ಪ್ರಜಾಪ್ರಭುತ್ವ ಉಳಿವಿಗೆ ಕಡ್ಡಾಯ ಮತದಾನ ಅವಶ್ಯ

ಚಿತ್ರದುರ್ಗ:

      ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಲೇಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಮತದಾನದ ಮಹತ್ವ ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿ.ಪಂ.ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ವಕೀಲರ ಭವನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಮತದಾನದ ಜಾಗೃತಿ ಕುರಿತ ಪ್ರಾತ್ಯಕ್ಷಿಕೆ ಅರಿವು ಕಾರ್ಯಕ್ರಮ ಹಾಗೂ ಭಾರತ ಚುನಾವಣಾ ಆಯೋಗ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತದಾನದ ಮಹತ್ವ ಇ.ವಿ.ಎಂ., ವಿವಿಪ್ಯಾಟ್ ಬಳಕೆ ಕುರಿತ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

      ನೇತ್ರದಾನ, ರಕ್ತದಾನ ಮಾಡಿ ಅಮೂಲ್ಯವಾದ ಪ್ರಾಣ ಉಳಿಸಿ ಎಂದು ಹೇಗೆ ಹೇಳುತ್ತೇವೆಯೋ ಅದೇ ರೀತಿ ಮತದಾನದ ಹಕ್ಕು ಏನು ಎಂಬ ಅರಿವು ಪ್ರತಿಯೊಬ್ಬರಲ್ಲಿಯೂ ಮೂಡಬೇಕಿದೆ. ಕೇವಲ ಒಂದು ಓಟಿನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರು ಸೋತಿರುವುದುಂಟು. ಹಾಗಾಗಿ ಒಂದೊಂದು ಓಟಿಗೂ ಅದರದೆ ಆದ ಮಹತ್ವವಿದೆ. ಸಂಸದರು, ಶಾಸಕರುಗಳಿಗೂ ಅವರದೆ ಆದ ಜವಾಬ್ದಾರಿ, ಸಮಸ್ಯೆಗಳಿರುತ್ತವೆ. ಪ್ರಜಾಪ್ರಭುತ್ವದಲ್ಲಿ ಒಂದು ಓಟಿಗೂ ಮೌಲ್ಯವಿರುವುದರಿಂದ ಯಾರು ಮತದಾನವನ್ನು ನಿರ್ಲಕ್ಷಿಸಬೇಡಿ ಎಂದು ಮನವಿ ಮಾಡಿದರು.

        ಐದು ನಿಮಿಷದಲ್ಲಿ ಸರಿಯಾದ ವ್ಯಕ್ತಿಗೆ ಸರಿಯಾದ ಸಮಯದಲ್ಲಿ ಮತದಾನ ಮಾಡದಿದ್ದರೆ ಐದು ವರ್ಷದವರೆಗೆ ಪಶ್ಚಾತಾಪ ಪಡಬೇಕಾಗುತ್ತದೆ. ಮತದಾನದ ಸಮಯದಲ್ಲಿ ಮತದಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ದೇಶದ ಭವಿಷ್ಯ ನಿಂತಿರುತ್ತದೆ. ಕೆಟ್ಟವರನ್ನು ಆಯ್ಕೆ ಮಾಡಿದರೆ ದೇಶದ ಅಭಿವೃದ್ದಿಗೆ ಅಡ್ಡಿಯಾಗಲಿದೆ. ಮತಯಂತ್ರಗಳಲ್ಲಿ ಲೋಪವಿರುತ್ತದೆ ಎನ್ನುವ ತಪ್ಪು ಕಲ್ಪನೆ ಯಾರಲ್ಲೂ ಇರಬಾರದು. ಮತದಾನಕ್ಕೂ ಮುನ್ನ ಚುನಾವಣಾ ಆಯೋಗ ಮತಯಂತ್ರಗಳನ್ನು ಸರಿಯಾಗಿ ಪರೀಕ್ಷಿಸಿರುತ್ತದೆ ಎಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಮಾತನಾಡುತ್ತ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನತೆ, ಸಾಮಾಜಿಕ ನ್ಯಾಯ, ಸಹೋದರತ್ವ, ಐಕ್ಯತೆ ಕಾಪಾಡಿಕೊಳ್ಳಬೇಕಾದರೆ ಚುನಾವಣೆ ಅತ್ಯಂತ ಶ್ರೇಷ್ಟವಾದುದು. ಹಾಗಾಗಿ ಮತದಾನ ಎಲ್ಲರ ಹಕ್ಕೂ ಹಾಗೂ ಜವಾಬ್ದಾರಿ ಎಂದು ಎಚ್ಚರಿಸಿದರು.

         ಪ್ರಜಾಪ್ರಭುತ್ವದಲ್ಲಿ ಜೀವನಕ್ಕೂ ವ್ಯವಸ್ಥೆಗೂ ವ್ಯತ್ಯಾಸವಿರಬಾರದು. ಪ್ರಜಾಪ್ರಭುತ್ವದ ಮೌಲ್ಯಗಳೇನು ಎನ್ನುವುದನ್ನು ಮತದಾರ ತಿಳಿದುಕೊಂಡಿರಬೇಕು. ಸಂವಿಧಾನವೇ ರಾಷ್ಟ್ರೀಯ ಧರ್ಮವಾಗಿರುವುದರಿಂದ ಸಾಂವಿಧಾನಿಕ ಬದ್ದತೆ, ನಿಷ್ಟೆ, ಗೌರವ ಇರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತ್ಯಾತೀತತೆ, ಧರ್ಮ, ಸಾಂವಿಧಾನಿಕ ಬದ್ದತೆ ಕಡಿಮೆಯಾಗಿದೆ. ಪ್ರಜಾಪ್ರಭುತ್ವ ಮೌಲ್ಯ ಇನ್ನು ಪ್ರಜೆಗಳಿಗೆ ಸಿಕ್ಕಿಲ್ಲ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಪ್ರಜಾಪ್ರಭುತ್ವದ ಮೂರು ಮುಖ್ಯ ಅಂಶಗಳು ಎಂದು ತಿಳಿಸಿದರು.

          ಪ್ರಜೆಯೇ ಪ್ರಭು ಎನ್ನುವ ಅಧಿಕಾರ ಪ್ರಜಾಪ್ರಭುತ್ವದಲ್ಲಿದೆಯಾ ಎನ್ನುವುದನ್ನು ಪ್ರಶ್ನೆ ಮಾಡಿಕೊಂಡರೆ ಬೇರೆಯವರಿಗೆ ಗುಲಾಮರ ರೀತಿಯಲ್ಲಿ ಬದುಕುತ್ತಿದ್ದೇವೆ. ಪ್ರಜೆಯೇ ಶ್ರೇಷ್ಟರು, ಸಾರ್ವಭೌಮರು ಆಡಳಿತ ಅವರದೆ ಎಂದು ಎಲ್ಲಿಯವರೆಗೂ ಅನಿಸುವುದಿಲ್ಲವೋ ಅಲ್ಲಿಯತನಕ ಪ್ರಜಾಪ್ರಭುತ್ವದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಪ್ರಜೆಗಳ ಮೇಲೆ ಅಧಿಕಾರ ಶಾಹಿಗಳು ದೌರ್ಜನ್ಯ, ದಬ್ಬಾಳಿಕೆ ನಡೆಸುವಂತಿಲ್ಲ. ತಪ್ಪು ಮಾಡಿದವರನ್ನು ಕಾನೂನು ಅಡಿಯಲ್ಲಿಯೇ ಶಿಕ್ಷಿಸಬೇಕು. ಅದೇ ಪ್ರಜಾಪ್ರಭುತ್ವ ವ್ಯವಸ್ಥೆ ಎಂದರು.
ಯಾರು ಮತದಾನ ಮಾಡುವುದಿಲ್ಲವೋ, ಅರ್ಹರಿಗೆ ಮತ ನೀಡುವುದಿಲ್ಲವೋ ಅದು ಕೂಡ ಆತ್ಮವಂಚನೆ ಮಾಡಿಕೊಂಡಂತೆ. ಮತದಾನ ಪವಿತ್ರವಾದುದು. ಹಾಗೆಯೇ ಹಕ್ಕು, ಕರ್ತವ್ಯವೂ ಹೌದು. ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೆ ನಿಸ್ಪಕ್ಷಪಾತವಾಗಿ ಮತ ಚಲಾಯಿಸಿ ಎಂದು ವಕೀಲರುಗಳಿಗೆ ತಿಳಿಸಿದರು.

         ಮತದಾನದ ಜಾಗೃತಿ ಕುರಿತ ಪ್ರಾತ್ಯಕ್ಷಿಕೆ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಮಾತನಾಡಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಕ್ಕಿಂತ ಮೊದಲು ಎಲ್ಲರೂ ನಾಗರೀಕರು ಎನ್ನುವ ಜಾಗೃತಿಯಿರಬೇಕು. ಮತದಾನ ಎನ್ನುವುದು ಪ್ರತಿಯೊಬ್ಬರ ಜವಾಬ್ದಾರಿ. ದೇಶದ ಅತ್ಯಂತ ಬಲಿಷ್ಟ ರಾಷ್ಟ್ರ ಅಮೇರಿಕಾ ಇನ್ನು ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸುತ್ತಿದೆ.

          ಆದರೆ ಮತಯಂತ್ರಗಳನ್ನು ಬಳಸುತ್ತಿರುವ ಭಾರತೀಯರು ನಾವುಗಳು ಅಮೇರಿಕಾದವರಿಗಿಂತ ಬುದ್ದಿವಂತರು. ಮತಯಂತ್ರಗಳಲ್ಲಿ ಮತದಾನ ಮಾಡಿದಾಗ ಲೋಪವಾಗಬಹುದು ಒಂದು ಅಭ್ಯರ್ಥಿಗೆ ಚಲಾಯಿಸಿದ ಮತ ಮತ್ತೊಂದು ಅಭ್ಯರ್ಥಿಗೆ ಹೋಗಬಹುದೆಂಬ ಗೊಂದಲ ತಪ್ಪುಕಲ್ಪನೆ ಕೆಲವರಲ್ಲಿದೆ. ಅದನ್ನು ಮನಸ್ಸಿನಿಂದ ತೆಗೆದು ಹಾಕಿ ಮತಯಂತ್ರದಲ್ಲಿ ಯಾವುದೇ ತಪ್ಪುಗಳಾಗುವ ಸಾಧ್ಯತೆಯಿಲ್ಲ ಎಂದು ಹೇಳಿದರು.

         ಚುನಾವಣೆಯಲ್ಲಿ ಮಾತ್ರ ಜಾತಿ, ಮತ, ಅನುಕಂಪ, ಧರ್ಮ, ಆಸೆ, ಆಮಿಷಗಳಿಗೆ ಒಳಗಾಗಿ ಯಾರು ಮತಚಲಾಯಿಸಬೇಡಿ. ಅನಕ್ಷರಸ್ಥರು ಲಿಂಗ ತಾರತಮ್ಯ ಮಾಡುತ್ತಿಲ್ಲ. ಶಿಕ್ಷಣವಂತರಿಂದಲೆ ಇಂದು ಹೆಣ್ಣು-ಗಂಡು ಎಂಬ ತಾರತಮ್ಯವಾಗುತ್ತಿದೆ. ಒಂದು ಓಟಿಗೆ ದೇಶದ ಭವಿಷ್ಯವನ್ನು ಬದಲಾಯಿಸುವ ಶಕ್ತಿಯಿದೆ. ಅದಕ್ಕಾಗಿ ಪ್ರತಿಯೊಬ್ಬರು ಚುನಾವಣೆಯಂದು ತಪ್ಪದೆ ಮತಚಲಾಯಿಸಿ ಎಂದು ವಿನಂತಿಸಿದರು.
ನ್ಯಾಯಾಧೀಶರುಗಳಾದ ವೀರಣ್ಣ, ಬಸವರಾಜ್‍ಚಗರೆಡ್ಡಿ, ಶಿವಣ್ಣ, ವಕೀಲರ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸಿ.ಶಿವುಯಾದವ್ ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap