ಸಫಾಯಿ ಕರ್ಮಚಾರಿಗಳಿಗೆ ಹೆಲ್ತ್ ಕಾರ್ಡ್ ಕೊಡಿ

ಚಿತ್ರದುರ್ಗ

          ಚಿತ್ರದುರ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಫಾಯಿ ಕರ್ಮಚಾರಿಗಳಿಗೆ, ಪೌರಕಾರ್ಮಿಕರಿಗೆ ಹೆಲ್ತ್ ಕಾರ್ಡ್ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ನಿಗಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

          ಜಿಲ್ಲೆಯ ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿದ್ದ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಜಗದೀಶ್ ಹಿರೇಮನಿ ಅವರೊಂದಿಗೆ ನಡೆದ ಕುಂದುಕೊರತೆ ಅಹವಾಲು ಸಭೆಯಲ್ಲಿ, ತಮಗೆ ಹೆಲ್ತ್ ಕಾರ್ಡ್ ನೀಡಬೇಕು ಹಾಗೂ ವಸತಿ ಮಂಜೂರು ಮಾಡುವಂತೆ ಮನವಿ ಮಾಡಿದ್ದರು, ಈ ಕುರಿತು ಅಧಿಕಾರಿಗಳು ಕೈಗೊಂಡ ಕ್ರಮಗಳೇನು ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು.

            ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ಜಿಲ್ಲೆಯ 07 ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಿಗೆ ಎಲ್ಲ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ. ನಿಯಮಾನುಸಾರ ವೇತನವನ್ನು ಕಾಲಕಾಲಕ್ಕೆ ನೀಡಲು ಕ್ರಮ ಕೈಗೊಂಡಿದ್ದು, ಅವರಿಗೆ ಬೆಳಗಿನ ಉಪಹಾರ, ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿ, ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಖಾಯಂ ಪೌರಕಾರ್ಮಿಕರು, ನಿವೇಶನ ಹೊಂದಿದ್ದಲ್ಲಿ, ಗೃಹಭಾಗ್ಯ ಯೋಜನೆಯಡಿ, ಮನೆ ಕಟ್ಟಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು
ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಮಂಜೂರಾಗಿರುವ ಹುದ್ದೆಗಳಿಗೆ ಅನುಗುಣವಾಗಿ ಖಾಯಂಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಜಿಲ್ಲಾಧಿಕಾರಿಗಳು ಮಾತನಾಡಿ, ಎಲ್ಲ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸುವ ಸಂದರ್ಭದಲ್ಲಿ, ಅವರ ಆರೋಗ್ಯ ಸ್ಥಿತಿಗತಿಗಳೇನು, ಅಗತ್ಯವಿರುವ ಚಿಕಿತ್ಸೆ, ರಕ್ತದ ಗುಂಪು ಇತ್ಯಾದಿ ವಿವರಗಳನ್ನು ನಮೂದಿಸಿ, ಪ್ರತಿಯೊಬ್ಬರಿಗೂ ಹೆಲ್ತ್ ಕಾರ್ಡ್ ನೀಡಬೇಕು. ಪೌರಕಾರ್ಮಿಕರಿಗೆ ಜೀವವಿಮೆ ಹಾಗೂ ಗುಂಪು ವಿಮೆ ಮಾಡಿಸಿ, ಪ್ರೀಮಿಯಂ ಮೊತ್ತವನ್ನು ಇಲಾಖೆಯಿಂದ ತುಂಬಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

            ಪೌರಕಾರ್ಮಿಕರು ನಿವೇಶನ ಖರೀದಿಸಲು ಸಹಾಯಧನ ನೀಡಲು ಅವಕಾಶವಿದ್ದು, ಈ ಕುರಿತು ಅವರಿಗೆ ಮನವರಿಕೆ ಮಾಡಿಕೊಡಬೇಕು. ಪೌರಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರು ಮತ್ತು ಮಕ್ಕಳಿಗೆ ಶಿಕ್ಷಣ, ಪ್ರತಿಷ್ಠಿತ ಶಾಲೆಗಳಲ್ಲಿ ದಾಖಲಾತಿ, ವಸತಿ ಶಾಲೆಗಳಲ್ಲಿ ನೇರ ಪ್ರವೇಶ, ವಿದ್ಯಾರ್ಥಿ ವೇತನ ಸೇರಿದಂತೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳು ಹಾಗೂ ನೀಡಲಾಗುವ ಸವಲತ್ತುಗಳ ಕುರಿತು ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ಸೂಚನಾ ಫಲಕಗಳಲ್ಲಿ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

          ನಗರಸಭೆ ಪೌರಾಯುಕ್ತ ಚಂದ್ರಪ್ಪ ಅವರು ಮಾತನಾಡಿ, ಪೌರಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ನಗರದ ಬಸವೇಶ್ವರ ಆಸ್ಪತ್ರೆಗೆ ನಿಗದಿ ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.
ಬ್ಯಾಂಕ್‍ಗಳು ಸಹಕರಿಸುತ್ತಿಲ್ಲ

            ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರಿಗೆ, ಅವಲಂಬಿತರಿಗೆ ಹಾಗೂ ವಿವಿಧ ಯೋಜನೆಯ ಫಲಾನುಭವಿಗಳಿಗೆ ವಸತಿ ಯೋಜನೆಗೆ ಸಾಲ ಸೌಲಭ್ಯ ಒದಗಿಸುವಂತೆ ನಗರ, ಸ್ಥಳೀಯ ಸಂಸ್ಥೆಗಳಿಂದ ಫಲಾನುಭವಿಗಳ ಪಟ್ಟಿಯನ್ನು, ಮಂಜೂರಾತಿ ಆದೇಶದೊಂದಿಗೆ ಬ್ಯಾಂಕ್‍ಗಳಿಗೆ ಸಲ್ಲಿಸಿದರೂ, ಬ್ಯಾಂಕ್‍ಗಳು ಸಾಲವನ್ನು ನೀಡದೆ ಸತಾಯಿಸುತ್ತಿವೆ. ಇದುವರೆಗೂ ಕೇವಲ 53 ಫಲಾನುಭವಿಗಳಿಗೆ ಮಾತ್ರ ಬ್ಯಾಂಕ್‍ಗಳು ಸಾಲವನ್ನು ಮಂಜೂರು ಮಾಡಿವೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ಅಸಹಾಯಕತೆ ವ್ಯಕ್ತಪಡಿಸಿದರು.

          ಇದರಿಂದ ತೀವ್ರ ಅಸಮಾಧಾನಗೊಂಡ ಜಿಲ್ಲಾಧಿಕಾರಿಗಳು, ಬ್ಯಾಂಕ್‍ಗಳು, ವಸತಿ ಯೋಜನೆಗಳಿಗೆ ಸರ್ಕಾರದ ನಿಯಮಗಳಂತೆ ಸಾಲ ಸೌಲಭ್ಯವನ್ನು ಫಲಾನುಭವಿಗಳಿಗೆ ಒದಗಿಸಬೇಕು. ಈ ಕುರಿತು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಕೂಡಲೆ ಸಂಬಂಧಪಟ್ಟ ಬ್ಯಾಂಕ್‍ಗಳೊಂದಿಗೆ ಚರ್ಚಿಸಿ, ಇತ್ಯರ್ಥಪಡಿಸಬೇಕು ಎಂದು ತಾಕೀತು ಮಾಡಿದರು.

            ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಮಾತನಾಡಿ, ಇತ್ತೀಚೆಗೆ ಚಿತ್ರದುರ್ಗದ ಕೆಎಸ್‍ಆರ್‍ಟಿ ಬಸ್ ನಿಲ್ದಾಣದಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ಪ್ರಕರಣ ಕುರಿತು ವರದಿಯಾದ ಹಿನ್ನೆಲೆಯಲ್ಲಿ, ಸ್ವಚ್ಛತೆಯ ಗುತ್ತಿಗೆದಾರರ ವಿರುದ್ಧ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಹಂತದಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link