ಕೆ.ಎಂ.ಎಫ್ ಮತ್ತು ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಸಿರಿ ಧಾನ್ಯ ಉತ್ಪನ್ನಗಳ ಮಾರಾಟ:ಶಿವಶಂಕರ ರೆಡ್ಡಿ

ಬೆಂಗಳೂರು

         ಕೆ.ಎಂ.ಎಫ್ ಮತ್ತು ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಸಾವಯವ ಮತ್ತು ಸಿರಿ ಧಾನ್ಯ ಉತ್ಪನ್ನಗಳ ಮಾರಾಟಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇನ್ನೆರಡು ತಿಂಗಳಲ್ಲಿ ಇದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡುವುದಾಗಿ ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.

         ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿ ಆವರಣದಲ್ಲಿ ನಾಳೆಯಿಂದ ನಡೆಯಲಿರುವ ಸಾವಯವ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತರು ಬೆಳೆಯುವ ಸಾವಯವ ಉತ್ಪನ್ನಗಳು ಮತ್ತು ಸಿರಿ ಧಾನ್ಯಗಳ ಮಾರಾಟಕ್ಕೆ ಸಮಗ್ರ ಜಾಲವನ್ನು ಸರ್ಕಾರ ರೂಪಿಸುತ್ತಿದ್ದು, ಮೊದಲ ಹಂತದಲ್ಲಿ ಕೆ.ಎಂ.ಎಫ್ ಮತ್ತು ಹಾಪ್ ಕಾಮ್ಸ್ ಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕೆ ಹಾಲು ಮಹಾ ಮಂಡಲ ಮತ್ತು ಹಾಪ್ ಕಾಮ್ಸ್ ತಾತ್ವಿಕವಾಗಿ ಸಮ್ಮತಿ ಸೂಚಿಸಿವೆ ಎಂದರು.

           ಸಾವಯವ ಮತ್ತು ಸಿರಿಧಾನ್ಯಗಳ ಮಾರಾಟಕ್ಕೆ ಸೂಕ್ತ ಸ್ಥಳಾವಕಾಶ ಕಲ್ಪಿಸುವಂತೆ ಬಿಬಿಎಂಪಿಗೆ ಮಾಡಿದ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಜತೆಗೆ ಇಂದಿರಾ ಕ್ಯಾಂಟಿನ್ ನಲ್ಲೂ ಸಿರಿಧಾನ್ಯಗಳ ಊಟ ಮತ್ತು ಉಪಹಾರ ಒದಗಿಸಲು ಚಿಂತನೆ ನಡೆಯುತ್ತಿದೆ. ಸಿರಿ ಧಾನ್ಯಗಳನ್ನು ಪಡಿತರ ಪದ್ಧತಿಯಡಿ ಪೂರೈಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ರಾಗಿ ಬೆಳೆಯುವ ಮತ್ತು ಬಳಕೆ ಮಾಡುವ ಪ್ರದೇಶಗಳಲ್ಲಿ ಎರಡು ಕಿಲೋ ರಾಗಿ ವಿತರಣೆ ಮಾಡುವ ಸಂಬಂಧ ಆಹಾರ ಇಲಾಖೆಯ ಜತೆ ಚರ್ಚೆ ನಡೆಸಲಾಗಿದೆ. ಇದೇ ರೀತಿ ಜೋಳ ಮತ್ತಿತರ ಧಾನ್ಯಗಳ ವಿತರಣೆ ಮಾಡುವ ಉದ್ದೇಶವೂ ಸಹ ಇದೆ ಎಂದರು.

         ಸಾವಯವ, ಸಿರಿಧಾನ್ಯ ಬೆಳೆಯುವ ಬೆಳೆಗಾರರಿಗೆ ಸೂಕ್ತ ದರ ದೊರೆಯಬೇಕು. ಮಧ್ಯವರ್ತಿಗಳಿಂದ ಅವರು ಶೋಷಣೆಗೆ ಒಳಗಾಗಬಾರದು ಎನ್ನುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಇಂತಹ ಉತ್ಪನ್ನಗಳಿಗೆ ಸೂಕ್ತ ದರ ನಿಗದಿಪಡಿಸಲಾಗುವುದು. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ದರ ಕುಸಿತವಾದರೆ ಸರ್ಕಾರ, ಮಾರುಕಟ್ಟೆಗೆ ಮಧ್ಯ ಪ್ರವೇಶ ಮಾಡಿ ಖರೀದಿ ಮಾಡುತ್ತದೆ. ಈ ಬಾರಿ ರಾಜ್ಯದ 156 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಬರದಂತಹ ಗಂಭೀರ ಸಮಸ್ಯೆ ನಿವಾರಣೆಗೆ ಸಾವಯವ ಮತ್ತು ಸಿರಿ ಧಾನ್ಯ ಕೃಷಿ ಒಂದು ಪಾಠವಾಗಲಿದೆ. ಕಡಿಮೆ ಅವಧಿಯಲ್ಲಿ ಇಳುವರಿ ಕೊಡುವ ಸಿರಿ ಧಾನ್ಯಗಳು ಇದೀಗ ಸಿರಿವಂತರ ಸ್ವತ್ತಾಗಿದೆ. ಇದು ಎಲ್ಲರಿಗೂ ಸಿಗುವಂತೆ ಮಾಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಶಿವಶಂಕರ ರೆಡ್ಡಿ ಹೇಳಿದರು.

         ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಕೆಗೆ ಸರ್ಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಹೊಸ ಪದ್ಧತಿ ಆರಂಭಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಶೀಘ್ರದಲ್ಲೆ ಎಲ್ಲಾ ಜಿಲ್ಲೆಗಳಲ್ಲೂ ಪ್ರಾಯೋಗಿಕ ಕೃಷಿ ಚಟುವಟಿಕೆ ಆರಂಭಗೊಳ್ಳಲಿದ್ದು, ಇದಕ್ಕಾಗಿ ರೈತರ ಮನವೊಲಿಸಲಾಗುವುದು ಎಂದು ಹೇಳಿದರು.

           ಬಹು ನಿರೀಕ್ಷಿತ ಸಾವಯವ ಮತ್ತು ಸಿರಿ ಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ನಾಳೆ ಚಾಲನೆ ನೀಡುತ್ತಿದ್ದು, ಹಿಂದೆಂದಿಗಿಂತಲೂ ಇದು ಅತಿ ದೊಡ್ಡ ಮೇಳವಾಗಿದೆ. ಈ ಬೆಳೆ ಪದ್ಧತಿ ಭೂಮಿಯಷ್ಟೇ ಅಲ್ಲ ಪರಿಸರಕ್ಕೂ ಪೂರಕವಾಗಿದೆ. 220 ಪ್ರದರ್ಶಕರು, 23 ಆಹಾರ ಮಳಿಗೆಗಳು ಸೇರಿದಂತೆ ಒಟ್ಟಾರೆ 400 ಮಳಿಗೆಗಳ ಮೂಲಕ ಈ ಆಹಾರ ಪದ್ಧತಿಯ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು ಎಂದು ಶಿವಶಂಕರ ರೆಡ್ಡಿ ತಿಳಿಸಿದರು.

            ವಿವಿಧ ರಾಜ್ಯಗಳು, ಸ್ವಿಜ್ಜರ್ ಲೆಂಡ್ ಸೇರಿ ಏಳು ದೇಶಗಳು, 16 ನವೋದ್ಯಮ ಸಂಸ್ಥೆಗಳು ಪಾಲ್ಗೊಳ್ಳಲಿರುವ ಈ ಮೇಳದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಗೋಷ್ಠಿಗಳನ್ನು ಸಹ ಆಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link