ಪ್ರಸಾದಕ್ಕೆ ಎಕ್ಸ್ ಪೈರಿ ಡೇಟ್ ಕಡ್ಡಾಯ…!!

ಬೆಂಗಳೂರು

       ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ದೇವಾಲಯಗಳಲ್ಲಿ ಪ್ರಸಾದ ವಿತರಣೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

         ರಾಜ್ಯದ ದೇವಸ್ಥಾನಗಳಲ್ಲಿ ಪ್ಯಾಕ್ ಮಾಡಿ ವಿತರಿಸುವ ಪ್ರಸಾದದ ಮೇಲೆ ತಯಾರಿಸಿದ ದಿನ ಹಾಗೂ ಎಷ್ಟು ದಿನಗಳವರೆಗೆ ಮಾತ್ರ ಸೇವಿಸಬಹುದು ಎಂಬ ಮಾಹಿತಿ ನಮೂದಿಸುವುದು ಕಡ್ಡಾಯವಾಗಲಿದೆ. ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಯಮ ಪ್ರಕಾರ `ಎಕ್ಸ್ ಪೈರಿ ಡೇಟ್ ‘ ನಮೂದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

         ಮುಜರಾಯಿ ಇಲಾಖೆ ದೇವಾಲಯಗಳು ಸೇರಿದಂತೆ ಎಲ್ಲಾ ಖಾಸಗಿ ದೇವಾಲಯಗಳು ಹಾಗೂ ಮಠಗಳಿಗೂ ಈ ನಿಯಮ ಅನ್ವಯವಾಗಲಿದೆ. ಭಕ್ತರಿಗೆ ನೀಡುವ ಪ್ರಸಾದದ ಪ್ಯಾಕೆಟ್‍ನಲ್ಲಿ ದೇವಾಲಯ ಹೆಸರು,ತಯಾರಾದ ದಿನಾಂಕ,ಬ್ಯಾಚ್ ನಂಬರ್,ತೂಕ, ಬಳಕೆಯ ಅವಧಿ(ಎಕ್ಸ್ ಪೈರಿ ಡೇಟ್, ಯೂಸ್ ಬಿಫೋರ್, ಬೆಸ್ಟ್ ಬಿಫೋರ್)ಪ್ರಸಾದಕ್ಕೆ ಬಳಸಿರುವ ಪದಾರ್ಥಗಳನ್ನು ಕಡ್ಡಾಯವಾಗಿ ನಮೂದಿಸಬೇಕು

         ಕೇವಲ ಪ್ರಸಾದಕ್ಕೆ ಮಾತ್ರವಲ್ಲದೇ ತೀರ್ಥದ ಬಾಟಲ್‍ಗೂ ಈ ನಿಯಮ ಅನ್ವಯವಾಗಲಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ತಿಂದು 17 ಮಂದಿ ಮೃತಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಈ ರೀತಿಯ ನಿಯಮವನ್ನು ಜಾರಿಗೆ ತಂದಿದೆ.

        ಈ ಹಿಂದೆಯೇ ಮುಜರಾಯಿ ಇಲಾಖೆ, ದೇವರ ನೈವೇದ್ಯ ಮತ್ತು ದಾಸೋಹ ತಯಾರಿಸುವ ಕೋಣೆಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕು. ಪ್ರಮುಖವಾಗಿ ದೇವಾಲಯದ ಅಡುಗೆ ಕೋಣೆಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ಮೇಲೆ ಕಟ್ಟುನಿಟ್ಟಿನ ನಿಗಾವಹಿಸುವುದು. ತಯಾರಿಸಿದ ನೈವೇದ್ಯ/ ಅಡುಗೆಗೆ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಬೇಕು ಮತ್ತು ದೇವಾಲಯಗಳಲ್ಲಿ ತಯಾರಿಸುವ ಪ್ರಸಾದವನ್ನು ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಬೇಕು. ಈ ರೀತಿಯ 20 ನಿಯಮಗಳನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap