“ನನಗೆ ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ನೋಡುವ ಆಸೆ”: ದೇವೇಗೌಡ

ಬೆಂಗಳೂರು

       ಲೋಕಸಭಾ ಚುನಾವಣೆಯ ನಂತರ ನಿಮ್ಮನ್ನು ಪ್ರಧಾನಿ ಹುದ್ದೆಯಲ್ಲಿ ನೋಡುವ ಆಸೆ ನನಗಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‍ಗೆ ಕಬ್ಬಿಣದ ಕಡಲೆಯಾಗಿರುವ ಕ್ಷೇತ್ರಗಳನ್ನು ಗೆಲ್ಲಿಸಿಕೊಡಲು ಸಕಲ ಪ್ರಯತ್ನ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ಜೆಡಿಎಸ್ ವರಿಷ್ಟ,ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭರವಸೆ ನೀಡಿದ್ದಾರೆ.

        ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು,ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಮೈತ್ರಿಕೂಟ ಗೆಲ್ಲುತ್ತದೆ ಎಂದು ಭರವಸೆ ನೀಡಲಾರೆ.ಆದರೆ ನಿಶ್ಚಿತವಾಗಿ ಹದಿನೈದರಿಂದ ಹದಿನಾರು ಸೀಟುಗಳನ್ನು ಗೆಲ್ಲಿಸಿಕೊಡಲು ಶ್ರಮಿಸುತ್ತೇನೆ ಎಂದು ದೇವೇಗೌಡರು ಹೇಳಿರುವುದಾಗಿ ನುಡಿದಿವೆ.

        ಮೈಸೂರು,ಚಿಕ್ಕಬಳ್ಳಾಪುರ,ಕೋಲಾರ ಸೇರಿದಂತೆ ಕೆಲ ಕ್ಷೇತ್ರಗಳು ಕಾಂಗ್ರೆಸ್ ಪಾಲಿಗೆ ಸಂಕಷ್ಟಕರ ಕ್ಷೇತ್ರಗಳಾಗಿದ್ದು ಇಲ್ಲೆಲ್ಲ ನಿಮ್ಮ ಕ್ಯಾಂಡಿಡೇಟುಗಳನ್ನು ಗೆಲ್ಲಿಸಲು ನನಗಿರುವ ಅನುಭವವನ್ನು ಸಂಪೂರ್ಣವಾಗಿ ಧಾರೆ ಎರೆಯುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.

       ಬಿಜೆಪಿ ಮರಳಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಸಕಲ ಯತ್ನಗಳನ್ನು ನಡೆಸಿದ್ದು ಅದಕ್ಕೆ ಹಲವು ರೀತಿಯ ಅನುಕೂಲಗಳಿವೆ.ನರೇಂದ್ರಮೋದಿ ಅವರನ್ನು ಪ್ರಧಾನಿ ಹುದ್ದೆಗೆ ಏರಿಸಲು ದೇಶದ ದೊಡ್ಡ ದೊಡ್ಡ ಉದ್ಯಮಿಗಳ ಪಡೆ ಕಾತರದಿಂದಿದೆ.

      ಈ ಹಿನ್ನೆಲೆಯಲ್ಲಿ ನಾವು ಕರ್ನಾಟಕದಲ್ಲಿ ಸಂಪೂರ್ಣ ಪ್ರಯತ್ನ ನಡೆಸಬೇಕಾಗಿದೆ.ಹೀಗಾಗಿ ಕಾಂಗ್ರೆಸ್ ಎಲ್ಲೆಲ್ಲಿ ಸ್ಪರ್ಧಿಸಿದೆಯೋ?ಅಲ್ಲೆಲ್ಲ ಜೆಡಿಎಸ್ ಮತಗಳನ್ನು ಸಂಪೂರ್ಣವಾಗಿ ಅದಕ್ಕೆ ಹಾಕಿಸಲು ಕಾರ್ಯತಂತ್ರ ರೂಪಿಸುತ್ತಿದ್ದೇವೆ.

       ಈ ಸಂದರ್ಭದಲ್ಲಿ ಯಾವುದೇ ಒಂದು ಪಕ್ಷ ಸುಮ್ಮನೆ ಉಳಿದುಕೊಂಡರೂ ಗಂಡಾಂತರ ತಪ್ಪಿದ್ದಲ್ಲ.ಹೀಗಾಗಿ ಮೈತ್ರಿಕೂಟದ ಕ್ಯಾಂಡಿಡೇಟುಗಳನ್ನು ಗೆಲ್ಲಿಸಲು ಎಲ್ಲರೂ ಶ್ರಮ ವಹಿಸಬೇಕು.ಈ ಅಂಶವನ್ನು ನಿಮ್ಮ ಪಕ್ಷದ ರಾಜ್ಯ ನಾಯಕರಿಗೆ ಮನದಟ್ಟು ಮಾಡಿಕೊಡಿ ಎಂದು ದೇವೇಗೌಡರು ಹೇಳಿದ್ದಾರೆ.

        ಮೈತ್ರಿಕೂಟದ ಕ್ಯಾಂಡಿಡೇಟುಗಳು ಸ್ಪರ್ಧಿಸಿದಾಗ ಟಿಕೆಟ್ ಸಿಗದ ಪಕ್ಷದ ಸ್ಥಳೀಯ ನಾಯಕರು,ಕಾರ್ಯಕರ್ತರಿಗೆ ನೋವಾಗುವುದು ಸಹಜ.ಆದರೆ ಅದನ್ನೆಲ್ಲ ಮರೆತು ದುಡಿಯಬೇಕಾದ ಅನಿವಾರ್ಯತೆ ಇದೆ.

       ನೀವು ದೇಶದ ಪ್ರಧಾನಿ ಹುದ್ದೆಗೇರಬೇಕು ಎಂಬುದು ನನ್ನಾಸೆ.ಹೀಗಾಗಿ ಕಾಂಗ್ರೆಸ್ ಪಕ್ಷದ ಕ್ಯಾಂಡಿಡೇಟುಗಳು ನಿಂತ ಕಡೆಯಲ್ಲೆಲ್ಲ ಜೆಡಿಎಸ್ ಮತಗಳನ್ನು ಈ ಕ್ಯಾಂಡಿಡೇಟುಗಳಿಗೆ ವರ್ಗಾಯಿಸಲು ಮನ:ಪೂರ್ವಕವಾಗಿ ಕೆಲಸ ಮಾಡುತ್ತೇವೆ ಎಂದು ದೇವೇಗೌಡರು ವಿವರಿಸಿದರು.ಈ ಹಿನ್ನೆಲೆಯಲ್ಲಿಯೇ ನಾವು ಮೈತ್ರಿಕೂಟದ ಉಭಯ ಪಕ್ಷಗಳ ವತಿಯಿಂದ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ರಹಸ್ಯ ಕಾರ್ಯಪಡೆಯನ್ನು ನೇಮಕ ಮಾಡಬೇಕು.ಪ್ರತಿ ದಿನದ ಕಾರ್ಯ ಚಟುವಟಿಕೆಗಳ ಮಾಹಿತಿ ಪಡೆಯಬೇಕು.

      ಹೀಗೆ ಮಾಡುವುದರ ಮೂಲಕ ಪರಸ್ಪರರು ಯಾವ ಅನುಮಾನವೂ ಇಲ್ಲದಂತೆ ಮುಂದುವರೆಯಲು ಸಾಧ್ಯ.ಆದ್ದರಿಂದ ಈ ಕೆಲಸ ಮಾಡಲೇಬೇಕು ಎಂದು ಅವರು ಇದೇ ಸಂದರ್ಭದಲ್ಲಿ ರಾಹುಲ್‍ಗಾಂಧಿ ಅವರಿಗೆ ವಿವರಿಸಿದ್ದಾರೆ.ಅಂದ ಹಾಗೆ ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಕ್ಯಾಂಡಿಡೇಟ್ ಇಲ್ಲದೆ ಇರುವುದರಿಂದ ಕಾಂಗ್ರೆಸ್ ಕ್ಯಾಂಡಿಡೇಟ್ ವೀರಪ್ಪ ಮೊಯ್ಲಿ,ಕೋಲಾರದಲ್ಲಿ ಕೆ.ಹೆಚ್.ಮುನಿಯಪ್ಪ ಬಿಜೆಪಿಯಿಂದ ತೀವ್ರ ಸ್ಪರ್ಧೆ ಎದುರಿಸಬೇಕಾಗುತ್ತದೆ.

      ಹಾಗೆಯೇ ಮೈಸೂರಿನಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ವಿರುದ್ಧ ಬಿಜೆಪಿ ಪ್ರಬಲ ಸ್ಪರ್ಧೆ ನೀಡುವುದು ನಿಶ್ಚಿತವಾಗಿರುವುದರಿಂದ ಅಲ್ಲೂ ಜೆಡಿಎಸ್ ಮತಗಳು ಕೊಂಚವೂ ಅಲುಗಾಡದಂತೆ ನೋಡಿಕೊಳ್ಳುವ ಅನಿವಾರ್ಯತೆ ಇದೆ.

      ಆ ಕೆಲಸವನ್ನು ನಾವು ಮಾಡುತ್ತೇವೆ.ಅದೇ ರೀತಿ ಜೆಡಿಎಸ್ ಕ್ಯಾಂಡಿಡೇಟ್‍ಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲೂ ರಾಜ್ಯದ ಕಾಂಗ್ರೆಸ್ ನಾಯಕರು ಮನ:ಪೂರ್ವಕವಾಗಿ ಕೆಲಸ ಮಾಡುವಂತೆ ನೀವು ನೋಡಿಕೊಳ್ಳಿ.ಅಂತಿಮವಾಗಿ ನಾವು ಹೆಚ್ಚು ಸೀಟುಗಳನ್ನು ಪಡೆದಷ್ಟೂ ನಿಮಗೆ ಅನುಕೂಲ ಎಂದು ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ.

      ಇದೇ ರೀತಿ ಮಾರ್ಚ್ ಮೂವತ್ತೊಂದರಂದು ನಡೆಯಲಿರುವ ಉಭಯ ಪಕ್ಷಗಳ ಬೃಹತ್ ಸಮಾವೇಶದ ನಂತರ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿ ಮೈತ್ರಿ ಕೂಟದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ .ಉಭಯ ಪಕ್ಷಗಳ ನಾಯಕರು ವಿವಿಧ ತಂಡಗಳಲ್ಲಿ ರಾಜ್ಯಪ್ರವಾಸ ನಡೆಸುವುದು ಒಂದು ಭಾವ.ಉಳಿದಂತೆ ನಾನು ಸೇರಿದಂತೆ ಕೆಲ ನಾಯಕರು ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ತೆರಳುತ್ತೇವೆ ಎಂದು ದೇವೇಗೌಡರು ವಿವರಿಸಿದ್ದಾರೆ.

      ಎಲ್ಲೆಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸ್ಪರ್ಧೆ ಕಠಿಣವಾಗುತ್ತದೋ?ಅಂತಹ ಕ್ಷೇತ್ರಗಳ ಮೇಲೆ ಹೆಚ್ಚು ಗಮನ ನೀಡುವುದಾಗಿ ದೇವೇಗೌಡರು ವಿವರಿಸಿದ್ದು,ಇದರ ಬೆನ್ನಲ್ಲೇ ದೇವೇಗೌಡರ ಜತೆ ನಿರಂತರ ಸಂಪರ್ಕದಲ್ಲಿದ್ದು ಕರ್ನಾಟಕದಲ್ಲಿ ಹೆಚ್ಚು ಸೀಟುಗಳನ್ನು ಗಳಿಸಲು ರಣತಂತ್ರ ಹೆಣೆಯುವಂತೆ ರಾಹುಲ್‍ಗಾಂಧಿ ಅವರು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap