ಮೈತ್ರಿ ಅಭ್ಯರ್ಥಿಗೆ ಅದ್ದೂರಿ ಸ್ವಾಗತ, ವ್ಯಾಪಕ ಬೆಂಬಲ

ದಾವಣಗೆರೆ:

     ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪ್ರಚಾರಕ್ಕೆ ಹೋದಕಡೆಯಲೆಲ್ಲಾ ರಾತ್ರಿಯ ವರೆಗೂ ಅದ್ಧೂರಿ ಸ್ವಾಗತ ದೊರೆಯುತ್ತಿದ್ದು, ವ್ಯಾಪಕವಾಗಿ ಜನ ಬೆಂಬಲ ಸೂಚಿಸುತ್ತಿದ್ದಾರೆಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ತಿಳಿಸಿದರು.

      ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಲ್ಲಿ ಕಾಂಗ್ರೆಸ್ ಹಾಲಿ ಶಾಸಕರು ಹಾಗೂ ಮೈತ್ರಿ ಪಕ್ಷಗಳ ಮಾಜಿ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಹೊದ ಕಡೆಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

      ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರು ಪ್ರಾಮಾಣಿಕ ಹಾಗೂ ಜನರಿಗೆ ಸ್ಪಂದಿಸುವ ಅಭ್ಯರ್ಥಿಯಾಗಿದ್ದು, ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಹಣ ಬಲ ಹಾಗೂ ಜನ ಬಲದ ನಡುವೆ ನಡೆಯುತ್ತಿದೆ. ಬಿಜೆಪಿಯದ್ದು ಹಣ ಬಲವಾದರೆ, ನಾವು ಜನ ಬಲದ ಜೊತೆಗೆ ಕಾಂಗ್ರೆಸ್ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಮೇಲೆ ಚುನಾವಣೆ ಎದುರಿಸುತ್ತೇವೆ ಎಂದರು.

        ಸಂಸದ ಜಿ.ಎಂ.ಸಿದ್ದೇಶ್ವರ 10 ಸಾವಿರ ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತಂದಿರುವುದಾಗಿ ಹೇಳುತ್ತಿದ್ದಾರೆ. ಇದು ಅವರು ಸಂಸತ್‍ನಲ್ಲಿ ಹೋರಾಟ ಮಾಡಿ ತಂದಿರುವ ಅನುದಾನವಲ್ಲ. ಎಲ್ಲ ಸಂಸದರಿಗೂ ಬಿಡುಗಡೆಯಾಗಿರುವಂತೆ ಬಿಡುಗಡೆಯಾಗಿರುವ ಅನುದಾನವಾಗಿದ್ದು, ಈ ಅನುದಾನ ಸಂಸದರು ಮಲಗಿದ್ದರೂ ಬರುತಿತ್ತು. ಆದರೆ, ವೈಯಕ್ತಿಕ ಪ್ರಯತ್ನ, ವರ್ಚಸ್ಸಿನ ಮೇಲೆ ಸಿದ್ದೇಶ್ವರ ದಾವಣಗೆರೆಗೆ ಏನು ತಂದಿದ್ದಾರೆಂದು ಪ್ರಶ್ನಿಸಿದರು.

       ಬೀರೂರು-ಸಮ್ಮಸಗಿ ರಸ್ತೆಯ ಬಗ್ಗೆ ಸಿದ್ದೇಶ್ವರ್ ಒಮ್ಮೆಯೂ ದನಿ ಎತ್ತಿಲ್ಲ. ಈ ರಸ್ತೆ ಪೂರ್ಣಗೊಳಿಸಲು ಎಸ್.ಎಸ್.ಮಲ್ಲಿಕಾರ್ಜುನ ಬರಬೇಕಾಯಿತು. ಸಮಾಜ ಕಲ್ಯಾಣ ಇಲಾಖೆ 4 ಸಾವಿರ ಕೋಟಿಯನ್ನು ಮಲ್ಲಿಕಾರ್ಜುನ ಹಾಗೂ ನಮ್ಮ ಜಿಲ್ಲೆಯವರೇ ಆದ ಎಚ್.ಆಂಜನೇಯ ಸಚಿವರಿದ್ದಾಗ ತಂದರು. ಹೀಗೆ ಹೇಳಿದರೆ ನಮ್ಮ ಸಾಧನೆಯ ಪಟ್ಟಿ ಇನ್ನೂ ಬೆಳೆಯಲಿದೆ ಎಂದರು.

        ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ ಮಾತನಾಡಿ, ಕುಣಿಯಲು ಬಾರದವಳು ನೆಲ ಡೊಂಕು ಅಂದಳು ಎಂಬ ಗಾದೆ ಮಾತಿನಂತೆ, ದಾವಣಗೆರೆಯಲ್ಲಿ ಯಾವುದೇ ಅಭಿವೃದ್ಧಿ, ಸಾಧನೆ ಮಾಡದ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ತಮ್ಮ ವಿರುದ್ಧ ಕಾಂಗ್ರೆಸ್ ವಿನಾಕಾರಣ ಟೀಕೆ, ಆರೋಪ ಮಾಡುತ್ತಿದ್ದಾರೆಂಬುದಾಗಿ ಸಿದ್ದೇಶ್ವರ್ ಹೇಳುತ್ತಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದರು.

         ಬಿಜೆಪಿ ಸಂಸದ ಸಿದ್ದೇಶ್ವರ ಅವರ ವಿರುದ್ಧ ಟೀಕೆ ಮಾಡದೇ, ಪ್ರಚಾರ ಮಾಡಲು ಅವರ ಸಾಧನೆಯಾದರೂ ಏನು? 130 ಕೋಟಿ ಜನರ ಪ್ರತಿನಿಧಿಗಳಾದ 530 ಸಂಸದರಲ್ಲಿ ತಾವೂ ಒಬ್ಬ ಎಂಬುದನ್ನರಿತು, ಸಣ್ಣ ಮಕ್ಕಳಂತೆ ಗೋಳು ಹೇಳಿಕೊಳ್ಳವುದನ್ನು ಸಿದ್ದೇಶ್ವರ ನಿಲ್ಲಿಸಲಿ. ಎರಡೂವರೆ ದಶಕದಿಂದಲೂ ದಿವಂಗತ ಜಿ.ಮಲ್ಲಿಕಾರ್ಜುನಪ್ಪ 2 ಸಲ, ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಲಾಟರಿ ಹೊಡೆದಂತೆ ಅಧಿಕಾರ ಸಿಕ್ಕರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

        ಸಿದ್ದೇಶ್ವರ ಅವರು ಕರಪತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ-4ರ ಅಭಿವೃದ್ಧಿಗೆ ಬಂದ 4700 ಕೋಟಿ, ಸ್ಮಾರ್ಟ್ ಸಿಟಿಗೆ 1 ಸಾವಿರ ಕೋಟಿ ಹೀಗೆ ಎಷ್ಟು ಸಾವಿರ ಕೋಟಿಯನ್ನಾದರೂ ಕೂಡಬಹುದು, ಕಳೆಯಬಹುದು. ಆದರೆ, ವೈಯಕ್ತಿಕ ಪ್ರಯತ್ನದಿಂದ ಜಿಲ್ಲೆಗೆ ಸಿದ್ದೇಶ್ವರ ಕೊಡುಗೆ ಏನು? ಎಂದು ಪ್ರಶ್ನಿಸಿದ ಅವರು, ಕ್ಷೇತ್ರದ ಒಬ್ಬ ನಾಗರೀಕನಾಗಿ ರುಪಾಯಿ ರುಪಾಯಿಗೂ ಲೆಕ್ಕ ಕೇಳುತ್ತೇವೆ. ಸಂಸದರು ನೈಜ ಲೆಕ್ಕವನ್ನು ನೀಡಲಿ.

        ಕಾಂಗ್ರೆಸ್ಸಿನ ಅವಧಿಯಲ್ಲಿ ಆದ ಗಾಜಿನ ಮನೆ, ದೂಡಾ ಬಳಿ ಫ್ಲೈಓವರ್, ಆಶ್ರಯ ಮನೆಗಳ ನಿರ್ಮಾಣ, ಕುಂದುವಾಡ ಕೆರೆಗೆ ಕಾಯಕಲ್ಪ, ಜಲಸಿರಿ ಕೈಗೆತ್ತಿಕೊಂಡಿದ್ದು, ಸಿಮೆಂಟ್ ರಸ್ತೆಗಳ ನಿರ್ಮಾಣ ಹೀಗೆ ಎಸ್ಸೆಸ್ ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಕಾಲದಲ್ಲಿ ಅಭಿವೃದ್ಧಿಯಾಗಿವೆ. ನಿಮ್ಮ ಅವಧಿಯಲ್ಲಿ ಏನು ಮಾಡಿದ್ದೀರೆಂದು ಉತ್ತರಿಸಿ ಎಂದು ಸವಾಲು ಹಾಕಿದರು.

         ಕಾಂಗ್ರೆಸಿನ ನಾಯಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ ಸ್ಥಿರ, ಶಾಶ್ವತ ಅಭಿವೃದ್ಧಿ ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. 22 ಕೆರೆ ಏತ ಯೋಜನೆಗೆ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಪರಿಕಲ್ಪನೆಯಂತೆ ನೀರು ಹರಿಸಿದರು. ತಮ್ಮ ಸ್ವಂತ ಹಣವನ್ನು ಹಾಕಿ, ನದಿಗೆ ಮೋಟಾರ್ ಅಳವಡಿಸಿದರು.

         ಅಭಿವೃದ್ಧಿಯೆಂಬುದು ರಕ್ತಗತವಾಗಿ ಬಂದಿರಬೇಕು. ಸಿದ್ದೇಶ್ವರ ಕೇಂದ್ರ ಸಚಿವರಿದ್ದಾಗ ವಿಮಾನ ನಿಲ್ದಾಣವಾಗಲೀ, ಕೈಗಾರಿಕೆಯನ್ನಾ ಗಲೀ ತರಲಿಲ್ಲ. ಮುಖ್ಯಮಂತ್ರಿಗಳನ್ನು ಈ ವಿಚಾರವಾಗಿ ಒಮ್ಮೆಯೂ ಭೇಟಿ ಮಾಡಿಲ್ಲ ಎಂದು ಆರೋಪಿಸಿದರು.ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್.ನಾಗಭೂಷಣ್ ಮಾತನಾಡಿ, ದಾವಣಗೆರೆಗೆ ಶಾಶ್ವತ ನೀರು, ರಸ್ತೆ, ಸೂರು, ಅಭಿವೃದ್ಧಿ ಮಲ್ಲಿಕಾರ್ಜುನ ಅವರ ಕೊಡುಗೆಯಾಗಿವೆ .

       ಜಲಸಿರಿಗೆ ಹಣದ ಕೊರತೆ ಇದ್ದಾಗ ಮಂಗಳೂರು ಪಾಲಿಕೆ ಬಳಸದಿದ್ದ 220 ಕೋಟಿ ಎಡಿಬಿ ಅನುದಾನವನ್ನು ದಾವಣಗೆರೆಗೆ ಹಾಕಿಸಿಕೊಂಡು ಬಂದು ದಿನದ 24 ಗಂಟೆ ನೀರು ಕೊಡಲು ಯೋಜನೆ ರೂಪಿಸಿರುವುದೇ ಮಲ್ಲಿಕಾರ್ಜುನ್ ಅವರಿಗೆ ಅಭಿವೃದ್ಧಿಯ ಬಗ್ಗೆ ಇರುವ ಬದ್ಧತೆ ತೋರಿಸಲಿದೆ ಎಂದರು.

       ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನವರನ್ನು ಸೋಲಿಸಿದ್ದು ದಾವಣಗೆರೆ ಜನರ ದುರಾದೃಷ್ಟ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ, ಸಂಸದ ಜಿ.ಎಂ.ಸಿದ್ದೇಶ್ವರಗೆ ಮಲ್ಲಿಕಾರ್ಜುನ ಸವಾಲು ಹಾಕಿದ್ದರೂ ಎದುರಾಳಿಗಳು ಚರ್ಚೆಗೆ ಬರಲಿಲ್ಲ. ಅಭಿವೃದ್ಧಿ ಕಾರ್ಯ ಕೈಗೊಂಡ ಎದೆಗಾರಿಕೆ ಇದ್ದುದರಿಂದಲೇ ಮಲ್ಲಿಕಾರ್ಜುನ ಸವಾಲು ಹಾಕಿದ್ದರು. ಆದರೆ, ಬಿಜೆಪಿ ನಾಯಕರು ಚರ್ಚೆಗೆ ಬರಲೇ ಇಲ್ಲ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಮಾಜಿ ಸದಸ್ಯ ಡಿ.ಎನ್.ಜಗದೀಶ, ಲಿಯಾಕತ್ ಅಲಿ, ಜಯಪ್ರಕಾಶ, ಎನ್.ಚಂದ್ರು, ಸಂದೀಪ್, ಡಿ.ಶಿವಕುಮಾರ, ಫಾರೂಕ್, ಎಚ್.ಹರೀಶ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ