ತಿಪಟೂರು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಸಂಘಟನೆಯನ್ನು ತೋರಿಸುವ ಕಾಲ ಸನ್ನಿಹಿತವಾಗಿದೆ ಎಂದು ವಿಧಾನ ಪರಿಷತ್‍ನ ಮುಖ್ಯ ಸಚೇತಕ ಚೌಡರೆಡ್ಡಿ ತೂಪಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದರು.ನಗರದ ಗುರುಲೀಲಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಪ್ರಥಮವಾಗಿ ಕಾರ್ಯಕರ್ತರ ಸಭೆ ಮತ್ತು ಸನ್ಮಾನ ಸಮಾರಂಭವನ್ನು ಏರ್ಪಡಿಸಿರುವುದು ಇಲ್ಲಿ ವಿಧಾನಸಭೆಯ ಪರಾಜಿತ ಅಭ್ಯರ್ಥಿ ಎಂಬುದನ್ನು ಮರೆತು ಸೋಲೆ ಗೆಲುವಿನ ಸೋಪಾನವೆಂಬಂತೆ ಕಾರ್ಯಕರ್ತರನ್ನು ಒಗ್ಗೂಡಿಸಿಕೊಳ್ಳುತ್ತಿದ್ದಾರೆ. ಇವರ ಕಾರ್ಯವನ್ನು ನಾವೆಲ್ಲರೂ ಅವರಂತೆ ನಾವು ಸಹ ಒಗ್ಗಟ್ಟಿನಿಂದ ಪಕ್ಷದ ಏಳಿಗೆಗೆ ದುಡಿಯಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತುಮಕೂರು ಗ್ರಾಮಾಂತರದ ಮಾಜಿ ಶಾಸಕ ಹೆಚ್.ನಿಂಗಪ್ಪ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಹೇಳಿ ಅಧಿಕಾರ ಹಿಡಿದ, ಕೋಮುವಾದಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವನ್ನು ಕಿತ್ತೊಗೆಯಬೇಕು. ಇದಕ್ಕಾಗಿ ನೀವೆಲ್ಲಾ ಜೆಡಿಎಸ್ ಅನ್ನು ಬಲಗೊಳಿಸುವ ಕಾರ್ಯವನ್ನು ಮಾಡಬೇಕು. ಸುಳ್ಳಿನ ಕಂತೆಯನ್ನು ಕಟ್ಟಿ, ದೇಶದ ಜನರ ನಂಬಿಕೆ ದ್ರೋಹ ಮಾಡಿ, ಆರ್ಥಿಕವಾಗಿ ಹಿಂದುಳಿಯುವಂತೆ ಮಾಡಿದ್ದಾರೆ.
ನೂರಾರು ಬಡವರ ಸಾವಿಗೆ ಕಾರಣವಾಗುವಂತೆ ಮಾಡಿದ ನೋಟಿನ ಡಿಮಾನಿಟೈಸೇಷನ್, ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆಂದು ಹೇಳಿ ಅಧಿಕಾರಕ್ಕೆ ಬಂದು, ಅಧಿಕಾರವನ್ನು ಅನುಭವಿಸಿ ಇನ್ನೇನು ಅಧಿಕಾರಾವಧಿ ಮುಗಿಯುತ್ತಿದೆ ಎನ್ನುವಾಗ ಹಸಿದವರ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ರೈತರಿಗೆ 6 ಸಾವಿರ ರೂಪಾಯಿಗಳನ್ನು ಕೊಡುತ್ತಿರುವ ಮೋದಿ ಬೇಕೋ ಅಥವಾ ತನ್ನೊಂದಿಗೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಋಣಮುಕ್ತ ಪತ್ರನೀಡಿ, ಬಡವರ ಪರವಾಗಿ ಮತ್ತು ಬೀದಿಪದಿ ವ್ಯಾಪಾರಿಗಳಿಗೆ ಯಾವುದೇ ಷರತುಗಳಿಲ್ಲದೇ 10 ಸಾವಿರ ಸಾಲವನ್ನು ನೀಡುತ್ತಿರುವ ರೈತರ ಮಿತ್ರನಾದ ಕುಮಾರಣ್ಣ ಬೇಕೋ ಎಂದು ನೀವೇ ನಿರ್ಧರಿಸಿ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜೆಡಿಎಸ್ ಮುಖಂಡ ಲೋಕೇಶ್ವರ್, ಕಾರ್ಯಕರ್ತರಾದ ನೀವುಗಳು ಜನತೆಗೆ ಬಿಜೆಪಿಯವರು ಹೇಳುತ್ತಿರುವ ಸುಳ್ಳನ್ನು ಬಿಡಿಸಿ ಸತ್ಯಾಂಶವನ್ನು ತಿಳಿಸಿ, ಅವರಿಗೆ ತಿಳಿಸುವಂತೆ ನೀವುಗಳೂ ಪ್ರಜ್ಞಾವಂತರಾಗಬೇಕು. ಇತ್ತೀಚೆಗೆ ನಡೆದ ಸೈನಿಕರ ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್‍ಸ್ಟ್ರೈಕ್‍ಗಳನ್ನು ತಮ್ಮದೇ ಸಾಧನೆ ಎಂಬಂತೆ ಬಿಂಬಿಸಿ ಕೊಳ್ಳುತ್ತಿರುವ ಮೋದಿ ಸರ್ಕಾರಕ್ಕೆ ನಾಚಿಕೆ ಗೇಡಿನ ಸಂಗತಿಯಾಗಿದೆ. ಇದನ್ನೇ ವಿಶ್ವಸಂಸ್ಥೆಯ ಮುಂದೆ ಇಟ್ಟು ಪಾಕಿಸ್ತಾನವು ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಶತ್ರು ರಾಷ್ಟ್ರಕ್ಕೆ ಇಂತಹ ಅವಕಾಶಗಳನ್ನು ಮಾಡಿಕೊಡುತ್ತಿರುವ ಕೋಮುವಾದಿ ಬಿಜೆಪಿಯ ಬಣ್ಣವನ್ನು ಬಯಲು ಮಾಡಿದೆ. ಇನ್ನು ತಾಲ್ಲೂಕಿನ ಬಗ್ಗೆ ಹೇಳಬೇಕೆಂದರೆ ಅನುದಾನಗಳನ್ನು ತರಿಸಿಕೊಳ್ಳಲು ಸಾಧ್ಯವಾಗದೆ, ಕೇವಲ ಗ್ರಾಮಸಭೆಗಳನ್ನು ಮಾಡಿಕೊಂಡು ಓಡಾಡುತ್ತಿರುವ ಶಾಸಕ ಸೂಕ್ತವಾಗಿ ಆಡಳಿತ ಮಾಡುತ್ತಿರುವ ಮಹಿಳಾ ಅಧಿಕಾರಿಗಳನ್ನು ಹೆದರಿಸಲು ಹೋಗುತ್ತಾರೆ. ಆದರೆ ಪ್ರಾಮಾಣಿಕ ಅಧಿಕಾರಿಗಳ ಹಿಂದೆ ನಾವಿದ್ದೇವೆ ಎಂದು ಶಾಸಕರಿಗೆ ಕಿವಿಮಾತನ್ನು ಹೇಳಿದ ಅವರು, ಇದೇ ಪ್ರಥಮ ಬಾರಿಗೆ ಹೇಮಾವತಿ ನಾಲೆಯಲ್ಲಿ 6 ತಿಂಗಳು ನೀರು ಹರಿದರೂ ಕೇವಲ ತಿಪಟೂರು ಕೆರೆಗೆ ಕೋಡಿ ಬೀಳುವಷ್ಟು ನೀರನ್ನು ತುಂಬಿಸಲಾಗಲಿಲ್ಲ.
ಇಂತಹ ಶಾಸಕರು ಇನ್ನುಳಿದ ಕೆರೆಗಳನ್ನು ಹೇಗೆ ತುಂಬಿಸಬಹುದು? ತಾಲ್ಲೂಕಿನ ಅಭಿವೃದ್ಧಿಯೂ ಶೂನ್ಯವಾಗುತ್ತಿದೆ ಎಂದು ಶಾಶಕರ ಮೇಲೆ ಹರಿಹಾಯ್ದರು. ಆದ್ದರಿಂದ ನಮ್ಮ ಕಾರ್ಯಕರ್ತರುಗಳು ಮುಂಬರುವ ಲೋಕಸಭೆ ಮತ್ತು ನಗರಸಭೆ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನವ ಭಾರತ ಮತ್ತು ನವ ತಿಪಟೂರನ್ನು ಕಟ್ಟೋಣವೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾರ್ಯಕರ್ತರ ಸಭೆಯಲ್ಲಿ ಜೆ.ಡಿ.ಎಸ್ ಎಸ್.ಟಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಜಕ್ಕನಹಳ್ಳಿ ಲಿಂಗರಾಜು, ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಸೊಪ್ಪು ಗಣೇಶ್, ಕಾರ್ಯಾಧ್ಯಕ್ಷ ಶಿವಸ್ವಾಮಿ, ತರಕಾರಿ ನಾಗರಾಜು, ಜೆ.ಡಿ.ಎಸ್‍ನ ತಾ.ಪಂ, ನಗರಸಭೆ, ಎ.ಪಿ.ಎಂ.ಸಿ ಸದಸ್ಯರುಗಳು ಮತ್ತಿತರಿದ್ದರು.