ಬೆಂಗಳೂರು
ಕೇಂದ್ರ ಸರ್ಕಾರ ಇಂದು ಮಂಡಿಸಿದ 2019-20ನೇ ಸಾಲಿನ ಬಜೆಟ್‍ನಲ್ಲಿ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ರೂಪಾಯಿಯಿಂದ 5 ಲಕ್ಷಕ್ಕೆ ಹೆಚ್ಚಿಸಿರುವ ಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘ ಸ್ವಾಗತಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ, ಎನ್‍ಪಿಎಸ್ ನೌಕರರ ಸಂಘ ಸೇರಿದಂತೆ ಎನ್‍ಪಿಎಸ್ ಯೋಜನೆಯನ್ನು ರದ್ದುಗೊಳಿಸುವ ಉದ್ದೇಶದೊಂದಿಗೆ ದೇಶಾದ್ಯಂತ 22 ರಾಜ್ಯಗಳ ಎನ್‍ಪಿಎಸ್ ಸಂಘಟನೆಗಳು ಸೇರಿ “ಹಳೆ ಪಿಂಚಣಿ ಯೋಜನೆಗಾಗಿ ರಾಷ್ಟ್ರೀಯ ಚಳವಳಿ” ಎಂಬ ಸಂಘವನ್ನು ರಚಿಸಿವೆ. ಕೇಂದ್ರ ಸರ್ಕಾರ ಪಿಂಚಣಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ-2013ರನ್ವಯ ಜಾರಿಗೆ ತಂದಿರುವ ಎನ್‍ಪಿಎಸ್ ಯೋಜನೆಯನ್ನು ರದ್ದುಗೊಳಿಸುವಂತೆ ದೇಶವ್ಯಾಪಿ ಚಳವಳಿಗಳ ಮೂಲಕ ಒತ್ತಾಯಿಸುತ್ತಾ ಬಂದಿವೆ.
ಆದರೆ ಕೇಂದ್ರ ಸರ್ಕಾರ ತನ್ನ ಬಜೆಟ್‍ನಲ್ಲಿ ಎನ್‍ಪಿಎಸ್ ಯೋಜನೆಯನ್ನು ಮಾರ್ಪಡಿಸುವ ಕುರಿತು ಪ್ರಸ್ತಾಪಿಸಿದೆ ಹೊರತು ಈ ಕುರಿತು ಯಾವುದೇ ಘೋಷಣೆ ಮಾಡಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಈ ನಿಲುವನ್ನು ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘ ಹಾಗೂ ಎನ್‍ಎಂಒಪಿಎಸ್ ಸಂಘಟನೆಗಳು ವಿರೋಧಿಸುತ್ತವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
