ಚಿತ್ರದುರ್ಗ:
ಚಿತ್ರದುರ್ಗ, ತುಮಕೂರು, ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಏ.8 ರಂದು ಆಗಮಿಸಬೇಕಾಗಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿ ಏ.9 ರಂದು ಮಧ್ಯಾಹ್ನ 1 ಗಂಟೆಗೆ ಬರುತ್ತಿದ್ದಾರೆ. ಹಾಗಾಗಿ ಬೃಹತ್ ಚುನಾವಣಾ ರ್ಯಾಲಿಯನ್ನು ಒಂದು ದಿನಕ್ಕೆ ಮುಂದೂಡಲಾಗಿದೆ ಎಂದು ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ತಿಳಿಸಿದರು.
ಬಿಜೆಪಿ.ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಲೋಕಸಭಾ ಚುನಾವಣೆ ರಾಜ್ಯದ ಉಸ್ತುವಾರಿ ಹೊತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಪದಾಧಿಕಾರಿಗಳಿಂದ ನಮಗೆ ಈ ಮಾಹಿತಿ ಸಿಕ್ಕಿತು. ತುಮಕೂರು, ಚಿತ್ರದುರ್ಗ, ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಿಂದ ಕಾರ್ಯಕರ್ತರು, ಅಭ್ಯರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಎಂದರು
ಆರ್.ಅಶೋಕ್, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಮೂರು ಕ್ಷೇತ್ರಗಳ ಹದಿನಾಲ್ಕು ಶಾಸಕರುಗಳು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಮೋದಿರವರ ಆಗಮನಕ್ಕೆ ಭದ್ರೆತೆಗಾಗಿ ಪೊಲೀಸ್ ಮತ್ತು ಎಸ್.ಪಿ.ಜಿ.ಯವರು ಪರಿಶೀಲನೆ ಆರಂಭಿಸಿದ್ದಾರೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು, ಮೋದಿಯನ್ನು ವೀಕ್ಷಿಸಲು ಬರುವವರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಮತ್ತು ವಿವಿಧ ಸಂಘ ಸಂಸ್ಥೆಗಳವರಿಗೆ, ಗಣ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಸನಗಳ ವ್ಯವಸ್ಥೆ ಮಾಡಲಾಗುವುದು. ಸೋಮವಾರದಿಂದ ಪಾಸ್ ವಿತರಿಸುವುದಾಗಿ ಹೇಳಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಆಗಮಿಸುವ ನಿರೀಕ್ಷೆಯಿದೆ. ಪೆಂಡಾಲ್ನಲ್ಲಿ 45 ರಿಂದ 50 ಸಾವಿರ ಕುರ್ಚಿಗಳನ್ನು ಹಾಕಲಾಗುವುದು. ಎಲ್.ಇ.ಡಿ.ಪರದೆ ಮೂಲಕ ಮೋದಿರವರ ಭಾಷಣವನ್ನು ನೋಡುವ ಅವಕಾಶ ಕಲ್ಪಿಸಲಾಗುವುದು ಎಂದರು
ತುಮಕೂರು ಕಡೆಯಿಂದ ಬರುವ ವಾಹನಗಳಿಗೆ ಐ.ಯು.ಡಿ.ಪಿ.ಲೇಔಟ್ ಸಮೀಪ ಪಾರ್ಕಿಂಗ್ ವ್ಯವಸ್ಥೆಯಿರುತ್ತದೆ, ಚಳ್ಳಕೆರೆಯಿಂದ ಬರುವ ವಾಹನಗಳಿಗೆ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ, ದಾವಣಗೆರೆ, ಹೊಳಲ್ಕೆರೆ, ಹೊಸದುರ್ಗದ ಕಡೆಯಿಂದ ಬರುವ ವಾಹನಗಳಿಗೆ ತುರುವನೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮೈದಾನದಲ್ಲಿ ಪಾರ್ಕಿಂಗ್ಗೆ ಅನುಕೂಲ ಕಲ್ಪಿಸಲಾಗುವುದು. ರ್ಯಾಲಿ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಅಗ್ನಿಶಾಮಕ ದಳದ ವಾಹನಗಳಿರುತ್ತವೆ. ಒಂದು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ರ್ಯಾಲಿಯಲ್ಲಿ ಕೆಲಸ ಮಾಡುವರು ಎಂದು ಕೆ.ಎಸ್.ನವೀನ್ ತಿಳಿಸಿದರು.
ರ್ಯಾಲಿಯಲ್ಲಿ ಭಾಗವಹಿಸುವ ನರೇಂದ್ರಮೋದಿರವರು ಒಂದುವರೆ ಗಂಟೆಗಳ ಕಾಲ ಚಿತ್ರದುರ್ಗದಲ್ಲಿದ್ದು, ನಂತರ ಮ್ಯಸೂರಿಗೆ ತೆರಳುವರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ.ಅಭ್ಯರ್ಥಿ ಎ.ನಾರಾಯಣಸ್ವಾಮಿ ಶಿರಾದಲ್ಲಿ ಆರು ಕಡೆ ಮತಯಾಚಿಸಿದ್ದಾರೆ. ನಾಯಕನಹಟ್ಟಿ, ತಳಕು, ಮೊಳಕಾಲ್ಮುರು ತಾಲೂಕು ರಾಂಪುರದಲ್ಲಿ ಬಿರುಸಿನ ಮತಯಾಚನೆ ಕೈಗೊಂಡಿದ್ದಾರೆ. ಶನಿವಾರ ಚಿತ್ರದುರ್ಗದಲ್ಲಿ ವಿವಿಧ ದೇವಸ್ಥಾನ ಹಾಗೂ ಪ್ರಮುಖರನ್ನು ಭೇಟಿಯಾಗಲಿದ್ದಾರೆ ಎಂರು
ಭೋವಿ ಗುರುಪೀಠದ ಇಮ್ಮಡಿಸಿದ್ದರಾಮೇಶ್ವರ ಸ್ವಾಮಿಗಳ ಮೇಲೆ ಚುನಾವಣಾ ಆಯೋಗ ಕೇಸು ದಾಖಲಿಸಿರುವುದರ ಹಿಂದೆ ಬಿಜೆಪಿ.ಅಭ್ಯರ್ಥಿ ಎ.ನಾರಾಯಣಸ್ವಾಮಿರವರ ಕೈವಾಡವಿದೆ ಎಂದು ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕೂಡಲೆ ಸ್ವಾಮೀಜಿ ಮೇಲಿನ ಕೇಸು ಹಿಂದಕ್ಕೆ ಪಡೆಯಬೇಕು. ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಕುತಂತ್ರ ಮಾಡುತ್ತಿದ್ದಾರೆ. ಬಿಜೆಪಿ.ಕೀಳು ರಾಜಕಾರಣ ಮಾಡುವುದಿಲ್ಲ. ಕಾಂಗ್ರೆಸ್ನ ಕೆಲವರು ಸಮುದಾಯಗಳ ಮಧ್ಯೆ ಬಿರುಕು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಧಾರ್ಮಿಕ ಗುರುಗಳ ಹೆಸರನ್ನು ಬಳಸುವ ರಾಜಕಾರಣ ನಮ್ಮದಲ್ಲ. ಸುಳ್ಳು ಅಪಪ್ರಚಾರ ನಿಲ್ಲಿಸಲಿ ಎಂದು ವಿರೋಧಿಗಳಿಗೆ ಎದುರೇಟು ನೀಡಿದರು.
ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಚಿತ್ರದುರ್ಗ ಲೋಕಸಭಾ ಚುನಾವಣೆ ಸಂಚಾಲಕ ಟಿ.ಜಿ.ನರೇಂದ್ರನಾಥ್, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ವಕ್ತಾರ ನಾಗರಾಜ್ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








