ದಾವಣಗೆರೆ
ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಬಯಸಿಲ್ಲ, ಈ ಕ್ಷೇತ್ರದ ನಮ್ಮ ಸಮುದಾಯದ ಜನರ ಅಪೇಕ್ಷೆಯಾಗಿದೆ. ಶಾಮನೂರು ಕುಟುಂಬದಿಂದ ಸ್ಪರ್ಧಿಸಿದರೆ ನಾವು ಯಾವುದೇ ಅಡ್ಡಿ ಪಡಿಸಲ್ಲ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಚನ್ನಗಿರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಶಾಮನೂರು ಮನೆತನಕ್ಕೆ ಟಿಕೇಟ್ ಕೊಟ್ಟುಕೊಂಡು ಬಂದಿದೆ. ಹೀಗಾಗಿ ಆ ಮನೆತನದವರು ನಿಂತರೆ ನಾವು ಯಾವುದೇ ಅಡ್ಡಿ ಮಾಡಲ್ಲ. ಅಕಸ್ಮಾತ್ ನಿಲ್ಲದಿದ್ದರೆ, ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತೋ ಅದಕ್ಕೆ ಬದ್ಧನಾಗಿರುತ್ತೇವೆ ಎಂದರು.
ಹಿಂದೆ ನಮ್ಮ ಸಮುದಾಯದ ಚನ್ನಯ್ಯ ಒಡೆಯರ್ ಅವರು ಸತತವಾಗಿ ಗೆದ್ದು ಬಂದಿದ್ರು. ಹೀಗಾಗಿ ಕಳೆದ ಕೊಂಡಿರುವ ಎಂಪಿ ಸ್ಥಾನವನ್ನು ಮತ್ತೆ ಪಡೆಯಬೇಕೆಂಬುದು ನಮ್ಮ ಸಮಾಜದವರ ಭಾವನೆಯಾಗಿದೆ. ಈ ಬಗ್ಗೆ ಈಗಾಗಲೇ ಪಕ್ಷದ ಹೈಕಮಾಂಡ್ ಗಮನಕ್ಕೂ ಹೋಗಿದ್ದು, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ರಾಜ್ಯಾದ್ಯಂತ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಮೋದಿ ಅಲೆ ಕಡಿಮೆಯಾಗಿದ್ದು, ದೇಶಾದ್ಯಂತ ಮಹಾಘಟಾಬಂಧನ್ ನಡೆಯುತ್ತಿದೆ. ಇತ್ತೀಚೆಗೆ ಪಂಚರಾಜ್ಯಗಳ ಚುನಾವಣೆಯಲ್ಲಿ ನಾವು ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ದಳ ಒಂದಾಗಿರುವುದರಿಂದ ಹೆಚ್ಚು ಲಾಭದಾಯಕವಾಗಲಿದೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮಧ್ಯೆ ಚರ್ಚೆ ನಡೆದಿದ್ದು, ಸೀಟು ಹಂಚಿಕೆಯ ಬಗ್ಗೆ ತೀರ್ಮಾನವಾಗಲಿದೆ ಎಂದರು.
ಕರ್ನಾಟಕ ಕುರುಬರ ಸಾಂಸ್ಕತಿಕ ಪರಿಷತ್ ಆಶ್ರಯದಲ್ಲಿ ಕರ್ನಾಟಕ ಕುರುಬರ ಸಂಸ್ಕøತಿ ದರ್ಶನ ಮಾಲಿಕೆಯನ್ನು ಸಮಾಜದ ಎಲ್ಲಾ ಪ್ರಕಾರಗಳನ್ನು ಒಳಗೊಂಡಂತೆ 15 ಗ್ರಂಥಗಳನ್ನು ಬರೆಸಲುದ್ದೇಶಿಸಲಾಗಿದ್ದು, ಈಗಾಗಲೇ 10 ಗ್ರಂಥಗಳ 13 ಸಂಪುಟ ತಯಾರಾಗಿದ್ದು, ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಗಿದೆ.
ಇದನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಮುಂದಾಗಿದ್ದು, ಈ ಪುಸ್ತಕಗಳ ಮಾರಾಟದಿಂದ ಬರುವ ಹಣವನ್ನು ಸಮಾಜದ ಮಹಿಳೆಯರು ಮತ್ತು ಯುವಕರ ಸಬಲೀಕರಣಕ್ಕಾಗಿ ಮತ್ತು ಯುವ ಸಾಹಿತಿಗಳಿಗಾಗಿ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಚನ್ನಗಿರಿಯಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಹಾಗೂ ಕನಕ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು, ಸರ್ಕಾರದಿಂದ ಬಿಡುಗಡೆ ಆಗಬೇಕಾದ ಅನುದಾನವನ್ನು ಆದಷ್ಟು ಬೇಗೆ ಬಿಡುಗಡೆ ಮಾಡಿಸಿಕೊಡುತ್ತೇನೆ. ಅಲ್ಲದೆ, ನನ್ನ ಅನುದಾನದಲ್ಲಿ 5 ಲಕ್ಷ ರೂ. ಅನುದಾನ ನೀಡುತ್ತೇನೆ. ಈ ಹಣದಲ್ಲಿ ಮಾತ್ರ ಎಲ್ಲವನ್ನೂ ಮಾಡಲಾಗುವುದಿಲ್ಲ. ಅಡಿಕೆ ನಾಡಿನ ಸಮಾಜ ಬಾಂಧವರು ದೇಣಿಗೆ ನೀಡಬೇಕೆಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಪಿ.ರಾಜಕುಮಾರ್, ಬಾಡದ ರವಿ, ರೇವಣ್ಣ, ಚಂದ್ರು, ಬಸವರಾಜ್, ಗೋಪಿ, ಅಪ್ಸರ ರಾಜಣ್ಣ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
