ತುಮಕೂರು
ಅಸಂಘಟಿತ ಕಾರ್ಮಿಕರಾದ ಮನೆಗೆಲಸಗಾರರು, ಹಮಾಲಿಗಳು, ಮೆಕ್ಯಾನಿಕ್‍ಗಳು, ಕ್ಷೌರಿಕರು, ಚಿಂದಿ ಆಯುವವರು, ಬೀದಿಬದಿ ವ್ಯಾಪಾರಿಗಳು, ಟೈಲರ್‍ಗಳು, ಚಿನ್ನಬೆಳ್ಳಿ ಕೆಲಸಗಾರರು ಪುರಿಭಟ್ಟಿ ಕಾರ್ಮಿಕರಿಗೆ ಸ್ಮಾರ್ಟ್‍ಕಾರ್ಡ್ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಸಂಘಟಿತ ಕಾರ್ಮಿಕರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.
ತುಮಕೂರು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವೃತ್ತದಲ್ಲಿ ಸಮಾವೇಶಗೊಂಡ ಅಸಂಘಟಿತ ವಲಯದ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಕಾರ್ಮಿಕ ಅಧಿಕಾರಿಗಳ ಮೂಲಕ ಸಚಿವ ವೆಂಕಟರಮಣಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ರಾಜ್ಯ ಸರ್ಕಾರವು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿಯಡಿ ಅರ್ಜಿಗಳು ಸಲ್ಲಿಸಿ ಆರು ತಿಂಗಳುಗಳು ಕಳೆದಿದ್ದರೂ ಇದುವರೆಗೂ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಿಲ್ಲ. ಇದರಿಂದ ಕಾರ್ಮಿಕರಿಗೆ ಗೊಂದಲ ಉಂಟಾಗಿದೆ. ಕೂಡಲೇ ಸ್ಮಾರ್ಟ್‍ಕಾರ್ಡ್‍ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಭಾಗವಾಗಿ ಉಚಿತ ಚಿಕಿತ್ಸಾ ಸೌಲಭ್ಯ, ಮಕ್ಕಳ ಶಿಕ್ಷಣಕ್ಕೆ ಸಹಾಯ, ಸ್ವಯಂ ಉದ್ಯೋಗಿಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯಗಳಿಗೆ ಯೋಜನೆಯನ್ನು ರೂಪಿಸಬೇಕು ಎಂದರು.ಹಮಾಲಿ ಕಾರ್ಮಿಕ ಸಂಘಟನೆಯ ಮುಖಂಡ ಗಂಗಾಧರ್ ಮಾತನಾಡಿ, ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ಸಂಬಂಧ ಸರ್ಕಾರ ಜಾಗವನ್ನು ಗುರುತಿಸಿದ್ದು ಸರಿಯಷ್ಟೇ. ಅವರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಮನೆಗೆಲಸಗಾರರ ಸಂಘದ ಮುಖಂಡರಾದ ಮಂಜುಳ ಮಾತನಾಡಿ ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರಿಗೆ ಸಾಮೂಹಿಕ ಉಚಿತ ವಸತಿ ಯೋಜನೆಯನ್ನು ರೂಪಿಸಬೇಕು. ಸೇವಾಭದ್ರತೆ ಮತ್ತು ಸಾಮಾಜಿಕ ಭದ್ರತೆಯನ್ನು ನೀಡಬೇಕು. ಒಂಟಿ ಮಹಿಳೆಯರು, ವಿಧವೆಯರು ಕುಟುಂಬ ಜವಾಬ್ದಾರಿ ಹೊತ್ತಿದ್ದು ಅವರು ಕುಟುಂಬ ನಿರ್ವಹಣೆಗೆ ಮನೆಗೆಲಸ ಮಾಡಿಕೊಂಡಿದ್ದಾರೆ. ಅವರ ರಕ್ಷಣೆ ಸರ್ಕಾರ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿಯನ್ನೊಳಗೊಂಡ ಭವಿಷ್ಯನಿಧಿ ಯೋಜನೆಯನ್ನು ರೂಪಿಸಬೇಕು. ಅಸಂಘಟಿತ ಕಾರ್ಮಿಕರ ತ್ರಿಪಕ್ಷೀಯ ಜಿಲ್ಲಾ ಮಟ್ಟದ ಸಮಿತಿಗಳಿಗೆ ಸಮಪ್ರಮಾಣದ ಕಾರ್ಮಿಕ ಪ್ರಾತಿನಿಧ್ಯವನ್ನು ನೀಡುವಂತೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡ ಬಿ.ಉಮೇಶ್ ಮಾತನಾಡಿ, ಕಚೇರಿಗಳಲ್ಲಿ ಹೆಚ್ಚಿನ ಸಿಬ್ಬಂದಿ ಇಲ್ಲ. ಹೀಗಾಗಿ ಸಿಬ್ಬಂದಿಯನ್ನು ನೇಮಕ ಮಾಡಿ ಅಸಂಘಟಿತ ಕಾರ್ಮಿಕರು ಸೇರಿದಂತೆ ಇತರ ಕಾರ್ಮಿಕರಿಗೆ ಸೂಕ್ತ ಸೌಲಭ್ಯವನ್ನು ವಿತರಿಸಬೇಕಿದೆ ಎಂದು ಹೇಳಿದರು. ಸರ್ಕಾರ ಒಂದು ಕಡೆ ಸಕಾಲ ಯೋಜನೆಯಡಿ ಒಂದು ತಿಂಗಳೊಳಗೆ ಅರ್ಜಿ ವಿಲೇವಾರಿ ಮಾಡುವುದಾಗಿ ಹೇಳುತ್ತಿದ್ದರೂ ಅದು ಆಗುತ್ತಿಲ್ಲ. ಈ ಸಂಬಂಧ ಜಿಲ್ಲಾಡಳಿತ ಮತ್ತು ಸರ್ಕಾರ ಗಮನಹರಿಸಬೇಕೆಂದು ಆಗ್ರಹಿಸಿದರು.
ಕೊಳಗೇರಿ ಹಿತರಕ್ಷಣಾ ಸಮಿತಿ ಮುಖಂಡ ಶೆಟ್ಟಾಳಯ್ಯ ಮಾತನಾಡಿ, ಮನೆಗೆಲಸಗಾರರ ಸೇವಾ ನಿಯಮಾವಳಿಗಳನ್ನು ಒಳಗೊಂಡಂತಹ ಶಾಸನವನ್ನು ಕೇಂದ್ರ ಮಟ್ಟದಲ್ಲಿ ರೂಪಿಸಲು ಕರ್ನಾಟಕ ಸರ್ಕಾರ ಒತ್ತಾಯಿಸಬೇಕು. ಅಸಂಘಟಿತ ಕಾರ್ಮಿಕರ ಕುಂದುಕೊರತೆಗಳನ್ನು ಆಲಿಸಲು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ತ್ರಿಪಕ್ಷೀಯ ಸಭೆಯನ್ನು ಕಡ್ಡಾಯವಾಗಿ ನಡೆಸುವಂತೆ ರಾಜ್ಯ ಸರ್ಕಾರ ಆದೇಶಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಗೋವಿಂದರಾಜು, ತಿಮ್ಮೇಗೌಡ, ಟೈಲರ್ ಸಂಘಟನೆಯ ಮುಖಂಡ ನಾಗರಾಜು ಮಾತನಾಡಿದರು. ಪ್ರತಿಭಟನಾ ನೇತೃತ್ವನ್ನು ಚಿನ್ನಬೆಳ್ಳಿ ಕೆಲಸಗಾರರ ಸಂಘದ ಸುರೇಶ್, ಕಾರ್ಮಿಕ ಸಂಘಟನೆಯ ಮುಖಂಡರಾದ ಪಲ್ಲವಿ, ಮನೆಗೆಲಸಗಾರರ ಸಂಘದ ಗಿರಿಜ, ಮಂಗಳಮ್ಮ ನೂರ್ ಜಾನ್, ಗೀತಾ, ವಸಂತ ಮೊದಲಾದವರು ವಹಿಸಿದ್ದರು.