಂ, ಪ್ರಭಾಕರ, ಎಂ.ಎಸ್.ಶಿವಣ್ಣ, ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ.ಬೋರಯ್ಯ, ಪ್ರಧಾನ ಕಾರ್ಯದಶಿ ಕೆ.ಹನುಮಂತಪ್ಪ, ಜಂಟಿ ಕಾರ್ಯದರ್ಶಿ ಬಿ.ಟಿ.ಗುರುಮೂರ್ತಿ, ಖಜಾಂಚಿ ಡಿ.ಜಯಶೀಲರೆಡ್ಡಿ, ಕೆ.ಗುರುಸ್ವಾಮಿ, ಜಿ.ಅರವಿಂದ, ಎನ್.ತಿಪ್ಪೇಸ್ವಾಮಿ, ಆರ್.ಶಿವಮೂರ್ತಿ, ಡಿ.ಶ್ರೀನಿವಾಸ್, ಕುರುಡಿಹಳ್ಳಿ ಶ್ರೀನಿವಾಸ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
