ಹೊನ್ನಾಳಿ:
ತಾಲೂಕಿನ ತಕ್ಕನಹಳ್ಳಿ, ಕಮ್ಮಾರಗಟ್ಟೆ, ದೇವರಹೊನ್ನಾಳಿ, ಗೊಲ್ಲರಹಳ್ಳಿ, ಹುಣಿಸೇಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಕೊಳೆ ರೋಗ ಬಾಧೆ, ಸೈನಿಕ ಹುಳುವಿನ ದಾಳಿಯಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ನೆಲಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ. ಸಾವಿರಾರು ರೂ.ಗಳ ಸಾಲ ಮಾಡಿ ಬೆಳೆದಿದ್ದ ರೈತರು ತೀವ್ರ ದುಃಖಿತರಾಗಿದ್ದಾರೆ. ಕೈಗೆ ಬಂದ ಫಸಲು ಬಾಯಿಗೆ ಬರಲಿಲ್ಲ ಎಂಬಂತಾಗಿದ್ದು, ಬೆಳೆ ಕಳೆದುಕೊಂಡ ರೈತರು ಮುಂದೆ ಏನು ಎಂಬ ಚಿಂತೆಯಲ್ಲಿದ್ದಾರೆ.
ತಕ್ಕನಹಳ್ಳಿ ಗ್ರಾಮದ ರೈತ ಟಿ.ಡಿ. ನಾಗರಾಜಪ್ಪ ಅವರ 11 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಸಂಪೂರ್ಣ ನಾಶವಾಗಿದೆ. ಇವರು ಸುಮಾರು 1.58 ಲಕ್ಷ ರೂ.ಗಳಷ್ಟು ನಷ್ಟ ಅನುಭವಿಸಿದ್ದಾರೆ.
ತಾಲೂಕಿನ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ರೈತರು ಬೆಳೆದ ಭತ್ತದ ಬೆಳೆಗೆ ಕೊಳೆ ರೋಗ ಬಾಧೆ, ಸೈನಿಕ ಹುಳು ರೋಗ ಬಾಧೆ ಹೆಚ್ಚಾಗಿ ತಗುಲಿದ್ದು, ಬೆಳೆ ನಷ್ಟವಾಗಿ ರೈತರ ಬದುಕು ಬೀದಿಗೆ ಬರುವ ಸ್ಥಿತಿ ಇದ್ದರೂ ಸರಕಾರ ಕಿಂಚಿತ್ತೂ ಗಮನ ಹರಿಸದೇ ರೈತರ ಬದುಕಿನೊಡನೆ ಚೆಲ್ಲಾಟವಾಡುತ್ತಿದೆ. ಸರಕಾರ ಕೂಡಲೇ ರೈತರಿಗೆ ಹೆಚ್ಚಿನ ಬೆಳೆ ಹಾನಿ ಪರಿಹಾರ ನೀಡುವಂತೆ ಈ ಭಾಗದ ರೈತರು ಆಗ್ರಹಿಸಿದರು.
ಕಳೆದ ಮೂರ್ನಾಲ್ಕು ಬೆಳೆಗಳಿಗೆ ಭದ್ರಾ ನೀರು ದೊರೆತಿರಲಿಲ್ಲ. ಆದರೆ, ಈ ಬಾರಿ ನೀರು ಲಭಿಸಿದ್ದರೂ ಪ್ರಕೃತಿ ಮುನಿಸಿನಿಂದಾಗಿ ಬೆಳೆ ಕೈಗೆ ಬರಲಿಲ್ಲ. ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ರೈತರು ನಿದ್ದೆ ಮಾಡದ ಸ್ಥಿತಿ ಉಂಟಾಗಿದೆ. ಕಳೆದ 2 ಹಂಗಾಮಿನಿಂದ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲಕ್ಕೆ ಸರಿಯಾಗಿ ಮಳೆ ಬಾರದೇ ರೈತರು ಜಮೀನಿನಲ್ಲಿ ಬೆಳೆ ಇಲ್ಲದೆ ಹೈರಾಣಾಗಿದ್ದರು. ನೀರಾವರಿ ಪ್ರದೇಶ ವ್ಯಾಪ್ತಿಯಲ್ಲಿ ರೈತರು ಬರಗಾಲ, ರೋಗಬಾಧೆಯ ಆತಂಕದ ನಡುವೆಯೂ ಭತ್ತದ ನಾಟಿ ಮಾಡಿದ್ದರು. ಆದರೆ, ಬೆಳೆ ಕಟಾವಿಗೆ ಬಂದ ಸಮಯದಲ್ಲಿ ಈ ರೀತಿ ಆಗಿರುವುದರಿಂದ ಬೆಳೆ ನಾಶವಾಗುವ ಪರಿಸ್ಥಿತಿ ತಲುಪಿ ರೈತರು ಆತಂಕದ ಪರಿಸ್ಥಿತಿಯಲ್ಲಿದ್ದಾರೆ. ಸರಕಾರ ಕೂಡಲೇ ರೈತರಿಗೆ ಬೆಳೆ ಹಾನಿಯ ಪರಿಹಾರ ನೀಡಬೇಕು ಎಂದು ತಕ್ಕನಹಳ್ಳಿ ಗ್ರಾಮದ ರೈತ ಟಿ.ಡಿ. ನಾಗರಾಜಪ್ಪ ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







