ಬೆಂಗಳೂರು
ಸ್ಯಾಂಡಲ್ ವುಡ್‍ನ ಪ್ರಮುಖ ನಟರಾದ ಸುದೀಪ್, ಶಿವರಾಜ್ ಕುಮಾರ್, ಪುನಿತ್ ರಾಜ್ ಕುಮಾರ್, ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕೆಜಿಎಫ್ ಚಿತ್ರ ನಿರ್ಮಾಪಕ ಕಿರಂಗದೂರು ವಿಜಯ್, ದಿ ವಿಲನ್ ನಿರ್ಮಾಪಕ ಸಿ.ಆರ್. ಮನೋಹರ್, ಸಿ. ಜಯಣ್ಣ ಮತ್ತಿತರರ ಕಚೇರಿ, ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಏಕಕಾಲದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವ್ಯಾಪಕ ದಾಳಿ ನಡೆಸಿತು.
ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಆದಾಯ ತೆರಿಗೆ ಇಲಾಖೆ ದಾಳಿ ಇದಾಗಿದ್ದು, ಚಿತ್ರೋದ್ಯಮ ವಲಯದಲ್ಲಿ ಇದು ಭಾರಿ ಸಂಚಲನ ಮೂಡಿಸಿದೆ. ಆದಾಯ ತೆರಿಗೆ ಅಧಿಕಾರಿಗಳು ಇಡೀ ದಿನ ನಡೆಸಿದ ಶೋಧ ಕಾರ್ಯಾಚರಣೆಯಿಂದ ಅಪಾರ ಪ್ರಮಾಣದಲ್ಲಿ ಆಸ್ತಿ, ಪಾಸ್ತಿ, ತೆರಿಗೆ ವಂಚನೆ ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ.
ಸುದೀಪ್ ಅವರ ಜೆಪಿ ನಗರದ ಮನೆ, ಶಿವರಾಜ್ ಕುಮಾರ್ ಅವರ ಹೆಬ್ಬಾಳ ರಿಂಗ್ ರಸ್ತೆಯ ಮನ್ಯತಾ ಟೆಕ್ ಪಾರ್ಕ್ ಬಳಿ ಇರುವ ನಿವಾಸ, ಯಶ್ ಅವರ ಕತ್ರಿಗುಪ್ಪೆಯಲ್ಲಿರುವ ಮನೆ, ತಾಜ್ ವೆಸ್ಟ್ ಎಂಡ್ ಹೋಟೆಲ್‍ನ ಕೊಠಡಿ, ನಾಗರಬಾವಿಯ ಎನ್.ಜಿ.ಎಫ್. ಬಡಾವಣೆಯಲ್ಲಿರುವ ಕೆಜಿಎಫ್ ಚಿತ್ರ ನಿರ್ಮಾಪಕ ಕಿರಂಗದೂರು ವಿಜಯ್ ಅವರ ನಿವಾಸದ ಮೇಲೆ ದಾಳಿ ನಡೆಸಿದರು.
ದಾಳಿ ನಡೆಸಿದ ಮನೆಗಳಿಂದ ಹಲವಾರು ಚೀಲಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಪತ್ರಗಳನ್ನು ಸಂಗ್ರಹಿಸಿದ್ದು, ಈ ಬಗ್ಗೆ ವ್ಯಾಪಕ ತನಿಖೆ ನಡೆಸುವ ಸೂಚನೆ ನೀಡಿದ್ದಾರೆ.
ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ಸುದೀಪ್ ತಮ್ಮ ಶೂಟಿಂಗ್ ಮೊಟಕುಗೊಳಿಸಿ ತಮ್ಮ ನಿವಾಸಕ್ಕೆ ಆಗಮಿಸಿ ಐಟಿ ಅಧಿಕಾರಿಗಳ ವಿಚಾರಣೆ ಎದುರಿಸಿದರು. ಮುಂಬೈನಲ್ಲಿದ್ದ ಯಶ್ ಅವರು ನೇರವಾಗಿ ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಆಗಮಿಸಿ ಐಟಿ ಅಧಿಕಾರಿಗಳ ವಿಚಾರಣೆ ಎದುರಿಸಿದರು.
ಸುದೀಪ್ ಮಾತನಾಡಿ, ಈ ದಾಳಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇದ್ದಂತಿಲ್ಲ. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿರಬಹುದು. ದಿ ವಿಲನ್, ಕೆಜಿಎಫ್ ಮತ್ತು ನಟಸಾರ್ವಭೌಮ ದೊಡ್ಡ ಬಜೆಟ್ ಚಿತ್ರಗಳು. ಹಾಗಾಗಿ ದಾಳಿ ನಡೆದಿರಬಹುದು. ನಾವು ಈ ದಾಳಿಯನ್ನು ಪೂರ್ವಗ್ರಹದಿಂದ ನೋಡುವುದಿಲ್ಲ ಎಂದರು.ನಟ ಯಶ್ ಮಾತನಾಡಿ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ತಮ್ಮ ಕೆಲಸ ಮಾಡಲು ಬಿಡಬೇಕು. ಅಧಿಕಾರಿಗಳಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲಾಗುವುದು ಎಂದರು.
ಕನ್ನಡ ಚಿತ್ರ ರಂಗದ ಇತಿಹಾಸದಲ್ಲಿ ನಟರು, ನಿರ್ಮಾಪಕರ ಮೇಲೆ ನಡೆದ ಅತಿದೊಡ್ಡ ಆದಾಯ ತೆರಿಗೆ ಇಲಾಖೆ ದಾಳಿ ಇದಾಗಿದೆ ಎನ್ನಲಾಗಿದೆ. ಏಕಕಾಲದಲ್ಲಿ ಸುಮಾರು 25 ಕಡೆ 200ಕ್ಕೂ ಅಧಿಕ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ಚಂದನವನದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ , ನಿರ್ಮಾಪಕ ಜಯಣ್ಣ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಸದಾಶಿವನಗರದ ಪುನೀತ್ ರಾಜ್ ಕುಮಾರ್ ಅವರ ಮನೆಗೆ ಎರಡು ಖಾಸಗಿ ವಾಹನಗಳಲ್ಲಿ ಬಂದ 8 ಅಧಿಕಾರಿಗಳು ಮುಂಜಾನೆಯಿಂದಲೇ ದಾಖಲೆ ತಪಾಸಣೆ ನಡೆಸಿದರು. ಅದೇ ರೀತಿ ನಾಗವಾರದಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿವಾಸ, ಜೆ.ಪಿ.ನಗರದಲ್ಲಿರುವ ಸುದೀಪ್ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ಮಹಾಲಕ್ಷ್ಮಿ ಲೇಔಟ್ ನ ನಾಗಪುರದ ರಾಕ್ ಲೈನ್ ವೆಂಕಟೇಶ್ ನಿವಾಸ, ನಾಗರಬಾವಿಯ ವಿಜಯ್ ಕಿರಗಂದೂರು ನಿವಾಸ, ಎಚ್‍ಎಸ್‍ಆರ್ ಲೇಔಟ್ ನಲ್ಲಿರುವ ಮನೋಹರ್ ನಿವಾಸದಲ್ಲಿಯೂ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ