ಎಲ್ಲಡೆ ಮಹಾಶಿವರಾತ್ರಿ ಸಂಭ್ರಮ :ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಚಿತ್ರದುರ್ಗ;

        ಇಂದು ನಾಡಿನೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ.ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ಶಿವಾಲಯಗಳಲ್ಲಿ ಜಾತ್ರೆ, ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಗಳು ಭಕ್ತಿ, ಸಂಭ್ರಮದಿಂದ ನಡೆಯುತ್ತಿವೆ.

          ಭೀಕರ ಬರಗಾಲ ಕುಡಿಯಲು ನೀರಿಲ್ಲ ಊಟ ಮಾಡಲು ಧವಸ ಧಾನ್ಯ ಇಲ್ಲ. ಓ ಶಿವನೆ ಬಿಸಿಲು ಕಡಿಮೆ ಮಾಡಿ ಬರದ ನಾಡಿಗೆ ಗಂಗೆ ಹರಿಸು ಎಂದು ರೈತಾಪಿ ವರ್ಗದವರು ಮಹಾಶಿವರಾತ್ರಿ ದಿನವಾದ ಸೋಮವಾರ ಶಿವನ ಧ್ಯಾನ ಮಾಡುವ ಮೂಲಕ ಪ್ರಾರ್ಥಿಸಿದರು.

        ಮೇಲುದುರ್ಗದಲ್ಲಿ ನೆಲೆಸಿರುವ ಹಿಡಂಭೇಶ್ವರ, ಸಂಪಿಗೆ ಸಿದ್ದೇಶ್ವರ ದೇಗುಲದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಮಹಾರುದ್ರಾಭಿಷೇಕ ಪೂಜಾ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ದೇವರಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲ್ಲದೆ, ನಗರದ ಅಧಿದೇವತೆ ಏಕನಾಥೇಶ್ವರಿ, ಗಣಪತಿ ದೇಗುಲಗಳಿಗೂ ಕೂಡ ನೂರಾರು ಭಕ್ತರು ಆಗಮಿಸಿ ದೇವತೆಗಳನ್ನು ಪ್ರಾರ್ಥಿಸುತ್ತಿದ್ದ ದೃಶ್ಯ ಕಂಡುಬಂದಿತು.

         ನಗರದ ಕೋಟೆ ರಸ್ತೆಯ ಗಾರೆಬಾಗಿಲು ಈಶ್ವರ ದೇಗುಲ, ಕರ್ವತೀಶ್ವರ ದೇಗುಲ, ಕಂಬಳಿ ಬೀದಿಯ ಬೀರಗಲ್ಲೇಶ್ವರ ಸ್ವಾಮಿ ದೇಗುಲ, ದೊಡ್ಡಪೇಟೆಯ ಕೆಂಚನೇರಹಟ್ಟಿಯ ಕಾಟಲಿಂಗೇಶ್ವರ ಸ್ವಾಮಿ ದೇಗುಲ, ಕರುವಿನಕಟ್ಟೆ ವೃತ್ತದ ಕ್ಯಾತೇಶ್ವರ ಸ್ವಾಮಿ ದೇಗುಲ, ಉಜ್ಜಿನಿಮಠದ ರಸ್ತೆಯ ಉಮಾಮಹೇಶ್ವರ ದೇಗುಲ, ಗಾರೇಹಟ್ಟಿಯ ಮಹಾಬಲೇಶ್ವರ ದೇಗುಲ ಸೇರಿದಂತೆ ವಿವಿಧ ಶಿವ ದೇಗುಲಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಹಾ ರುದ್ರಾಭಿಷೇಕ ಪೂಜಾ ಕಾರ್ಯಕ್ರಮ ಜರುಗಿದವು.

          ಬೆಳಿಗ್ಗೆ ಮತ್ತು ಸಂಜೆ ಅನೇಕ ಭಕ್ತರು ಆಗಮಿಸಿ ಶಿವನನ್ನು ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿಕೊಂಡರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಗರದಲ್ಲಿ ಜ್ಯೋತಿರ್ಲಿಂಗಗಳ ಮೆರವಣಿಗೆ ನಡೆಯಿತು.ಆಕಾಶವಾಣಿ ಸಮೀಪದ ಬ್ರಹ್ಮಕುಮಾರೀಸ್ ಸಭಾಂಗಣದಿಂದ ಆರಂಭವಾದ ನೂರಾರು ಜ್ಯೋತಿರ್ಲಿಂಗಗಳು, ವಾಹನಗಳು, ಬ್ರಹ್ಮಕುಮಾರೀಸ್ ಸಂಘಟಕರು ಮೆರವಣಿಗೆ ಸಾಗಿದರು. ಸಂಜೆ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಏಳು ಅಡಿ ಎತ್ತರದ ಆಕರ್ಷಕ ಶಿವಲಿಂಗ ದರ್ಶನ ಎಲ್ಲರ ಗಮನಸೆಳೆಯಿತು. ಇಲ್ಲಿಯೂ ಜನರು ಕುತೂಹಲದಿಂದ ಶಿವಲಿಂಗ ವೀಕ್ಷಿಸಿದರು

          ಕೋಟೆ ನಾಡಿನಲ್ಲಿ ಯಾವ ರಸ್ತೆಗೂ ಹೋದರೂ ಅಥವಾ ಯಾವ ದೇವಸ್ಥಾನಕ್ಕೆ ಭೇಟಿ ನೀಡಿದರೂ ಅಲ್ಲಿ ಶಿವನ ಧ್ಯಾನ. ಶಿವರಾತ್ರಿ ಮಹೋತ್ಸವ ಅಂಗವಾಗಿ ಈಶ್ವರ, ಗಣಪತಿ ದೇವಾಲಯಗಳನ್ನು ಪುಷ್ಪಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ವಿಶೇಷವಾಗಿತ್ತು. ಎಲ್ಲಾ ಕಡೆಗಳಲ್ಲಿ ಶಿವನ ನಾಮಸ್ಮರಣೆ. ಶಿವ ಅಭಿಷೇಕ ಪ್ರಿಯ. ರುದ್ರ ಮಂತ್ರಗಳಿಂದ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ, ಶಿವತೀರ್ಥ ಸ್ವೀಕರಿಸುವ ಶಾಸ್ತ್ರಕರ್ಮ ನಡೆದು ಬಂದಿದೆ. ಶಿವರಾತ್ರಿ ಮಹೋತ್ಸವ ನಡೆಯುತ್ತದೆ. ಇಂದು ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ಆರಂಭವಾಗಿವೆ.

         ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಭಾನುವಾರದಿಂದಲೇ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುತ್ತಿದ್ದು, ಇಂದು ಮುಂಜಾನೆಯಿಂದಲೇ ಹೂ-ಹಣ್ಣುಗಳ ಮಾರಾಟ ಜೋರಾಗಿದೆ. ಭಾರೀ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ಬರುತ್ತಿದ್ದಾರೆ.

        ನಗರದ ನೀಲಕಂಠಶ್ವರ ದೇವಾಲಯದಲ್ಲಿ ಶಿವರಾತ್ರಿ ಆಂಗವಾಗಿ ವಿಶೇಷವಾದ ಅಲಂಕಾರವನ್ನು ದೇವಾಲಯಕ್ಕೆ ಮಾಡಿದ್ದು ಒಳಗಡೆಯಲ್ಲಿ ಭಕ್ತಾಧಿಗಳಿಂದಲೇ ಶಿವನಿಗೆ ಅಭೀಷೇಕವನ್ನು ಮಾಡುವ ಸೌಲಭ್ಯವನ್ನು ಇಂದು ಸಮಾಜದವತಿಯಿಂದ ಕಲ್ಪಿಸಲಾಗಿತು. ಇಂದು ಬೆಳಿಗ್ಗೆಯಿಂದಲೇ ನಗರದ ವಿವಿಧ ಶಿವನ ದೇವಾಲಯಗಳಲ್ಲಿ ಭಕ್ತಾಧಿಗಳು ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನವನ್ನು ಪಡೆಯುವುದರ ಮೂಲಕ ಪುನೀತರಾಗಿದ್ಧಾರೆ.

          ಅನೆಬಾಗಿಲ ಬಳಿಯ ಪಾತಳಲಿಂಗೇಶ್ವರ ದೇವಾಲಯ, ಬೆಟ್ಟದ ರಸ್ತೆಯ ಗಾರೆ ಬಾಗಿಲು ಈಶ್ವರ ದೇವಾಲಯ, ಚಂದ್ರವಳ್ಳಿತ ಗುಹೆಯಲ್ಲಿನ ಪಂಚಲಿಂಗೇಶ್ವರ ದೇವಾಲಯ, ಕೆಳಗೋಟೆಯ ಬೇಡರ ಕಣ್ಣಪ್ಪ ದೇವಾಲಯ, ಬಿಡಿರಸ್ತೆಯ ಶಿವಲಿಂಗ ದೇವಾಲಯ ಸೇರಿದಂತೆ ಇತರೆ ಶಿವನ ದೇವಾಲಯಗಳಲ್ಲಿ ಇಂದು ಶಿವರಾತ್ರಿ ಅಂಗವಾಗಿ ವಿಶೇಷವಾದ ಪೂಜೆ ಮತ್ತು ಆಲಂಕಾರವನ್ನು ಮಾಡಿ ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap