ಬೆಂಗಳೂರು
ಜೈಲಿನಲ್ಲಿ ಪರಿಚಯವಾಗಿದ್ದವನನ್ನು ಅಪಹರಿಸಿ ಹಲ್ಲೆ ನಡೆಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಕುಖ್ಯಾತ ಆರೋಪಿ ಅಸ್ಸಾಂ ಮೂಲದ ಮನ್ಸೂರ್ ಖಾನ್‍ನ ಕಾಲಿಗೆ ಉಪ್ಪಾರಪೇಟೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಕೊಲೆ, ಕೊಲೆಯತ್ನ, ಸುಲಿಗೆ, ಅಪಹರಣ, ಕಳವು ಸೇರಿದಂತೆ, 7ಕ್ಕೂ ಹೆಚ್ಚು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಮನ್ಸೂರ್ ಖಾನ್ (25) ಬಲಗಾಲಿಗೆ ಪೊಲೀಸರು ಹೊಡೆದ ಗುಂಡೇಟು ತಗುಲಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಂಧಿಸಲು ಹೋದಾಗ ಮನ್ಸೂರ್ ಖಾನ್ ಡ್ಯಾಗರ್‍ನಿಂದ ಚುಚ್ಚಿದ್ದರಿಂದ ಉಪ್ಪಾರಪೇಟೆ ಪೊಲೀಸ್ ಪೇದೆ ಜಯಚಂದ್ರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಇತ್ತೀಚಿಗೆ ಅಪರಾಧ ಕೃತ್ಯವೊಂದರಲ್ಲಿ ಬಂಧಿತನಾಗಿ ಮನ್ಸೂರ್ ಖಾನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದನು.ನೇಪಾಳದಿಂದ ಹೆಚ್ಚಿನ ವೇತನದ ಉದ್ಯೋಗ ಕೊಡಿಸುವುದಾಗಿ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಆರೋಪಿ ರಾಕೇಶ್ ಶರ್ಮ ಕೂಡ ಬಂಧಿತನಾಗಿ ಜೈಲಿಗೆ ಹೋಗಿದ್ದ.
ಶ್ರೀಮಂತ ಎಂದಿದ್ದ
ಜೈಲಿನ ಒಂದೇ ಬ್ಯಾರಕ್ ಬಳಿ ಇದ್ದ ಇವರಿಬ್ಬರ ನಡುವೆ ಪರಿಚಯವಾಗಿತ್ತು. ಮಾತುಕತೆ ವೇಳೆ ರಾಕೇಶ್, ನಾನು ಉತ್ತಮ ಸ್ಥಿತಿಯಲ್ಲಿದ್ದು ನನ್ನಲ್ಲಿ ಹಣವಿದೆ ಎಂದು ಹೇಳಿಕೊಂಡಿದ್ದು,ಇಬ್ಬರು ಮೊಬೈಲ್ ಸಂಖ್ಯೆಯನ್ನು ವಿನಿಮಯ ಮಾಡಿಕೊಂಡಿದ್ದರು ಕೆಲವೇ ದಿನಗಳಲ್ಲಿ ಜೈಲಿನಿಂದ ರಾಕೇಶ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.
ಹಣವಿದೆ ಎಂದು ರಾಕೇಶ್ ಹೇಳಿದ್ದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಮನ್ಸೂರ್ ಖಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ರಾಕೇಶ್ ಬಳಿ ಹಣ ದೋಚಲು ಸಂಚು ರೂಪಿಸಿದ್ದನು.ಅದರಂತೆ ರಾಕೇಶ್ ಶರ್ಮಾನನ್ನು ಸಂಪರ್ಕಿಸಿ, ಕಳೆದ ಏಪ್ರಿಲ್ 24 ರಂದು ರಾತ್ರಿ ಉಪ್ಪಾರಪೇಟೆಯ ಹೊಟೇಲ್‍ವೊಂದಕ್ಕೆ ಊಟಕ್ಕೆ ಕರೆದಿದ್ದ.
ಹೊಟೇಲ್‍ಗೆ ಸ್ನೇಹಿತ ರಾಜಸ್ಥಾನ ಮೂಲದ ಗೋಪಾಲ್‍ಸಿಂಗ್ ಜೊತೆ ಬಂದಿದ್ದ ರಾಕೇಶ್ ಶರ್ಮ ಜೊತೆ ಊಟ ಮುಗಿದ ನಂತರ ರಾಕೇಶ್ ಶರ್ಮಾ ಮತ್ತವನ ಸ್ನೇಹಿತನನ್ನು ಕಾರಿನಲ್ಲಿ ಸಹಚರರದಾದ ಮಣಿಪುರ ಮೂಲದ ಅಬ್ದುಲ್ ಮಜೀದ್,ಜೀತುದಾಸ್ ಪಂಕಜ್‍ಬೋರಾ ಜೊತೆ ಅಪಹರಿಸಿಕೊಂಡು ಹೋದ ಮನ್ಸೂರ್ ಖಾನ್ ರಾಕೇಶ್ ಮೇಲೆ ಹಲ್ಲೆ ನಡೆಸಿ ಗೋಪಾಲ್ ಸಿಂಗ್‍ಗೂ ಬೆದರಿಸಿದ್ದರು.
ವಿಶೇಷ ತಂಡ ರಚನೆ
ಅಪಹರಣದ ಮಾಹಿತಿಯು ಪೊಲೀಸರು ಗೊತ್ತಾಗಿರುವುದನ್ನು ತಿಳಿದ ಮನ್ಸೂರ್, ರಾಕೇಶ್ ಶರ್ಮಾನನ್ನು ಬಿಟ್ಟು ಪರಾರಿಯಾಗಿದ್ದು ತಪ್ಪಿಸಿಕೊಂಡು ಬಂದ ಗೋಪಾಲ್ ಸಿಂಗ್ ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದನು ಗಾಯಗೊಂಡಿದ್ದ ರಾಕೇಶ್‍ನನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪತ್ತೆಗಾಗಿ ಉಪ್ಪಾರಪೇಟೆ ಪೊಲೀಸ್ ಇನ್ಸ್‍ಪೆಕ್ಟರ್ ರಾಮಪ್ಪ ಗುತ್ತೇರ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಕಾರ್ಯಾಚರಣೆ ಕೈಗೊಂಡಾಗ ಸಹಚರ ಮಣಿಪುರದ ತೈವಾನ್ ಜಿಲ್ಲೆಯ ಅಬ್ದುಲ್ ಮಜೀದ್ ಜೊತೆ ಮನ್ಸೂರ್‍ಖಾನ್ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಹಿಂಭಾಗದ ಹಳೆಕಟ್ಟಡದಲ್ಲಿ ಮಲಗಿರುವ ಮಾಹಿತಿ ಸೋಮವಾರ ಮುಂಜಾನೆ ಲಭ್ಯವಾಗಿದೆ.
ಡ್ಯಾಗರ್‍ನಿಂದ ಚುಚ್ಚಿದ
ಕೂಡಲೇ ಸ್ಥಳಕ್ಕೆ ಧಾವಿಸಿ ಅಬ್ದುಲ್ ಮಜೀದ್‍ನನ್ನು ವಶಕ್ಕೆ ತೆಗೆದುಕೊಂಡು ಮನ್ಸೂರ್ ಖಾನ್‍ನನ್ನು ಪೇದೆ ಜಯಚಂದ್ರ ಬಂಧಿಸಲು ಹೋದಾಗ ಅವರಿಗೆ ಡ್ಯಾಗರ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಸಬ್ ಇನ್ಸ್‍ಪೆಕ್ಟರ್ ರಾಜೇಂದ್ರ ಅವರು ಅವರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ, ಶರಣಾಗುವಂತೆ ಸೂಚನೆ ನೀಡಿದ್ದಾರೆ.
ಆದರೂ ಚಾಕು ಹಿಡಿದು ಪೊಲೀಸರತ್ತ ನುಗ್ಗಿದ ಮನ್ಸೂರ್ ಮೇಲೆ ಸಬ್‍ಇನ್ಸ್‍ಪೆಕ್ಟರ್ ರಾಜೇಂದ್ರ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು, ಅದು ಮನ್ಸೂರ್‍ನ ಬಲಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಆತನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚೆನ್ನಣ್ಣನವರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
