ಬೆಂಗಳೂರು
ಶಿಕ್ಷಣ ಸಂಸ್ಥೆಗಳು ಕೇವಲ ವಿದ್ಯೆಯನ್ನಷ್ಟೇ ಕಲಿಸದೆ, ಮಕ್ಕಳು ತಮ್ಮ ಜೀವನ ನಡೆಸಲು ಆತ್ಮವಿಶ್ವಾಸ ತುಂಬುವ ಮೌಲ್ಯಯುತ ಶಿಕ್ಷಣ ಕೊಡಿಸಬೇಕಾದ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹೇಳಿದ್ದಾರೆ.
ನಗರದ ಭೈರತಿ ಕ್ರಾಸ್‍ನಲ್ಲಿ ನೂತನವಾಗಿ ಆರಂಭಗೊಂಡ ಖಾಸಗಿ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು,. ಹಿಂದಿನ ಕಾಲದಲ್ಲಿ ಗುರುಕುಲ ಇತ್ತು. ಜೀವನದ ಮೌಲ್ಯವನ್ನು ಶಿಕ್ಷಣವನ್ನಾಗಿ ನೀಡಲಾಗುತ್ತಿತ್ತು. ಇದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯದಿಂದ ಜೀವನದ ಎಲ್ಲ ಕಷ್ಟವನ್ನು ಸಮರ್ಥವಾಗಿ ಎದುರಿಸುತ್ತಿದ್ದರು.
ಬ್ರಿಟಿಷರ ಆಗಮನದ ಬಳಿಕ ಗುರುಕುಲ ಪದ್ಧತಿ ನಿಲ್ಲಿಸಿ, ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭ ಮಾಡಲಾಯಿತು. ಈ ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಪುಸ್ತಕಕ್ಕಷ್ಡೇ ಸೀಮಿತವಾಗಿವೆ. ಇದರಿಂದ ಜೀವನದಲ್ಲಿ ದೊಡ್ಡ ಸಮಸ್ಯೆ ಎದುರಾದಾಗ ಮಕ್ಕಳು ಅದನ್ನು ಎದುರಿಸಲು ವಿಚಲಿತರಾಗುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪಠ್ಯದ ಜೊತೆಗೆ ಮಕ್ಕಳಲ್ಲಿ ಆತ್ಮಬಲ ತುಂಬುವ ಶಿಕ್ಷಣ ನೀಡಬೇಕು ಎಂದರು.
ಪೋಷಕರು ಸಹ ಮಕ್ಕಳನ್ನು ಶಾಲೆಗೆ ಸೇರಿಸಿ, ಅಂಕ ಪಡೆದುಕೊಳ್ಳಲಷ್ಟೇ ಮಕ್ಕಳ ಮೇಲೆ ಒತ್ತಡ ಹಾಕದೇ ಬದುಕಿನ ಮೌಲ್ಯ ಕಲಿಸಬೇಕು. ಬೆಂಗಳೂರು ಶೈಕ್ಷಣಿಕ ಕೇಂದ್ರವಾಗಿದ್ದು ಅತ್ಯಂತ ದೊಡ್ಡ ಸಂಸ್ಥೆಗಳು ಇಲ್ಲಿ ಶಾಖೆ ತೆರೆದಿವೆ. ಹೊರ ರಾಜ್ಯಗಳು,ದೇಶಗಳಿಂದ ಶಿಕ್ಷಣ ಪಡೆಯಲು ಇಲ್ಲಿಗೆ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ ಈ ಹಿನ್ನಲೆಯಲ್ಲಿ ಗುಣಮಟ್ಟದ ಹಾಗು ಮೌಲ್ಯಯುತ ಶಿಕ್ಷಣ ನೀಡುವುದು ಅಗತ್ಯ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.