ತುಮಕೂರು
ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಇರುವ ಪ್ರಮುಖ ಅಸ್ತ್ರ ಸ್ವಯಂ ನಿಯಂತ್ರಣ. ಇದಕ್ಕೆ ಪೂರಕವಾಗಿ ಸರ್ಕಾರದ ಮಾರ್ಗಸೂಚಿಗಳು ಜಾರಿಯಾಗಬೇಕು. ಸರ್ಕಾರವೇನೋ ಹಲವು ನಿರ್ಬಂಧಗಳನ್ನು ಜಾರಿಗೊಳಿಸಿ ಆಗಿದೆ. ಅವುಗಳ ಪಾಲನೆ ಮತ್ತು ನಿರ್ವಹಣೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನತೆಯದ್ದು.
ದಿನೆ ದಿನೆ ಹೆಚ್ಚಳವಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ವೇಗ ಗತಿಯನ್ನು ಗಮನಿಸಿದರೆ ಇದೀಗ ಎಲ್ಲರೂ ಕೈ ಚೆಲ್ಲಿ ಕುಳಿತುಕೊಳ್ಳುವಂತ ವಾತಾವರಣ ನಿರ್ಮಾಣವಾಗಿದೆಯೆ ಎಂದೆನ್ನಿಸುತ್ತದೆ. ಪರಸ್ಪರ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು, ಮುಖಕ್ಕೆ ಮಾಸ್ಕ್ ಧರಿಸುವುದು ಇವೆರಡನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯ ಎಂಬುದು ಎಲ್ಲರೂ ಒಪ್ಪಿರುವ ಸತ್ಯ. ಈ ಕಾರಣಕ್ಕಾಗಿಯೇ ಕೆಲವು ನಿರ್ಬಂಧಗಳನ್ನು ಹೇರಿಕೊಳ್ಳುವ ಅನಿವಾರ್ಯತೆ ಇದೆ.
ಅಂತರ ಕಾಪಾಡಿಕೊಳ್ಳುವುದನ್ನು ಎಷ್ಟು ಜಾಗ್ರತೆಯಾಗಿ ನಿರ್ವಹಿಸುತ್ತೇವೆಯೋ ಅಷ್ಟರ ಮಟ್ಟಿಗೆ ರೋಗ ನಿಯಂತ್ರಣ ಸಾಧ್ಯವಿದೆ. ಸರ್ಕಾರಗಳು ಇದನ್ನೇ ಹೇಳುತ್ತಿವೆ. ಆದರೆ ವ್ಯಕ್ತಿಗತ ಅಂತರ ಕಾಪಾಡುವ ಹಾಗೂ ಮಾಸ್ಕ್ ಧರಿಸುವ ವಿಷಯದಲ್ಲಿ ಇನ್ನೂ ಎಡವಟ್ಟುಗಳು ಆಗುತ್ತಲೆ ಇವೆ.
ಸ್ಪರ್ಶದಿಂದ, ಉಗುಳುವಿಕೆ, ಸೀನುವುದರಿಂದ ವೈರಾಣು ಒಬ್ಬರಿಂದ ಒಬ್ಬರಿಗೆ ವ್ಯಾಪಿಸುತ್ತದೆ. ಬಾಯಿಯಲ್ಲಿನ ದ್ರವ ಗಾಳಿಯ ಮೂಲಕವೂ ಹಾರಿ ಮತ್ತೊಬ್ಬರಿಗೆ ವೈರಸ್ ಹರಡಬಹುದು ಎಂಬುದನ್ನೂ ಸಹ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಇಷ್ಟಿದ್ದರೂ ಸಹ ರೋಗ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ಮತ್ತು ಸಾರ್ವಜನಿಕರು ವಿಫಲರಾಗುತ್ತಿದ್ದಾರೆಯೆ ಎಂಬುದು ಹೆಚ್ಚುತ್ತಿರುವ ವೈರಸ್ನಿಂದ ದೃಢವಾಗುತ್ತಿದೆ.
ಯಾವುದೇ ಒಂದು ಬಡಾವಣೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ ಎಂದರೆ ಪಕ್ಕದ ಮನೆಯವರಿಗೆ ಅಥವಾ ಇತರರಿಗೆ ಸೋಂಕು ಹರಡದಂತೆ ತಡೆಯಲು ಕೆಲವು ಮಾರ್ಗಸೂಚಿಗಳಿವೆ. ಸೀಲ್ಡೌನ್ನಂತಹ ಪ್ರಕ್ರಿಯೆಗಳು ಆರಂಭವಾಗಿರುವುದು ಈ ಕಾರಣಕ್ಕಾಗಿಯೆ. ಆರಂಭದ ದಿನಗಳಲ್ಲಿ ಇವೆಲ್ಲವೂ ನಿಯಮಿತವಾಗಿ ನಡೆದುಕೊಂಡು ಬಂದವು. ಎಲ್ಲಿಯಾದರೂ ಸೋಂಕಿತ ವ್ಯಕ್ತಿ ಪತ್ತೆಯಾದನೆಂದರೆ ಒಡನೆಯೆ ಆ ಪ್ರದೇಶವನ್ನು ಸೀಲ್ಡೌನ್ ಮಾಡಿ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ಗೆ ಒಳಪಡಿಸುತ್ತಿದ್ದರು. ಈಗ ಪ್ರತಿದಿನ ಒಂದೊಂದು ಕಡೆ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು, ಹಿಂದಿನಂತೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲವೆ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.
ಪಾಸಿಟಿವ್ ದೃಢಪಟ್ಟ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಇಲ್ಲಿ ಎರಡು ವಿಧದ ಸೋಂಕಿತರನ್ನು ಪತ್ತೆ ಹಚ್ಚಿ ಪ್ರತ್ಯೇಕಿಸಲಾಗುತ್ತದೆ. ಸಿಂಪ್ಟಮ್ಯಾಟಿಕ್ (ರೋಗ ಲಕ್ಷಣ ಸಹಿತ ಸೋಂಕಿತರು) ಎ ಸಿಂಪ್ಟಮ್ಯಾಟಿಕ್ (ರೋಗ ಲಕ್ಷಣ ರಹಿತ ಸೋಂಕಿತರು). ಸಿಂಪ್ಟಮ್ಯಾಟಿಕ್ ಇರುವವರನ್ನು ಕೋವಿಡ್ ಆಸ್ಪತ್ರೆಗೆ, ಎ ಸಿಂಪ್ಟಮ್ಯಾಟಿಕ್ ಇರುವವರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಿ ನಿರ್ದಿಷ್ಟ ಅವಧಿಯ ತನಕ ನೋಡಿಕೊಳ್ಳಲಾಗುತ್ತದೆ. ಗುಣಮುಖರಾದ ನಂತರ ಅವರನ್ನು ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗುತ್ತದೆ.
ಸೋಂಕಿತರು ಎರಡು ರೀತಿಯಲ್ಲಿ ಪತ್ತೆಯಾಗಬಹುದು. ಕಾಯಿಲೆಗಳಿಂದಾಗಿ ಆಸ್ಪತ್ರೆಗೆ ಹೋದಾಗ ಅಲ್ಲಿ ದ್ರವದ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗುತ್ತದೆ. ವರದಿ ಬಂದ ನಂತರ ಅಂತಹವರಿಗೆ ಕರೆ ಮಾಡಿ ಮಾಹಿತಿ ತಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಇನ್ನು ಕೆಲವರು ಸ್ವಯಂ ಅವರೆ ಮುಂದೆ ಬಂದು ಕೋವಿಡ್ ತಪಾಸಣೆಗೆ ಒಳಗಾಗುತ್ತಾರೆ. ಪಾಸಿಟಿವ್ ಬಂದವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಆತನ ಮಾಹಿತಿ ಪಡೆದು ಪ್ರಾಥಮಿಕ ಸಂಪರ್ಕದಲ್ಲಿದ್ದ ಅಂದರೆ ಅವರ ಮನೆಯವರನ್ನೆಲ್ಲ ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ. ನಿಗದಿತ ಅವಧಿಯೊಳಗೆ ತಪಾಸಣೆ ಮಾಡುವಾಗ ಪಾಸಿಟಿವ್ ವರದಿ ಬಂದರೆ ಅವರನ್ನೂ ಸಹ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಸಹಜವಾಗಿ ನಡೆದು ಹೋಗುತ್ತವೆ.
ಆದರೆ ತುಮಕೂರಿನ ಕೆಲವು ಪ್ರದೇಶಗಳಲ್ಲಿ ಪಾಸಿಟಿವ್ ಇದ್ದ ವ್ಯಕ್ತಿಗಳ ಮನೆ ಮುಂಭಾಗ ಯಾರೂ ಸಂಚರಿಸದಂತೆ ಸೀಲ್ಡೌನ್ ಮಾಡುವ ಪ್ರಕ್ರಿಯೆಯಲ್ಲಿ ವಿಳಂಬ ಗತಿ ಕಾಣುತ್ತಿರುವುದು, ಸೀಲ್ಡೌನ್ ಮಾಡದೆ ಇರುವ ಪ್ರಕರಣಗಳೂ ಸಹ ಕಂಡುಬರುತ್ತಿವೆ ಎಂಬುದು ಸಾರ್ವಜನಿಕರ ಆರೋಪ. ಪಾಸಿಟಿವ್ ಇರುವ ವ್ಯಕ್ತಿಯಾಗಲಿ ಅಥವಾ ಆತನ ಸಂಪರ್ಕದಲ್ಲಿದ್ದ ಕುಟುಂಬಸ್ಥರು ಸಹ ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಪಡಬೇಕು. ಅದಕ್ಕಾಗಿ ಆ ಮನೆಯ ಸಂಪರ್ಕದ ರಸ್ತೆಯನ್ನು ಸೀಲ್ ಡೌನ್ ಮಾಡಬೇಕು. ರಸ್ತೆಯನ್ನು ಸೀಲ್ಡೌನ್ ಮಾಡಿದರೆ ಇತರರಿಗೆ ತೊಂದರೆಯಾಗುತ್ತದೆ ಎಂಬ ಯಾವ ಆತಂಕವೂ ಇರಬೇಕಿಲ್ಲ. ಏಕೆಂದರೆ ಆ ರಸ್ತೆಗೆ ಹೊಂದಿಕೊಂಡಿರುವ ಉಪರಸ್ತೆಗಳು ಅಥವಾ ಪರ್ಯಾಯ ಮಾರ್ಗಗಳು ಇದ್ದೇ ಇರುತ್ತವೆ.
ಇವೆಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಪಾಸಿಟಿವ್ ಬಂದ ವ್ಯಕ್ತಿಗಳ ಹಾಗೂ ಕುಟುಂಬದವರು ಇತರರ ಸಂಪರ್ಕಕ್ಕೆ ಬರದಂತೆ ಕೆಲವು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸುವುದು ಕಡ್ಡಾಯವಾಗಬೇಕು. ಸೀಲ್ಡೌನ್ ಮಾಡದೆ ಹೋದರೆ ಪರಿಚಯಸ್ಥರಿಗೆ ಅಥವಾ ಆ ಮಾರ್ಗದ ಇತರರಿಗೆ, ಅಲ್ಲಿ ಸಂಚರಿಸುವವರಿಗೆ ಪಾಸಿಟಿವ್ ಬಂದಿರುವ ವಿಷಯ ಹೇಗೆ ತಾನೆ ತಿಳಿಯುತ್ತದೆ? ಸೋಂಕಿತ ವ್ಯಕ್ತಿಗಳ ಕುಟುಂಬವನ್ನು ಅಪಮಾನ ಮಾಡುವ ಯಾವುದೇ ಪ್ರಸಂಗ ಇಲ್ಲಿ ಎದುರಾಗುವುದಿಲ್ಲ. ಬದಲಾಗಿ ಇತರರ ರಕ್ಷಣೆ ಪ್ರಮುಖವಾಗುವುದರಿಂದ ಆ ಕುಟುಂಬದವರು ಸ್ವಯಂ ನಿರ್ಬಂಧಗಳಿಗೆ ಒಳಗಾಗುವುದು ಎಷ್ಟು ಮುಖ್ಯವೋ ಅದೇ ರೀತಿ ಆಭಾಗದಲ್ಲಿ ಸಂಚರಿಸುವವರನ್ನು ನಿರ್ಬಂಧಿಸುವುದು ಸಹ ಅಷ್ಟೇ ಮುಖ್ಯವಾಗಬೇಕು. ಪರಸ್ಪರ ವ್ಯಕ್ತಿಗತ ಅಂತರದಿಂದ ಕೊರೊನಾ ವೈರಸ್ ನಿಯಂತ್ರಣ ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಸಂಬಂಧ ಪಟ್ಟ ಇಲಾಖೆಗಳು ಮತ್ತು ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚು ಹೆಚ್ಚು ಆಸಕ್ತರಾಗಿ ಜಾಗೃತಿ ಮೂಡಿಸಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








