ನಿವೇಶನ ನೀಡುವಂತೆ ಒತ್ತಾಯಿಸಿ ಅನಿರ್ಧಿಷ್ಟಾವದಿ ಧರಣಿ ಸತ್ಯಾಗ್ರಹ

ಚಳ್ಳಕೆರೆ

        ಕಳೆದ 30 ವರ್ಷಗಳಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಮಾಲಿ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 500ಕ್ಕೂ ಹೆಚ್ಚು ಜನರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ವತಿಯಿಂದ ಪ್ರತಿಭಟನಾ ಮೆರವಣಿಗೆಯನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

         ಕಾರ್ಮಿಕ ಫೆಡರೇಷನ್‍ನ ಜಿಲ್ಲಾ ಸಂಚಾಲಕ ಟಿ.ತಿಪ್ಪೇಸ್ವಾಮಿ ಪತ್ರಿಕೆಗೆ ಮಾಹಿತಿ ನೀಡಿ, ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ, ಕ್ಷೇತ್ರದ ಶಾಸಕರು, ನಗರಸಭೆ ಆಡಳಿತ ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿ ಇಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಹಮಾಲರಿಗೆ ಸರ್ಕಾರಿ ಗೋಮಾಳದಲ್ಲಾಗಲಿ, ಖಾಸಗಿಯಾಗಿ ಖರೀದಿಸಿ ಅವುಗಳನ್ನು ನಿವೇಶನಗಳಾಗಿ ವಿಂಗಡಿಸಿ ಎಲ್ಲಾ ಹಮಾಲರಿಗೂ ನೀಡುವಂತೆ ನಿರಂತರವಾಗಿ ಒತ್ತಾಯ ಮಾಡುತ್ತಾ ಬಂದಿದ್ದೇವೆ.

          ಆದರೆ, ಪ್ರತಿಭಾರಿಯೂ ಭರವಸೆ ನೀಡಿ ಮುಷ್ಕರವನ್ನು ತಡೆಯುವಂತೆ ಮಾಡುವಲ್ಲಿ ಆಡಳಿತ ಮಂಡಳಿ ಯಶಸ್ಸಿಯಾಗಿದೆ. ಆದರೆ, ಈ ಭಾರಿ ಮಾತ್ರ ನಿವೇಶನಗಳನ್ನು ನೀಡುವ ತನಕ ಎಪಿಎಂಸಿ ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಟಾಕಾಲ ಧರಣಿ ಸತ್ಯಾಗ್ರಹವನ್ನು ಸೋಮವಾರದಿಂದಲೇ ಹಮ್ಮಿಕೊಳ್ಳಲಾಗಿದೆ ಎಂದರು.

          ತಾಲ್ಲೂಕು ಅಧ್ಯಕ್ಷ ಕೆ.ವಿ.ವೀರಭದ್ರಪ್ಪ ಮಾತನಾಡಿ, ಕಳೆದ ಬಾರಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಒಂದು ತಿಂಗಳಲ್ಲಿ ಎಲ್ಲಾ ಹಮಾಲರಿಗೂ ನಿವೇಶನಗಳನ್ನು ವಿತರಣೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಿವೇಶನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಶಾಸಕರ ಕಚೇರಿ ಮುಂದೆಯೇ ಧರಣಿ ನಡೆಸಿದ ಸಂದರ್ಭದಲ್ಲಿ ಶಾಸಕರು ನೀಡಿದ ಭರವಸೆಯನ್ನು ಅವರೇ ಮರೆತಿದ್ದಾರೆ. ನಮಗೆ ನಿವೇಶನಗಳು ಬೇಕೇಬೇಕು. ಈ ನಿಟ್ಟಿನಲ್ಲಿ ಅನಿರ್ಧಿಷ್ಟಾಕಾಲ ಮುಷ್ಕರವನ್ನು ಹಮ್ಮಿಕೊಂಡಿದ್ದು, ನಿವೇಶನ ನೀಡುವ ತನಕ ಮುಂದುವರೆಯುತ್ತದೆ ಎಂದರು.

            ಈ ಸಂದರ್ಭದಲ್ಲಿ ನಿಂಗಣ್ಣ, ಗಾಡಿತಿಪ್ಪೇಸ್ವಾಮಿ, ನಾರಾಯಣಿ, ಬಸವರಾಜು, ಕುಂಟನಾರಾಯಣಿ, ನಾಗರಾಜಪ್ಪ, ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link