ಚಿತ್ರದುರ್ಗ
ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕ್ಯಾದಿಗೆರೆ ಗ್ರಾಮದಲ್ಲಿ ಶಂಕಿತ ಡೆಂಗ್ಯೂ ಜ್ವರ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಗ್ರಾಮದ ಮನೆ, ಮನೆಗಳಲ್ಲಿ ಲಾರ್ವಾ ಸಮೀಕ್ಷೆ ಕೈಗೊಂಡು, ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಗ್ರಾಮದ ಮನೆಗಳಿಗೆ ಭೇಟಿ ನೀಡಿ, ಜ್ವರ ಸಮೀಕ್ಷೆ, ಲಾರ್ವಾ ಸಮೀಕ್ಷೆ ಜರುಗಿಸಲಾಯಿತು ಬಹುತೇಕ ಮನೆಗಳಲ್ಲಿ ಲಾರ್ವಾ ಸಾಂದ್ರತೆ ಹೆಚ್ಚಾಗಿ ಕಂಡು ಬಂದಿದ್ದು, ಕ್ಯಾದಿಗೆರೆ ನ್ಯಾಯಬೆಲೆ ಅಂಗಡಿಯ ಮುಂದೆ ಗುಂಪು ಸಭೆ ಜರುಗಿಸಿ, ಲಾರ್ವಾ ನಿಯಂತ್ರಣದ ಬಗ್ಗೆ, ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಅವರು ಆರೋಗ್ಯ ಶಿಕ್ಷಣ ನೀಡಿದರು. ಡೆಂಗ್ಯೂ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಹೆಚ್ಚಾಗಿದೆ.
ಸಾರ್ವಜನಿಕರು ತಮ್ಮ ಮನೆಯ ಸುತ್ತ ಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ನೀರು ಸಂಗ್ರಹಿಸುವ ಪರಿಕರಗಳನ್ನು ವಾರಕ್ಕೊಮ್ಮೆಯಾದರೂ, ತೊಳೆದು ನೀರು ಸಂಗ್ರಹಿಸಿ ಮುಚ್ಚಳ ಮುಚ್ಚಬೇಕು. ಯಾವುದೇ ಜ್ವರ ಬಂದ ನಂತರ ಕಷ್ಟ ಪಡುವ ಬದಲು ಜ್ವರವೇ ಬಾರದ ಹಾಗೆ ಮುಂಜಾಗ್ರತಾ ಕ್ರಮ ವಹಿಸಿ ಎಂದರು.
ಎಂ.ಖಾಸಿಂ ಸಾಬ್ ಸೊಳ್ಳೆ ನಿಯಂತ್ರಣ ಕ್ರಮದ ಬಗ್ಗೆ, ರಕ್ತಲೇಪನ ಸಂಗ್ರಹಣೆ ಮತ್ತು ಮುಂಜಾಗ್ರತೆಯ ಬಗ್ಗೆ ತಿಳಿಸಿದರು, ಈ ಸಂದರ್ಭದಲ್ಲಿ ಡೆಂಗ್ಯು ನಿಯಂತ್ರಣಾ ಮಾಹಿತಿಯ ಕರಪತ್ರಗಳನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ, ಬಾಗೇಶ್ ಉಗ್ರಾಣ್, ಆರೋಗ್ಯ ಸಹಾಯಕ, ಗಾಯತ್ರಮ್ಮ, ಸಾವಿತ್ರಮ್ಮ, ವೀರೇಶ್, ಸುಮ ಆಶಾ ಕಾರ್ಯಕರ್ತೆ ಭಾಗವಹಿಸಿದ್ದರು.