ಬೆಂಗಳೂರು
ರಾಜ್ಯದ ವಿಶ್ವವಿದ್ಯಾಲಯಗಳ ಸಿಂಡಿಕೇಟ್ಗೆ ಪಕ್ಷಗಳ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಕ ಮಾಡುವ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿ ಜಾಗತಿಕ ದೃಷ್ಟಿಕೋನವಿರುವ ತಜ್ಞರನ್ನು ಸದಸ್ಯರನ್ನಾಗಿ ನೇಮಕ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು,ಆಯಾ ಕಾಲಕ್ಕೆ ಅಸ್ತಿತ್ವದಲ್ಲಿರುವ ಸರ್ಕಾರಗಳು ಬಹುತೇಕ ಸಂದರ್ಭಗಳಲ್ಲಿ ಪಕ್ಷದ ಕಾರ್ಯಕರ್ತರನ್ನೇ ವಿವಿಗಳ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡುತ್ತಿದ್ದು ಇದರಿಂದಾಗಿ ರಾಜ್ಯದಲ್ಲಿ ಶೈಕ್ಷಣಿಕ ವಾತಾವರಣ ಹಾಳಾಗುತ್ತಿದೆ ಎಂಬ ಆತಂಕ ಹಾಲಿ ಸರ್ಕಾರಕ್ಕೆ ಶುರುವಾಗಿದೆ.
ರಾಜ್ಯದಲ್ಲಿರುವ ಬಹುತೇಕ ವಿವಿಗಳ ಸಿಂಡಿಕೇಟ್ ಸದಸ್ಯರಾಗಿ ಬಹುತೇಕ ರಾಜಕೀಯ ಪಕ್ಷಗಳ ಕಾರ್ಯಕರ್ತರೇ ನೇಮಕಗೊಂಡಿದ್ದು ಇವರು ಹೇಳಿದ ಮಾತನ್ನು ಉಪಕುಲಪತಿಗಳು ಕೇಳಬೇಕಾದ ಸನ್ನಿವೇಶವಿದೆ.
ಈ ಸದಸ್ಯರ ಪೈಕಿ ಬಹುತೇಕರಿಗೆ ಜಾಗತಿಕ ದೃಷ್ಟಿಕೋನಕ್ಕಿಂತ ತಮ್ಮ ತಮ್ಮ ಪಕ್ಷಗಳನ್ನು ಬೆಳೆಸುವ ಲೆಕ್ಕಾಚಾರ ಹಾಗೂ ತಾವು ಬೆಳೆಯುವ ಲೆಕ್ಕಾಚಾರ ಇರುತ್ತದೆ.ಹೀಗಾಗಿ ಅದಕ್ಕೆ ಪೂರಕವಾದ ಪ್ರಸ್ತಾವಗಳನ್ನು ಸಿಂಡಿಕೇಟ್ ಮುಂದೆ ಮಂಡಿಸಿ,ತಮ್ಮ ಮಾತೇ ಅಂತಿಮವಾಗುವಂತೆ ನೋಡಿಕೊಳ್ಳುತ್ತಾರೆ.
ಪರಿಣಾಮವಾಗಿ ರಾಜ್ಯದ ಬಹುತೇಕ ವಿವಿಗಳು ವಿದ್ಯಾರ್ಥಿಗಳನ್ನು ನಾಡಿನ ಆಸ್ತಿಯನ್ನಾಗಿ ಪರಿವರ್ತಿಸುವಲ್ಲಿ ವಿಫಲವಾಗುತ್ತಿವೆ .ಬದಲಾದ ಕಾಲಮಾನಕ್ಕೆ ತಕ್ಕಂತಹ ಶಿಕ್ಷಣ ಪದ್ಧತಿ ಇಲ್ಲದೆ ವಿದ್ಯಾರ್ಥಿಗಳೂ ಕೈಗೊಂದು ಶೈಕ್ಷಣಿಕ ಅರ್ಹತಾ ಪತ್ರವನ್ನು ತೆಗೆದುಕೊಂಡು ಬರುತ್ತಿದ್ದಾರೆಯೇ ಹೊರತು,ದೇಶ-ವಿದೇಶಗಳಲ್ಲಿ ಕೆಲಸ ಗಿಟ್ಟಿಸುವ ಶಕ್ತಿ ಪಡೆದುಕೊಳ್ಳುತ್ತಿಲ್ಲ.
ಸಿಂಡಿಕೇಟ್ ಇರುವುದೇ ವಿವಿಗಳ ಗುಣಮಟ್ಟ ಹೆಚ್ಚಾಗುವಂತೆ ನೋಡಿಕೊಳ್ಳಲು.ಆದರೆ ಅಲ್ಲಿ ಬಹುತೇಕ ರಾಜಕೀಯ ಪಕ್ಷಗಳ ಕಾರ್ಯಕರ್ತರೇ ತುಂಬಿಕೊಂಡಿದ್ದು ಅವರಿಗೆ ಜಾಗತಿಕ ದೃಷ್ಟಿಕೋನದ ಕೊರತೆ ಸಹಜವಾಗಿಯೇ ಇದೆ.
ಹೀಗಾಗಿ ಸಿಂಡಿಕೇಟ್ಗಳಿಗೆ ಸರ್ಜರಿ ಮಾಡಿ ಜಾಗತಿಕ ದೃಷ್ಟಿಕೋನವಿರುವ ತಜ್ಞರನ್ನು ನೇಮಕ ಮಾಡುವುದು,ಆ ಮೂಲಕ ಆಧುನಿಕ ಜಗತ್ತಿನ ವಿದ್ಯಮಾನಗಳಿಗೆ ಪೂರಕವಾದ ಶೈಕ್ಷಣಿಕ ಪದ್ಧತಿಯನ್ನು ರೂಪಿಸಲು ನೆರವಾಗುವುದು ಸರ್ಕಾರದ ಯೋಚನೆ.
ಕರ್ನಾಟಕದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಜಗತ್ತಿನ ಯಾವುದೇ ದೇಶಗಳಿಗೆ ಹೋಗಿ ಕೆಲಸ ಮಾಡಲು,ಬದುಕಲು ಸಾಧ್ಯವಾಗಬೇಕು.ಇಲ್ಲದಿದ್ದರೆ ವಿವಿಗಳಿಗೆ ಅರ್ಥವೇ ಇಲ್ಲದಂತಾಗುತ್ತದೆ ಎಂಬುದು ಸರ್ಕಾರದ ಯೋಚನೆ.
ಹೀಗಾಗಿಯೇ ಸಿಂಡಿಕೇಟ್ಗೆ ಸದಸ್ಯರನ್ನು ನೇಮಕ ಮಾಡುವಾಗ ಇನ್ನು ಮುಂದೆ ಅವರ ಅರ್ಹತೆಯನ್ನು ಮಾನದಂಡವಾಗಿ ಪರಿಗಣಿಸಬೇಕೇ ಹೊರತು ಯಾವ ರಾಜಕೀಯ ಪಕ್ಷದ ಕಾರ್ಯಕರ್ತರು ಎಂಬುದನ್ನಲ್ಲ ಅಂತ ಸರ್ಕಾರ ಬಯಸಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ