ಕುಡಿಯುವ ನೀರು, ಜಾನುವಾರು ಮೇವಿಗೆ ಬರ

ದಾವಣಗೆರೆ:

         ಜಿಲ್ಲೆಯ ವಿವಿಧ ಬರ ಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡಕ್ಕೆ ಹನಿ ನೀರಿಗೂ ಪರದಾಡುತ್ತಿರುವುದು, ದನ-ಕರುಗಳಿಗೆ ಮೇವು ಇಲ್ಲದಿರುವುದು, ಬೆಳೆ ವಿಮೆ ಬಾರದಿರುವುದು, ಬೆಳೆ ಹಾನಿಸೇರಿದಂತೆ ಹಲವು ಸಮಸ್ಯೆಗಳನ್ನು ರೈತರು ಮನದಟ್ಟು ಮಾಡಿಕೊಟ್ಟರು.

        ಕೇಂದ್ರ ಸರ್ಕಾರದ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಡಾ.ಅಭಿಲಾಕ್ಷ್ ಲಿಖಿ ಅವರ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡವು ಜಿಲ್ಲೆಯ ಜಗಳೂರು ತಾಲೂಕಿನ ಉದ್ದಗಟ್ಟ, ಭರಮಸಮುದ್ರ, ರಂಗಾಪುರ, ಬಿಳಿಚೋಡು ಹಾಗೂ ದಾವಣಗೆರೆ ತಾಲೂಕಿನ ಅಣಜಿ ಮತ್ತು ಬೋರಗೊಂಡನಹಳ್ಳಿ ಗ್ರಾಮಗಳ ರೈತರ ಜಮೀನಿಗೆ ಭೇಟಿ ನೀಡಿ ಹಿಂಗಾರು ಬೆಳೆ ಹಾನಿಯನ್ನು ವೀಕ್ಷಿಸಿದಲ್ಲದೇ, ಶುದ್ಧ ಕುಡಿಯುವ ನೀರಿನ ಘಟಕವನ್ನು ವೀಕ್ಷಿಸಿ ಬೆಳೆ ಹಾನಿ ಹಾಗೂ ಕುಡಿಯುವ ನೀರಿನ ತತ್ವಾರದ ಬಗ್ಗೆ ಸಮಗ್ರ ಮಾಹಿತಿ ಪಡೆಯಿತು.

        ಆರಂಭದಲ್ಲಿ ಉದ್ದಗಟ್ಟ ಗ್ರಾಮದ ಬಳಿಯಲ್ಲಿರುವ ಶ್ರೀಓಂಕಾರೇಶ್ವರ ಮಠದ 4 ಎಕರೆ 11 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಬಿಳಿಜೋಳದ ಹೊಲಕ್ಕೆ ಭೇಟಿ ನೀಡಿದ ಬರ ಅಧ್ಯಯನ ತಂಡ ರೈತರಿಂದ ಮಾಹಿತಿ ಪಡೆದ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರೇವಣಸಿದ್ಧಪ್ಪ, ಚಿರಂಜೀವಿ, ಮಂಜುನಾಥ್, ಸಂಗಪ್ಪ ಮತ್ತಿತರರು, ಕುಡಿಯುವ ನೀರಿಗಾಗಿ ಪರದಾಡಬೇಕಾದ ಸಮಸ್ಯೆ ಇದ್ದು, ಮಹಿಳೆಯರು ಮಕ್ಕಳು-ಮರಿ ಬಿಟ್ಟು ಬೆಳಗಿನ ಜಾವ 5.30ರಿಂದಲೇ ನೀರಿಗಾಗಿ ಬಿಂದಿಗೆ ಹಿಡಿದು, ಸರದಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲವತ್ತುಕೊಂಡರು.

         ದನಕರುಗಳಿಗೆ ಮೇವು ಇಲ್ಲದ ಕಾರಣ ಅವುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಭಾಗದಲ್ಲಿ ಗೋಶಾಲೆ ತೆರೆಯುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಅವರು, ಕಳೆದ ಎರಡೂ ವರ್ಷಗಳಿಂದಲೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಕ್ಲೈಮ್ ಕಟ್ಟಿದ್ದೇವೆ. ಆದರೆ, ಎರಡೂ ವರ್ಷಗಳು ಸಹ ಬೆಳೆ ವಿಮೆ ಬಂದಿಲ್ಲ ಎಂದು ಅಳಲು ತೋಡಿಕೊಂಡರು.

      ಸತತ ನಾಲ್ಕು ವರ್ಷಗಳಿಂದ ಬರಗಾಲ ಆವರಿಸಿರುವುದರಿಂದ ಹಾಕಿದ ಬಂಡವಾಳವೂ ಕೈಗೆ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಹಣಕಾಸು ಸಂಸ್ಥೆಯವರು ನಮ್ಮ ಟ್ರಾಕ್ಟರುಗಳನ್ನು ಜಪ್ತು ಮಾಡುತ್ತಿದ್ದಾರೆ. ಹೀಗಾದರೆ, ನಾವು ದುಡಿದು ತಿನ್ನುವುದು ಹೇಗೆ? ಎಂದು ಪ್ರಶ್ನಿಸಿದರು.

       ಇದೇ ವೇಳೆ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಜಗಳೂರು ತಾಲೂಕಿನಲ್ಲಿ 225 ಹೆಕ್ಟೇರ್ ಹಾಗೂ ಜಿಲ್ಲೆಯಲ್ಲಿ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬೆಳೆಯಲಾಗಿದೆ. ಆದರೆ, ಹಿಂಗಾರು ಮಳೆ ಕೈಕೊಟ್ಟಿರುವ ಕಾರಣ ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

       ನಂತರ ರಂಗಾಪುರ ಗ್ರಾಮಕ್ಕೆ ಭೇಟಿ ನೀಡಿದ ಬರ ಅಧ್ಯಯನ ತಂಡವು ಶುದ್ಧ ಕುಡಿಯುವ ನೀರಿನ ಘಟಕದಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದನ್ನು ವೀಕ್ಷಿಸಿ, ಜಿಲ್ಲೆಯ ಎಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೇ ದೋರಿದೆ. ಹಾಗೂ ಆ ಗ್ರಾಮಗಳಿಗೆ ಹೇಗೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪ್ರಶ್ನಿಸಿತು.

        ಈ ವೇಳೆ ಮಾತನಾಡಿದ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರ ರಾಜು, ಜಿಲ್ಲೆಯಲ್ಲಿ 45 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳನ್ನಾಗಿ ಗುರುತಿಸಲಾಗಿದ್ದು, ಆ ಎಲ್ಲಾ ಗ್ರಾಮಗಳಿಗೂ ಟ್ಯಾಂಕರ್ ಮತ್ತು ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.

       ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ರೈತ ಶರಣಪ್ಪ ಎಂಬುವರ 4 ಎಕರೆ 6 ಗುಂಟೆಯಲ್ಲಿ ಅಡಿಕೆ ಬೆಳೆದಿರುವ ತೋಟಕ್ಕೆ ಭೇಟಿ ನೀಡಿದ ಅಧ್ಯಯನ ತಂಡವು ಒಣಗಿದ ಅಡಿಕೆ ಗಿಡಗಳನ್ನು ಕಂಡು, ಅಲ್ಲಿಯೇ ಸಮೀಪದ ತೋಟದಲ್ಲಿರುವ ಹಸಿರು ಇರುವ ಗಿಡಗಳನ್ನು ಗಮನಿಸಿ, ಇಲ್ಲಿ ಅಡಿಕೆ ಗಿಡ ಒಣಗಿವೆ. ಆದರೆ, ಆ ಮರಗಳು ಏಕೆ ಹಸಿರಾಗಿವೆ ಎಂದು ಪ್ರಶ್ನಿಸಿತು.

        ಇದಕ್ಕೆ ಉತ್ತರಿಸಿದ ರೈತ ಬೆಳೆ ಒಣಗಿರುವುದು 13 ವರ್ಷಗಳ ಗಿಡಗಳಾಗಿವೆ. ಮಳೆ ಸರಿಯಾಗಿ ಆಗದ ಕಾರಣ ಹಾಗೂ ಕೊಳವೆಬಾವಿಯಲ್ಲಿ ನೀರು ಬತ್ತಿ ಹೋಗಿರುವ ಕಾರಣ ಅಡಿಕೆ ಗಿಡಗಳು ಒಣಗಿವೆ. ಹಸಿರು ಇರುವ ಗಿಡಗಳು 8 ವರ್ಷದವಾಗಿದ್ದು, ಆ ಗಿಡಗಳಿಗೆ ಟ್ಯಾಂಕರ್ ಮೂಲಕ ಕೃಷಿ ಹೊಂಡಕ್ಕೆ ನೀರು ಹಾಕಿಸಿ, ಗಿಡಗಳನ್ನು ಬದುಕಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರು ಹಸಿರಾಗಿವೆ. ಆದರೆ, ನಮಗೆ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರುಣಿಸುವ ಶಕ್ತಿ ಇಲ್ಲ ಹಾಗೂ ಕೊಳವೆ ಬಾವಿ ಕೊರೆಸೋಣ ಎಂದರೆ, ಸಾವಿರ ಅಡಿಯ ವರೆಗೂ ಡ್ರಿಲ್ಲಿಂಗ್ ಮಾಡಿಸಿದರೂ ನೀರು ಬರುವುದಿಲ್ಲ ಎಂದು ಸಮಸ್ಯೆಯನ್ನು ಎಳೆ, ಎಳೆಯಾಗಿ ವಿವರಿಸಿದರು.

        ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಮಾತನಾಡಿ, ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ಬರಪೀಡಿತ ಪ್ರದೇಶಗಳನ್ನು ತೋರಿಸುತ್ತಿದ್ದು, ಈ ವೇಳೆ ತಂಡವು ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿರುವ ಬಗ್ಗೆ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಕರ್ನಾಟಕದ ಸಮಗ್ರ ಚಿತ್ರಣ ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು.

        ಕೇಂದ್ರ ಸರ್ಕಾರದ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಡಾ.ಅಭಿಲಾಕ್ಷ್ ಲಿಖಿ ಅವರ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡದಲ್ಲಿ ಕೇಂದ್ರ ಸರ್ಕಾರದ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಎಣ್ಣೆಕಾಳು ಅಭಿವೃದ್ಧಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಬಿ.ಕೆ.ಶ್ರೀವಾಸ್ತವ, ಕುಡಿಯು ನೀರು ಸಚಿವಾಲಯದ ಎಸ್.ಸಿ ಶರ್ಮಾ ಇದ್ದರು.ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ಹೆಚ್.ಬಸವರಾಜೇಂದ್ರ, ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಗಳೂರು ತಹಶೀಲ್ದಾರ್ ತಿಮ್ಮಣ್ಣ ಹುಲ್ಮನಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಸೇರಿದಂತೆ ಹಲವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link