ಹರಪನಹಳ್ಳಿ:
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರಶ್ಮಿ ರಾಜಪ ಅವರು ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
ಆಸ್ಪತ್ರೆಯ 100 ಹಾಸಿಗೆಯ ಕಟ್ಟಡದಲ್ಲಿ ಡಯಾಲಿಸಿಸ್ ಕೇಂದ್ರ, ಐಸಿಯು ವಿಭಾಗ ಹಾಗೂ ಆಸ್ಪತ್ರೆಯ ಆವರಣ ವೀಕ್ಷಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಲು ಆಡಾಳಿತಾಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಗೆ ಡಿಜಿಟಲ್ ಎಕ್ಸ್ ರೇ ಅವಶ್ಯವಿರುವ ಬಗ್ಗೆ ಮೇಲಾಧಿಕಾರಿಗಳ ಗಮನ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಉಚ್ಚಂಗಿದುರ್ಗ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂಬ ಆರೋಪ ಅಲ್ಲಿನ ವೈದರ ಮೇಲಿದೆ. ಅಲ್ಲದೇ ಪಾನಮತ್ತರಾಗಿ ಆಸ್ಪತ್ರೆಗೆ ಬರುತ್ತಾರೆ ಎಂದು ದೂರಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೈದ್ಯರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಡಿಎಚ್‍ಒ ಅವರಿಗೆ ಮನವಿ ಮಾಡಲಾಗಿದೆ. ಒಂದು ವೇಳೆ ಅವರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆ ಸೇರಿರುವ ಮಳಿಗೆಯಲ್ಲಿ ಉಪಾಹಾರ ಮತ್ತು ಹಣ್ಣಿನ ಅಂಗಡಿ ತೆರೆಯದಿರುವ ಬಗ್ಗೆ ಉಪಾಧ್ಯಕ್ಷರು ಪ್ರಶ್ನಿಸಿದರು. `ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿಗೆ ನೂತನ ಉಪಹಾರ ಗೃಹವನ್ನು ಆಸ್ಪತ್ರೆಗೆ ಹಸ್ತಾಂತರಿಸಿದ್ದು, ಮಾರ್ಗಸೂಚಿ ಅನ್ವಯ ನೀಡುವ ಕುರಿತು ಪತ್ರ ಬರೆಯಲಾಗಿದೆ ಎಂದು ಡಾ. ಶಂಕರನಾಯ್ಕ ತಿಳಿಸಿದರು.
ಬಳಿಕ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಜಿಪಂ ಉಪಾಧ್ಯಕ್ಷರು, ಅಲ್ಲಿನ ಸಮಸ್ಯೆಗಳ ಕುರಿತು ಪರಿಶೀಲಿಸಿದರು. ಕುಷ್ಠರೋಗದ ಬಗ್ಗೆ ತಾಲ್ಲೂಕಿನ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಮೆಣಸಿನಕಾಯಿ, ಡಾ.ತ್ರೀವೇಣಿ, ಡಾ.ಸಂಗೀತಾ, ಮಂಜುನಾಥ, ರೇವಣಸಿದ್ದಪ್ಪ, ವೆಂಕಟೇಶ್ ಬಾಗಲಾರ, ನೀಲಗುಂದ ಗ್ರಾಮ ಪಂಚಾಯಿತಿ ಸದಸ್ಯ ತಿರುಪತಿ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
