ಮಧುಗಿರಿ :
ಸರ್ಕಾರದ ಯೋಜನೆಗಳು ಆರ್ಹ ಫಲಾನುಭವಿಗಳಿಗೆ ತಲುಪಬೇಕಾದರೆ ಗ್ರಾಮ ಸಭೆಗಳಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಖಡ್ಡಾಯವಾಗಿ ಹಾಜರಿದ್ದು ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಪಿಡಿಓಗಳಿಗೆ ಸೂಚಿಸಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಮಳೆಯ ಅಭಾವದಿಂದಾಗಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದಿದೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕೆರೆಯ ಅಂಗಳಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಬೇಕಾಗಿದೆ ನಾಗರೀಕರಿಗೆ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ಹಿರಿಯ ಅಧಿಕಾರಿಗಳು ಸಭೆಗೆ ಬರುವಾಗ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಿ ಗೈರು ಹಾಜರಾದವರಿಗೆ ನೋಟೀಸ್ ನೀಡಿದರೆ ಸಾಲದು. ಒಂದಿಬ್ಬರಿಗೆ ಅಮಾನತ್ತು ಮಾಡಲು ಶಿಫಾರಸ್ಸು ಮಾಡುವಂತೆ ತಾ.ಪಂ ಇ.ಓಗೆ ಖಡಕ್ ಎಚ್ಚರಿಕೆ ನೀಡಿದರು.
ಕೆ.ಸಿ.ರೊಪ್ಪ ಮುರಾರ್ಜಿ ವಸತಿ ಶಾಲೆಯಲ್ಲಿ ಈ ಹಿಂದೆ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸುತ್ತಿದ್ದ ಧನಂಜಯ ಎಂಬುವವರು ನನ್ನ ದೂರವಾಣಿಗೆ ಅಪರಿಚಿತರಿಂದ ಕರೆ ಮಾಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ಆತನ ವರ್ಗಾವಣೆಯಲ್ಲಿ ನನ್ನ ಕೈವಾಡವಿದೆ ಎಂದು ನನ್ನ ವಿರುದ್ದ ಕೆಲವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾನೆ ಇದರಿಂದ ನನಗೆ ತೀವ್ರ ನೋವಾಗಿದ್ದು, ಇಲಾಖೆ ತನಿಖೆಗೆ ಒಳಪಡಿಸುವಂತೆ ಜಿ.ಪಂ ಸದಸ್ಯ ಹೆಚ್. ಕೆಂಚಮಾರಯ್ಯ ಶಾಸಕರಲ್ಲಿ ಮನವಿ ಮಾಡಿದರು.
ಬೆಸ್ಕಾಂ ಇಲಾಖೆಯವರು ರೈತರಿಗೆ ಸಕಾಲಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಮತ್ತು ಟಿ.ಸಿಗಳನ್ನು ಬದಲಾಯಿಸದೇ ಹೋದರೆ ರೈತರು ಆಕ್ರೋಶಿತರಾಗಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವ ಕಾಲ ದೂರವಿಲ್ಲ. ರೈತರ ಜೊತೆ ಚಲ್ಲಾಟವಾಡಬೇಡಿ ಅವರ ಕೆಲಸಗಳನ್ನು ಕೂಡಲೇ ಮಾಡಿಕೊಡಿ ಎಂದು ಶಾಸಕರು ಬೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಬಕಾರಿ ಇಲಾಖೆ : ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಕ್ರಮ ಮದ್ಯ ಮರಾಟವಾಗುತ್ತಿದ್ದು, ಮಹಿಳೆಯರು ರಾತ್ರಿ ವೇಳೆ ಓಡಾಡಲು ಕಷ್ಟವಾಗುತ್ತಿದೆ ಎಂದು ನನ್ನ ಬಳಿ ದೂರುಗಳು ಬಂದಿವೆ. ಅಬಕಾರಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದಾಗ ಸಿಬ್ಬಂದಿ ಕೊರತೆ ಮತ್ತು ಹಳ್ಳಿಗಳಲ್ಲಿ ಪೆಟ್ಟಿಗೆ ಅಂಗಡಿಗಳು ಹೆಚ್ಚುತ್ತಿರುವುದರಿಂದ ದಾಳಿ ಮಾಡಲು ಕಷ್ಟವಾಗುತ್ತಿದೆ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಶಿಫಾರಸ್ಸು ಮಾಡುವುದರಿಂದ ಪ್ರಕರಣಗಳನ್ನು ದಾಖಲಿಸಲು ಆಗುತ್ತಿಲ್ಲ ಎಂದು ಅಬಕಾರಿ ಅಧಿಕಾರಿ ಶ್ರೀಲಕ್ಷ್ಮಿ ಶಾಸಕರಲ್ಲಿ ತಮ್ಮ ಇಲಾಖೆಯ ಅಸಹಾಯಕತೆ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆ : 108 ಆಂಬ್ಯುಲೆನ್ಸ್ ಕೊರತೆಯ ಬಗ್ಗೆ ಸಭೆಯ ಗಮನಕ್ಕೆ ತಂದಾಗ ಸರ್ಕಾರದಿಂದ ಶೀಘ್ರ ಹೊಸ ವಾಹನಗಳನ್ನು ಮಂಜೂರು ಮಾಡಿಸುವುದಾಗಿ ತಿಳಿಸಿದ ಶಾಸಕರು ಹೆಚ್1 ಎನ್1 ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ|| ರಮೇಶ್ ಬಾಬುಗೆ ಸೂಚಿಸಿದರು.
ಸಭೆಯಲ್ಲಿ ಕೃಷಿ, ರೇಷ್ಮೆ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಎಪಿಎಂಸಿ, ಇನ್ನಿತರ ಇಲಾಖೆಗಳ ಬಗ್ಗೆ ಚರ್ಚಿಸಲಾಯಿತು.
ಜಿ.ಪಂ ಸದಸ್ಯರಾದ ಜಿ.ಜೆ. ರಾಜಣ್ಣ, ಮಂಜುಳಾ ಆದಿನಾರಾಯಣ ರೆಡ್ಡಿ, ಚೌಡಪ್ಪ, ಕೆಂಚಮಾರಯ್ಯ, ಕೊಂಡವಾಡಿ ತಿಮ್ಮಯ್ಯ, ತಾ.ಪಂ ಅಧ್ಯಕ್ಷೆ ಇಂದಿರಾದೇನಾನಾಯ್ಕ, ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ, ಎಪಿಎಂಸಿ ಅಧ್ಯಕ್ಷ ಎಂ.ಬಿ. ಮರಿಯಣ್ಣ, ತಹಶೀಲ್ದಾರ್ ಎ.ತಿಪ್ಪೇಸ್ವಾಮಿ, ತಾ.ಪಂ ಇ.ಓ ಮೋಹನ್ ಕುಮಾರ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ