ದಾವಣಗೆರೆ
ದಾವಣಗೆರೆ ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ ಹೊನ್ನಾಳಿ, ಚನ್ನಗಿರಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕುಗಳ ಸ್ವಲ್ಪ ಭಾಗ ಮಾತ್ರ ಭದ್ರ ನೀರಾವರಿ ಯೋಜನೆಯ ಅಚ್ಚುಕಟ್ಟು ಹೊಂದಿರುತ್ತದೆ. ಡಾ.ನಂಜುಂಡಪ್ಪ ಆಯೋಗ ವರದಿ ಪ್ರಕಾರ ಹರಪನಹಳ್ಳಿ ಹಾಗೂ ಜಗಳೂರು ತಾಲ್ಲೂಕುಗಳು ಅತಿ ಹಿಂದುಳಿದ ಹಾಗೂ ಶೇ.90 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊಂದಿರುವ ತಾಲ್ಲೂಕುಗಳಾಗಿರುತ್ತವೆ.
ಈ ತಾಲ್ಲೂಕುಗಳು ಪೂರ್ಣ ಒಣಭೂಮಿ ಹೊಂದಿದ್ದು, ಬರಗಾಲದಿಂದ ತತ್ತರಿಸಿ ಹೋಗಿವೆ. ಈ ತಾಲ್ಲೂಕುಗಳಲ್ಲಿ ಸರಿಯಾದ ರಸ್ತೆ ಸಾರಿಗೆ, ವಿದ್ಯುತ್, ಕುಡಿಯುವ ನೀರು ವ್ಯವಸ್ಥೆ ಇಲ್ಲದೆ ಗ್ರಾಮೀಣ ವ್ಯಾಪ್ತಿಯಲ್ಲಿರುವ ರಸ್ತೆಗಳು ಇದುವರೆಗೂ ಕೂಡ ಮೇಲ್ದರ್ಜೆಗೇರದೆ ಚಕ್ಕಡಿ ಗಾಡಿಗಳು ಸಹ ಓಡಾಡದ ಪರಿಸ್ಥಿತಿಯಲ್ಲಿರುತ್ತದೆ. ಹಳ್ಳಿಗಾಡಿನ ಸಾಕಷ್ಟು ಮಕ್ಕಳು ಹದಗೆಟ್ಟ ರಸ್ತೆಯಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದೇ ವಿದ್ಯಾಭ್ಯಾಸವನ್ನು 5-6ನೇ ತರಗತಿಗೆ ಮೊಟಕುಗೊಳಿಸಿರುತ್ತಾರೆ. ಕುಡಿಯುವ ನೀರಿನ ತೊಂದರೆಯಂತೂ ಹೇಳತೀರದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪ್ರತಿ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಈ ಜಿಲ್ಲೆಗೆ ಗ್ರಾಮೀಣ ರಸ್ತೆಯ ಸುಗಮ ಸಂಚಾರಕ್ಕಾಗಿ ಪ್ರತಿ ಜಿಲ್ಲಾ ಪಂಚಾಯತ್ ಸದಸ್ಯರ ಕ್ಷೇತ್ರಕ್ಕೆ ರೂ.12 ಲಕ್ಷಗಳು ಬಿಡುಗಡೆಯಾಗಿದ್ದು, ಈ ಅನುದಾನ ಸಾಕಾಗುತ್ತಿಲ್ಲ. ಆದ್ದರಿಂದ ಗ್ರಾಮೀಣ ರಸ್ತೆಗಳ ಒಟ್ಟು ಕಿಲೋಮೀಟರ್ ಉದ್ದದ ಮೇಲೆ ಅಭಿವೃದ್ದಿಗೋಸ್ಕರ ರೂ.100 ಕೋಟಿ ಅನುದಾನವನ್ನು ಹಾಗೂ ಕುಡಿಯುವ ನೀರಿಗೋಸ್ಕರ ರೂ.200 ಕೋಟಿ ಮತ್ತು ಸರ್ಕಾರಿ ಶಾಲೆಗಳ ವಿಶೇಷ ದುರಸ್ಥಿಗಾಗಿ ರೂ.200 ಕೋಟಿಗಳನ್ನು ಬಿಡುಗಡೆಗೊಳಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶೀಲ.ಕೆ.ಆರ್ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ