ಬೆಂಗಳೂರು
ಮಂತ್ರಿಮಂಡಲ ಪುನಾರಚನೆ, ನಿಗಮ ಮಂಡಳಿಗಳ ನೇಮಕಾತಿ ಪ್ರಕ್ರಿಯೆಯನ್ನು ಸುಗಮವಾಗಿ ಮಾಡಿ ಮುಗಿಸುವ ಮೂಲಕ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೊಮ್ಮೆ ತಮ್ಮ ಪ್ರಾಬಲ್ಯ ಸಾಬೀತುಪಡಿಸಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿಯಲ್ಲಿ ಪರಾಭವಗೊಂಡ ನಂತರ ತಮ್ಮ ರಾಜಕಾರಣವನ್ನು ಉತ್ತರ ಕರ್ನಾಟಕ ಭಾಗಕ್ಕೆ ಕೇಂದ್ರೀಕರಿಸಿದ ಸಿದ್ದರಾಮಯ್ಯ, ದಿನೇ ದಿನೇ ಈ ಭಾಗದ ಬಗ್ಗೆ ಹೆಚ್ಚು ಗಮನ ನೀಡುವ ಮೂಲಕ ಉತ್ತರ ಕರ್ನಾಟಕ ನಾಯಕರಾಗಿಯೂ ಹೊರ ಹೊಮ್ಮಿದ್ದಾರೆ.
ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯೆ ದೊರಕಿಸಿಕೊಡುವಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮನವೊಲಿಸುವಲ್ಲಿ ಸಫಲರಾದರು. ಸಚಿವ ಸ್ಥಾನಗಳಿಗೆ ಆಯ್ಕೆ ಮಾಡುವಲ್ಲಿ ತಮ್ಮ ಮಾತಿಗೆ ಹೆಚ್ಚು ಮನ್ನಣೆ ಸಿಗುವಂತೆ ಸಿದ್ದರಾಮಯ್ಯ ನೋಡಿಕೊಂಡರು.
ಶಾಸಕಾಂಗ ಪಕ್ಷದ ನಾಯಕತ್ವದಿಂದ ಸಿದ್ದರಾಮಯ್ಯ ಅವರನ್ನು ತೆಗೆದು ಹಾಕಲಾಗುತ್ತದೆ ಎಂಬ ಸುದ್ದಿ ಹರಡುತ್ತಿದ್ದಂತೆ ವಿದೇಶ ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ಹಿಂದಿರುಗಿದ ಸಿದ್ದರಾಮಯ್ಯ. ಎಲ್ಲಾ ರಾಜಕೀಯ ಬೆಳವಣಿಗೆಗಳನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವಲ್ಲಿ ಬಹುತೇಕ ಸಫಲರಾದರು. ಸಂಪುಟ ಪುನರ್ ರಚನೆ ಮತ್ತು ನಿಗಮ ಮಂಡಳಿ, ಸಂಸದಿಯ ಕಾರ್ಯದರ್ಶಿ ಹುದ್ದೆಗಳಿಗೆ ಯಾರನ್ನು ನೇಮಿಸಿಬೇಕೆನ್ನುವ ವಿಚಾರದಲ್ಲಿ ಲೆಕ್ಕಚಾರದ ನಿಲುವು ತಳೆದರು. ಗುಂಪುಗಾರಿಕೆ ನಡೆಸುತ್ತಿದ್ದವರನ್ನು ಗುರುತಿಸಿ ಸಚಿವ ಸ್ಥಾನ ನೀಡಿ ಬಾಯಿ ಮುಚ್ಚಿಸುವಲ್ಲಿ ಸಫಲರಾದರು.
ಈ ಮೂಲಕ ಹೈಕಮಾಂಡ್ ಗೆ ಸಿದ್ದರಾಮಯ್ಯ ಎರಡು ಸಂದೇಶಗಳನ್ನು ರವಾನಿಸಿದ್ದಾರೆ. ಒಂದು ಬಿಜೆಪಿಯ ಆಪರೇಷನ್ ಕಮಲ ವಿಫಲಗೊಳಿಸಿದ್ದು ಒಂದಾದರೆ, ಮತ್ತೊಂದು ಲೋಕಸಭೆ ಚುನಾವಣೆ ಎದುರಿಸಲು ಸೂಕ್ತ ವಾತಾವರಣ ನಿರ್ಮಾಣ ಮಾಡಲು ಅನುಕೂಲವಾಗುವಂತೆ ಸಚಿವ ಸಂಪುಟ ವಿಸ್ತರಿಸಿದ್ದು, ಸಿದ್ದರಾಮಯ್ಯ ಇದೀಗ ಬದಾಮಿಯಿಂದ ಆರಿಸಿ ಬಂದಿರುವದರಿಂದ ತಾವು ಉತ್ತರ ಕರ್ನಾಟಕದ ನಾಯಕನಾಗಿ ಸಹ ಹೊರಹೊಮ್ಮಿರುವುದು ಮತ್ತೊಂದು ಬೆಳವಣಿಗೆಯಾಗಿದೆ.
ಸಂಪುಟ ಪುನರ್ ರಚನೆಯ ಕಾಲಕ್ಕೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಸಿದ್ದರಾಮಯ್ಯ ಈ ಬಾರಿಯೂ ಸಹ ಬಹುತೇಕ” ಅಹಿಂದ” ತತ್ವ ಪಾಲಿಸಿದ್ದಾರೆ. ಸದ್ಯ ಹೊರಬರುತ್ತಿರುವ ಭಿನ್ನಮತ, ಅಸಮಾಧಾನ, ಆಕ್ರೋಶಗಳನ್ನು ಬಹುಮಟ್ಟಿಗೆ ಸಮಾಧಾನಗೊಳಿಸಿದ್ದಾರೆ ಎನ್ನಲಾಗಿದೆ. ಒಂದುವೇಳೆ ಭಿನ್ನಮತೀಯರು ಬಿಜೆಪಿಗೆ ಹೋದರೂ ಅವರ ಭವಿಷ್ಯ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಂತೆ ಆಗಲಿದೆ ಎಂದು ಅತೃಪ್ತರನ್ನು ಸಿದ್ದರಾಮಯ್ಯ ಸಂತೈಸಿದ್ದಾರೆ.
ಸಂಪುಟ ಪುನರ್ ರಚನೆಯಂಥ ಬಹುದೊಡ್ಡ ಬೆಳವಣಿಗೆ ಯಶಸ್ವಿಯಾಗಲು ಇನ್ನೂ ನಾಲ್ಕೈದು ದಿನಗಳಾದರೂ ಬೇಕು. ಆದರೆ ಈ ಮಧ್ಯೆ ಸಿದ್ದರಾಮಯ್ಯ ಮಾಡಿದ ತಂತ್ರಗಳು ಹೈಕಮಾಂಡಿಗೂ ಮೆಚ್ಚುಗೆಯಾಗಿದೆ ಎಂದು ಹೇಳಲಾಗಿದೆ. ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಡಿ.ಕೆ ಶಿವಕುಮಾರ ಅವರನ್ನು ಬದಲಿಸಿ ಉತ್ತರ ಕರ್ನಾಟಕದ ಹಿರಿಯ ನಾಯಕ ಎಚ್.ಕೆ.ಪಾಟೀಲರನ್ನು ನೇಮಿಸಿರುವದು ಉತ್ತರ ಕರ್ನಾಟಕಕ್ಕೆ ಒಳ್ಳೆಯ ಸಂದೇಶವನ್ನು ರವಾನಿಸಿದಂತಾಗಿದೆ.
ಉತ್ತರ ಕರ್ನಾಟಕದ ” ಶಸ್ತ್ರಾಸ್ತ್ರ” ಗಳಾದ ಎಂ.ಬಿ.ಪಾಟೀಲ, ಎಚ್.ಕೆ.ಪಾಟೀಲ, ಸತೀಶ ಜಾರಕಿಹೊಳಿ ಉತ್ತರ ಕರ್ನಾಟಕ ಪರವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಈ ಯುದ್ಧ ಮಾಡಲು ಕುಳಿತಂತಾಗಿದೆ. ಇನ್ನು ಉತ್ತರ ಕರ್ನಾಟಕದ ಬಹುದೊಡ್ಡ ಹೊಣೆ ಮಾತ್ತೊಮ್ಮೆ ಇವರ ಮೇಲೆ ಬಿದ್ದಂತಾಗಿದೆ. ಸಿದ್ದರಾಮಯ್ಯ ಅವರು ಈಗ ಬದಾಮಿಯ ಶಾಸಕರು ಹಾಗಯೇ ಸಮನ್ವಯ ಸಮಿತಿಯ ಅಧ್ಯಕ್ಷ ಸ್ಥಾನದಲ್ಲಿಯೂ ಇರುವದರಿಂದ, ಉತ್ತರ ಕರ್ನಾಟಕದ ಹಿತವನ್ನು ರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಅವರ ಮೇಲೆಯೂ ಬಿದ್ದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ