ಬೆಂಗಳೂರು
ದೇಶದ ದೂರಸಂಪರ್ಕ ವಲಯವನ್ನು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ-2018 (ಎನ್‍ಡಿಸಿಪಿ)ಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೇಂದ್ರದ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ತಿಳಿಸಿದ್ದಾರೆ.
ನಗರದ ಸಂಪಗಿರಾಮನಗರದ ಬಿಎಸ್‍ಎನ್‍ಎಲ್ ಆವರಣದಲ್ಲಿ ಗುರುವಾರ ಟೆಲಿಕಾಂ ಟೆಸ್ಟಿಂಗ್ ಮತ್ತು ಸೆಕ್ಯೂರಿಟಿ ಸರ್ಟಿಫಿಕೇಷನ್ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೂರಸಂಪರ್ಕ ಆಯೋಗಕ್ಕೆ ಡಿಜಿಟಲ್ ಸಂವಹನ ಆಯೋಗ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರದ ಒಪ್ಪಿಗೆ ಸಿಕ್ಕಿದೆ ಎಂದರು.
ಹೊಸ ನೀತಿಯಿಂದ ದೇಶದ ಸಂವಹನ ವ್ಯವಸ್ಥೆ ಸಶಕ್ತವಾಗಲಿದ್ದು, ಡಿಜಿಟಲ್ ಸಾರ್ವಭೌಮತ್ವ ವೃದ್ಧಿಸಲಿದೆ. ಸಾರ್ವಜನಿಕ, ಉದ್ದಿಮೆ ಮತ್ತು ಸಂಸ್ಥೆಗಳ ಆರ್ಥಿಕ ಮತ್ತು ಸಾಮಾಜಿಕ ಸಂವಹನಗಳು ಉತ್ತಮವಾಗಲಿವೆ. ಡಿಜಿಟಲ್ ಸಂವಹನದ ಮೂಲಸೌಕರ್ಯ ಮತ್ತು ಸೇವೆ ಕೈಗೆಟಕುವ ದರದಲ್ಲಿ ಜನರಿಗೆ ದೊರೆಯಲಿದೆ ಎಂದು ವಿವರಿಸಿದರು.
ಉತ್ತಮ ಸಂಪರ್ಕ, ಸುರಕ್ಷಿತ ಭಾರತ
ಜಿ50 ಎಂಬಿಪಿಎಸ್ ವೇಗದಲ್ಲಿ ಸರ್ವರಿಗೂ ಬ್ರಾಂಡ್‍ಬ್ಯಾಂಡ್ ಸಂಪರ್ಕ,ಎಲ್ಲ ಗ್ರಾಪಂಗಳಿಗೆ 1 ಜಿಬಿಪಿಎಸ್ ಅಂತರ್ಜಾಲ, ಬ್ರಾಂಡ್‍ಬ್ಯಾಂಡ್ ಸಂಪರ್ಕವಿಲ್ಲದ ಎಲ್ಲ ಸ್ಥಳಗಳನ್ನು ಸಂರ್ಪಸುವ ಖಾತ್ರಿ ಸೇರಿದಂತೆ ಹತ್ತಾರು ಹೊಸ ಸೇವೆ ಈ ನೀತಿಯಿಂದ ಲಭ್ಯವಾಗಲಿದೆ ಎಂದು ಸಿನ್ಹಾ ನುಡಿದರು.
ಡಿಜಿಟಲ್ ಸಂವಹನ ವಲಯದಲ್ಲಿ ವಿದೇಶಿ ಹೂಡಿಕೆ ಆಕರ್ಷಿಸುವ ಉದ್ದೇಶ ಹೊಂದಿದ್ದು, 2022ರ ಹೊತ್ತಿಗೆ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ದೂರ ಸಂಪರ್ಕ ಇಲಾಖೆಯ ನಿರ್ದೇಶಕರು, ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
