ಬೆಂಗಳೂರು
ಈ ಹಿಂದೆಒಂದು ಬಾರಿ ಜೆಡಿಎಸ್ ಜತೆ ಕೈ ಜೋಡಿಸಿ ಕಹಿ ಅನುಭವ ಉಂಟಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಭವಿಷ್ಯದಲ್ಲಿ ಆ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂದು ಬಿಜೆಪಿ ಶಾಸಕರು ಪಟ್ಟು ಹಿಡಿದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಉಪಚುನಾವಣೆಯಲ್ಲಿ 7ರಿಂದ 8 ಸ್ಥಾನ ಗೆದ್ದರೆ ಮುಂದಿನ ಅವಧಿವರೆಗೂ ನಮ್ಮ ಸರ್ಕಾರವನ್ನು ಯಾರೊಬ್ಬರೂ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಜೆಡಿಎಸ್‍ತನ್ನ ಅಸ್ತಿರ ಉಳಿಸಿಕೊಳ್ಳುವ ಕಾರಣಕ್ಕಾಗಿ ಬಿಜೆಪಿ ಜತೆ ಸಖ್ಯ ಬೆಳೆಸಲು ಮುಂದಾಗಿದೆ. ಇದರ ಒಳ ಸುಳಿವಿನಲ್ಲಿ ಬಿದ್ದರೆ ಬಿಜೆಪಿಗೆ ಅಪಾಯ ಕಟ್ಟಿಟ್ಟ ಬುತ್ತಿಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಇತ್ತೀಚೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ದಳಪತಿಗಳು ಬಿಜೆಪಿ ಬಗ್ಗೆ ಮೃದುಧೋರಣೆ ಅನುಸರಿಸುತ್ತಿರುವ ಬಗ್ಗೆ ಸಾಕಷ್ಟು ಲೆಕ್ಕಾಚಾರವಿದೆ. ಪಕ್ಷದ ಅಸ್ಥಿತ್ವಕ್ಕೆ ಧಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನಮ್ಮಜತೆ ಕೈ ಜೋಡಿಸುವ ಮಾತನಾಡುತ್ತಿದ್ದಾರೆ. ಇದರ ಮರ್ಮವನ್ನುಅರ್ಥ ಮಾಡಿಕೊಳ್ಳದಿದ್ದರೆ ಮತ್ತೆ ನಾವು ಮೋಸ ಹೋಗುವುದು ಸೂರ್ಯ, ಚಂದ್ರರಷ್ಟೇ ಸತ್ಯಎಂದು ಶಾಸಕರು ಹೇಳಿದ್ದಾರೆ.
ಈಗಾಗಲೇ ಪಕ್ಷದ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್‍ಜತೆ ಕೆಲವು ಶಾಸಕರು ಮಾತುಕತೆ ನಡೆಸಿದ್ದು, ಜೆಡಿಎಸ್‍ನಿಂದ ಮುಖ್ಯಮಂತ್ರಿಗಳು ಅಂತರ ಕಾಯ್ದುಕೊಳ್ಳಬೇಕೆಂದು ಸೂಚನೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಉಪ ಚುನಾವಣೆ ಫಲಿತಾಂಶದ ನಂತರ ಜೆಡಿಎಸ್‍ನಲ್ಲಿ ಸಾಕಷ್ಟು ಬದಲಾವಣೆಯಾಗುವ ನಿರೀಕ್ಷೆಇದೆ. ಕೆಲವು ಶಾಸಕರು ಕಾಂಗ್ರೆಸ್ ಜತೆ, ಇನ್ನು ಕೆಲ ಶಾಸಕರು ಬಿಜೆಪಿ ಜತೆ ಕೈ ಜೋಡಿಸಲು ಮುಂದಾಗಿದ್ದಾರೆ. ಆ ಪಕ್ಷದ ನಾಯಕರ ನಡವಳಿಕೆಗಳಿಂದ ಬೇಸತ್ತು ಪ್ರಮುಖರು ಹೊರ ಹೋಗುವ ಸುಳಿವು ಅರಿತೇ ಅಪ್ಪ-ಮಕ್ಕಳು ರಾಜಕೀಯ ದಾಳ ಉರುಳಿಸಿದ್ದಾರೆ ಎಂದು ಶಾಸಕರು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.
ಹೇಳಿ ಕೇಳಿ ಕುಮಾರಸ್ವಾಮಿ ಯಡಿಯೂರಪ್ಪನವರ ರಾಜಕೀಯ ಏಳಿಗೆಯನ್ನು ಸಹಿಸಿಕೊಳ್ಳುವುದಿಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ತೀರಾ ಇತ್ತೀಚಿನ ವರೆಗೆ ನಮ್ಮ ಸರ್ಕಾರದ ಮೇಲೆ ಕೆಂಡಕಾರುತ್ತಿದ್ದರು. ಇದ್ದಕ್ಕಿದ್ದಂತೆ ಯುಟರ್ನ್ ಹೊಡೆದಿರುವ ಉದ್ದೇಶವೇ ಜೆಡಿಎಸ್‍ನಲ್ಲಿನ ಬೆಳವಣಿಗೆಗಳೇ ಕಾರಣಎಂಬುದು ಬಿಜೆಪಿಯ ಅನುಮಾನ. ಈಗಿನ ಲೆಕ್ಕಚಾರದಲ್ಲಿ ಜೆಡಿಎಸ್‍ನ 20ಕ್ಕೂ ಹೆಚ್ಚು ಶಾಸಕರು ಬೇರೆ ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಹೀಗೆ ಶಾಸಕರು ಜೆಡಿಎಸ್‍ನಿಂದ ಹಂತ ಹಂತವಾಗಿದೂರ ಸರಿದರೆ ಕೊನೆಗೆ ಪಕ್ಷದ ಅಸ್ಥಿತ್ವವೇ ಉಳಿಯುವುದಲ್ಲ ಎಂಬ ಕಾರಣಕ್ಕಾಗಿ ಕುಮಾರಸ್ವಾಮಿ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ಲಾಭವಿಲ್ಲದೆ ಯಾವುದೇ ತೀರ್ಮಾನ ಮಾಡುವುದಿಲ್ಲ ಎಂಬುದನ್ನು ಬಿಜೆಪಿಯ ಪ್ರಮುಖರು ಹೇಳಿದ್ದಾರೆ.
ಕುಮಾರಸ್ವಾಮಿ ಕಾಲಾವಧಿಯ ದೂರವಾಣಿಕದ್ದಾಲಿಕೆ ಹಾಗೂ ಐಎಂಎನಲ್ಲಿ ನಡೆದ ಹಗರಣದಲ್ಲಿತನಿಖೆ ನಡೆಯುತ್ತಿದೆ. ಯಾವುದೇ ಸಂದರ್ಭದಲ್ಲಿ ಅವರ ವಿರುದ್ಧ ಸಿಬಿಐ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಬಹುದು.
ಡಿ.ಕೆ.ಶಿವಕುಮಾರ್ ಅವರಂತ ಪ್ರಬಲ ನಾಯಕರನ್ನೇ ಕೇಂದ್ರೀಯ ತನಿಖಾ ಸಂಸ್ಥೆಗಳು ಬಿಡದಿರುವಾಗಇನ್ನು ಕುಮಾರಸ್ವಾಮಿಯನ್ನು ಬಿಟ್ಟಾರೆಯೆ ಎಂಬ ಆತಂಕ ಉಂಟಾಗಿದೆ.ಈ ಎಲ್ಲಾ ಲೆಕ್ಕಾಚಾರ ಹಾಕಿಯೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ಕೈ ಜೋಡಿಸಲು ಮುಂದಾಗಿದೆ ಎಂಬ ಮಾತು ಕಮಲ ಪಾಳ್ಯದಲ್ಲಿ ಕೇಳಿ ಬಂದಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ