ದಾವಣಗೆರೆ:
ಸಮ್ಮಿಶ್ರ ಸರ್ಕಾರವು ಸುಭದ್ರವಾಗಿದ್ದು, ಬಿಜೆಪಿಯ ಆಪರೇಷನ್ ಕಮಲ ಯಾವುದೇ ಕಾರಣಕ್ಕೂ ಫಲಿಸುವುದಿಲ್ಲ ಎಂದು ಕೌಶಲ್ಯ ಅಭಿವೃದ್ಧಿ ಹಾಗೂ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ರಾಜ್ಯಗಳ ಪಂಚ ರಾಜ್ಯ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಲೋಕಸಭೆ ಚುನಾವಣೆಯಲ್ಲೂ ಸೋಲುವ ಭೀತಿಯಿಂದ ಹತಾಶೆಗೊಂಡು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದು, ಯಾವುದೇ ಕಾರಣಕ್ಕೂ ಇದು ಫಲಿಸುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್-ಜೆಡಿಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಕಾಂಗ್ರೆಸ್‍ನ ಯಾವ ಶಾಸಕರೂ ಪಕ್ಷ ತೊರೆಯುವುದಿಲ್ಲ. ಈ ಸರ್ಕಾರದ ಅಧಿಕಾರದಿಂದ ಬಂದಾಗಿನಿಂದಲ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬರುಲು ಹವಣಿಸುತ್ತಿದೆ. ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಾಸ್ ಪಡೆದ ಮಾತ್ರಕ್ಕೆ ಸರ್ಕಾರ ಪತನವಾಗುವುದಿಲ್ಲ. ಆ ಇಬ್ಬರು ಹೋದರೂ ಬಹುಮತ ಸಾಬೀತು ಪಡೆಸುವಷ್ಟು ಸಂಖ್ಯೆಯ ಶಾಸಕರು ಸಮ್ಮಿಶ್ರ ಸರ್ಕಾರದಲ್ಲಿದ್ದಾರೆಂದು ಮಾಹಿತಿ ನೀಡಿದರು.
ನಮ್ಮ ಸರ್ಕಾರ ಸುಭದ್ರವಾಗಿದ್ದರೂ, ಮಾಧ್ಯಮಗಳೇ ಇದನ್ನೊಂದು ಸೀರಿಯಲ್‍ನಂತೆ ಮಾಡಿಕೊಂಡಿದ್ದಾರಷ್ಟೇ. ಕಾಂಗ್ರೆಸ್ಸಿನ ಯಾವೊಬ್ಬ ಶಾಸಕರೂ ರಾಜೀನಾಮೆ ನೀಡುವುದಿಲ್ಲ. ಬಿಜೆಪಿಯು ವಿಪಕ್ಷವಾಗಿ ಕಾರ್ಯನಿರ್ವಹಿಸದೇ, ವಾಮ ಮಾರ್ಗದಲ್ಲಾದರೂ ಸರಿ ಅಧಿಕಾರಕ್ಕೇರಬೇಕೆಂಬ ಹುನ್ನಾರ ನಡೆಸುತ್ತಿದೆ ಎಂದರು.
ಬೆಂಗಳೂರಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ನಮ್ಮ ಶಾಸಕರಿಗೇನೂ ಸೂಚನೆ ನೀಡಿಲ್ಲ. ಬಿಜೆಪಿಯ ಆಪರೇಷನ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ವಿಪಕ್ಷದ ಕುತಂತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಪ್ರತಿಯಾಗಿ ಕಾರ್ಯತಂತ್ರ ರೂಪಿಸಲಿದೆ ಎಂದು ಹೇಳಿದರು.
ಸಾರ್ವಜನಿಕರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪರವಾಗಿದ್ದಾರೆ. ಇದು ಬಿಜೆಪಿಯನ್ನು ಮತ್ತಷ್ಟು ಭ್ರಮನಿರಸನಗೊಳಿಸಿದೆ. ಬಳ್ಳಾರಿ ಜಿಲ್ಲೆಯ ಯಾವ ಕಾಂಗ್ರೆಸ್ ಶಾಸಕರೂ ಬೇಸರಗೊಂಡಿಲ್ಲ. ನನಗೆ ಸಚಿವ ಸ್ಥಾನ ನೀಡಿದ್ದಕ್ಕೂ ಯಾರೂ ಅಸಮಾಧಾನಗೊಂಡಿಲ್ಲ. ಪಕ್ಷದಿಂದ ನನಗೆ ಬುಲಾವ್ ಬಂದಿಲ್ಲ. ಆರಾಮಾಗಿಯೇ ಇದ್ದೇನೆ, ಯಾವ ಭಯವೂ ನಮಗಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ