ತುರುವೇಕೆರೆ
ತಾಲ್ಲೂಕು ಆಡಳಿತ ನಿಷ್ಕ್ರಿಯವಾಗಿದೆ ಹಾಗೂ ರೈತರಿಗೆ ಜನ ಸಾಮಾನ್ಯರಿಗೆ ನ್ಯಾಯ ಸಮ್ಮತ ಆಡಳಿತ ನೀಡುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕು ಜೆಡಿಎಸ್ ಹಾಗೂ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ನಾನು ಶಾಸಕನಾದ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಸುಮಾರು 5600 ರೈತರಿಗೆ ಬಗರ್ ಹುಕುಂ ಅಡಿ ಜಮೀನು ಮಂಜೂರು ಮಾಡಲಾಗಿದೆ. ಆದರೆ ಇದುವರೆಗೂ ಅವರಿಗೆ ಸಾಗುವಳಿ ಪರವಾನಗಿ ಉಳುಮೆ ಚೀಟಿ ನೀಡಿಲ್ಲ. ಹಾಲಿ ಶಾಸಕರು ತಡೆ ಹಿಡಿಯುವ ಅಧಿಕಾರವನ್ನು ಯಾರು ಕೊಟ್ಟವರು ಎಂದು ಪ್ರಶ್ನಿಸಿ ಕೂಡಲೇ ಮಂಜೂರಾದ ಎಲ್ಲ ರೈತರಿಗೂ ಉಳುಮೆ ಚೀಟಿ ನೀಡಬೇಕು, ಇಲ್ಲವಾದರೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಹಾಲಿ ಶಾಸಕ ಮಸಾಲಾಜಯರಾಮ್ ತಮ್ಮ ಆಡಳಿತ ಅವಧಿಯಲ್ಲಿ 1 ಕೋಟಿ ಅನುದಾನವನ್ನು ತರಲಾಗದಿದ್ದರೂ, ನನ್ನ ಅವಧಿಯಲ್ಲಿ ಮಂಜೂರಾಗಿ ಕಾಮಗಾರಿಗಳ ಭೂಮಿ ಪೂಜೆ ಮಾಡಿದ್ದರೂ ಶಾಸಕರು ತೆರಳಿ ಡಾಂಬರ್ ಹಾಕಿಸಿ ತಮ್ಮದೆ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದು ಅಗ್ಗದ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಮಸಾಲಜಯರಾಮ್ ಶಾಸಕ ಸ್ಥಾನಕ್ಕೆ ಗೌರವ ಬರುವಂತಹ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಆರು ತಿಂಗಳಿನಿಂದ ಹೇಮಾವತಿ ನೀರು ತಾಲ್ಲೂಕಿನ ಮೂಲಕ ಹರಿದರು ಸಹ ತಾಲ್ಲೂಕಿನ ಹಲವಾರು ಕೆರೆಗಳು ತುಂಬಿಲ್ಲ. ಸಿ.ಎಸ್.ಪುರ, ಮಾವಿನಹಳ್ಳಿ, ಚಂಗಾವಿ, ಕಲ್ಲೂರು ತಾಲ್ಲೂಕಿನ ದಬ್ಬೇಘಟ್ಟ ಕೆರೆ ಸಹ ತುಂಬಿಲ್ಲ. ನನ್ನ ಅವಧಿಯಲ್ಲಿ ಹೋರಾಟ ಮಾಡಿ ತಾಲ್ಲೂಕಿನ ಎಲ್ಲ ಕೆರೆಗಳನ್ನು ತುಂಬಿಸಲಾಗಿತ್ತು. ಈ ಬಾರಿ ಕೆರೆಗಳು ತುಂಬದ ಕಾರಣ ಮತ್ತೆ 15 ದಿನಗಳು ನೀರು ಹರಿಸಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಳಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅತಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿಯಾಗಿದ್ದಾರೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮಾ, 15 ಕೋಟಿ ಉದ್ಯೋಗ ಸೃಷ್ಟಿ ಹುಸಿಯಾಗಿದೆ. ರೈತಾಪಿಗಳಿಗೆ 24 ಗಂಟೆ ವಿದ್ಯುತ್ ಕೊಡುವ ಭರವಸೆ ನೀಡಲು ವಿಫಲರಾಗಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗುವಂತೆ ರೈತರ 44 ಸಾವಿರ ಕೋಟಿ ಸಂಪೂರ್ಣ ಸಾಲಮನ್ನಾ ಮಾಡಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ರೈತವಿರೋಧಿ ನೀತಿಯನ್ನು ಅನುಸರಿಸುತ್ತಿದೆ, ಸಾಲಮನ್ನಾ ಬಗ್ಗೆ ಚಕಾರವೆತ್ತದ ಕೃಷಿಕರನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ನನ್ನವರು ನನ್ನನ್ನು ಸೋಲಿಸಿದರು : ವಿಧಾನ ಸಭಾ ಚುನಾವಣೆಯಲ್ಲಿ ಎದುರಾಳಿ ಪಕ್ಷದವರು ನನ್ನನ್ನು ಸೋಲಿಸಲಿಲ್ಲ, ನಾನೆ ಟಿಕೆಟ್ ನೀಡಿ ಗೆಲ್ಲಿಸಿದ ಜನಪ್ರತಿನಿಧಿಗಳು ನನ್ನ ಸೋಲಿಗೆ ಕಾರಣರಾದರು. ಮತ್ತೊಬ್ಬ ಎಂ.ಎಲ್.ಸಿ 4 ವರ್ಷದಿಂದ ಕ್ಷೇತ್ರಕ್ಕೆ ಬಾರದಿದ್ದವರು ಈಗ ಎಲ್ಲ ಕಾರ್ಯಕ್ರಮಗಳಿಗೆ ಆಗಮಿಸುತ್ತಿದ್ದಾರೆ. ಒಂದು ರೂ. ಅನುದಾನವನ್ನು ನೀಡದಿದ್ದರು ಕ್ಷೇತ್ರದಲ್ಲಿ ಸುತ್ತಾಡಿ ಕೆಲಸ ಮಾಡುತ್ತಿದ್ದಾರೆ ಎಂದು ಹೆಸರು ಹೇಳದೆ ಆರೋಪಿಸಿ ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಮಾತನಾಡುತ್ತೇನೆ ಎಂದು ತಿಳಿಸಿದರು ಕಾರ್ಯಕ್ರಮಕ್ಕೂ ಮುನ್ನ ಜೆಡಿಎಸ್ ಕಚೇರಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು .
ನಂತರ ತಹಸೀಲ್ದಾರ್ ನಯೀಮ್‍ಉನ್ನೀಸರವರಿಗೆ ಮನವಿಪತ್ರ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಜೆಡಿಎಸ್ ಅಧ್ಯಕ್ಷ ಸ್ವಾಮಿ, ನಂಜೇಗೌಡ, ಪಟ್ಟಣ ಪಂಚಾಯಿತಿ ಸದಸ್ಯ ವಿಜಯ್‍ಕುಮಾರ್, ಎ.ಪಿ.ಎಂ.ಸಿ. ಸದಸ್ಯರಾದ ರೇಣುಕಯ್ಯ, ಹಿಂಡುಮಾರನಹಳ್ಳಿ ನಾಗರಾಜಯ್ಯ, ಪ್ರಸನ್ನ, ಡಾ:ನಂಜಪ್ಪ, ಕೋಳಾಲಗಂಗಾಧರ್, ಮಲ್ಲೂರುತಿಮ್ಮೇಶ್, ಲೀಲಾವತಿಗಿಡ್ಡಯ್ಯ, ಬಾಣಸಂದ್ರಲಕ್ಷ್ಮೀದೇವಮ್ಮ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








