ಚಿಕ್ಕನಾಯಕನಹಳ್ಳಿ
ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆಯ ಅರ್ಹತಾ ದಿನವನ್ನಾಗಿ ಜನವರಿ-1-2019 ಎಂದು ಪರಿಗಣಿಸಿದ್ದು ಈ ತಿಂಗಳ 20ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆಯು ನಡೆಯುತ್ತದೆ ಎಂದು ತಹಸೀಲ್ದಾರ್ ಸೋಮಪ್ಪಕಡಕೋಳ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಗೆ ಹೊಸದಾಗಿ ಸೇರಲು ನಮೂನೆ-6ರಲ್ಲಿ ಅರ್ಜಿ ಸ್ವೀಕರಿಸಿ ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಭಾವಚಿತ್ರ, 18ವರ್ಷ ಪೂರ್ಣಗೊಂಡಿರುವ ಬಗ್ಗೆ ಶಾಲಾ ದಾಖಲಾತಿ, ಸರ್ಕಾರದಿಂದ ನೀಡಿರುವ ಜನ್ಮ ದಿನಾಂಕ ನಮೂದಾಗಿರುವ ದಾಖಲೆ, ವಾಸವಿರುವ ಬಗ್ಗೆ ಪಡಿತರ ಚೀಟಿ, ಆಧಾರ್ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರದೊಂದಿಗೆ ಅರ್ಜಿಯನ್ನು ಸ್ವೀಕರಿಸುವುದು, ಜನ್ಮ ದಿನಾಂಕ 01-01-2001ರ ಹಿಂದಕ್ಕೆ ಹುಟ್ಟಿರಬೇಕು ಎಂದು ತಿಳಿಸಿದರು.
ಮತದಾರರ ಪಟ್ಟಿಯಿಂದ ಕೈಬಿಡಲು ನಮೂನೆ-7ರಲ್ಲಿ ಅರ್ಜಿ ಸ್ವೀಕರಿಸಿ ಸಂಬಂಧ ಪಟ್ಟವರಿಂದ ಮರಣ ಹೊಂದಿದ, ಸ್ಥಳಾಂತರ ಹೊಂದಿದ, ಪುನರಾವರ್ತನೆಯಾದ ಮತದಾರರ ಪಟ್ಟಿಯ ಭಾಗದ ಸಂಖ್ಯೆ, ಕ್ರಮಸಂಖ್ಯೆ ಹಾಗೂ ಎಫಿಕ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು, ಮತದಾರರ ಪಟ್ಟಿಯಲ್ಲಿ ನಮೂದಾಗಿರುವ ವಿವರಗಳಿಗೆ ಹೆಸರು, ಜನ್ಮದಿನಾಂಕ, ಸಂಬಂಧಿಯ ಹೆಸರು ಹಾಗೂ ಇತರೆ ತಿದ್ದುಪಡಿಗೆ ನಮೂನೆ-8ರಲ್ಲಿ ಅರ್ಜಿ ಸ್ವೀಕರಿಸಬೇಕು, ಜೊತೆಗೆ ಇತ್ತೀಚಿನ ಭಾವಚಿತ್ರ ಮತ್ತು ಪೂರಕ ದಾಖಲೆಗಳನ್ನು ಲಗತ್ತಿಸಿರಬೇಕು ಎಂದು ತಿಳಿಸಿದ ಅವರು, ಒಂದೇ ಕ್ಷೇತ್ರದ ಮತದಾರರ ಪಟ್ಟಿಯಿಂದ ಇನ್ನೊಂದು ಮತದಾರರ ಪಟ್ಟಿಗೆ ವರ್ಗಾವಣೆ ಬಯಸಿದಲ್ಲಿ ನಮೂನೆ 8ಎರಲ್ಲಿ ಅರ್ಜಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ