ನಗರದ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳು ..!

ಶಿರಾ

      ವಿದ್ಯೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂಬುದು ಅತ್ಯಂತ ಕಟು ಸತ್ಯವೂ ಆಗಿದ್ದು ದಿನ ದಿನಕ್ಕೂ ಬದಲಾಗುತ್ತಿರುವ ಶಿಕ್ಷಣದ ಗುಣಮಟ್ಟ, ಶೈಕ್ಷಣಿಕ ಮಾದರಿಗಳು, ಕಠಿಣಗೊಳ್ಳುತ್ತಿರುವ ಪಠ್ಯಕ್ರಮಗಳ ನಡುವೆಯೂ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಕಳೆದ ಎರಡು ವರ್ಷಗಳಿಂದ ಸಾಕಷ್ಟು ಸುಧಾರಿಸುತ್ತಿದೆ ಎಂಬುದು ತಿಳಿದ ವಿಷಯವೇ ಆಗಿದೆ.

      ಇಂದಿನ ಬಹುತೇಕ ಹಿರಿಯರಿಗೆ ಈ ಹಿಂದಿನ ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಸಂಗಗಳನ್ನು, ಆಗಿನ ವಿದ್ಯಾಭ್ಯಾಸದ ಕಷ್ಟ-ಸುಖಗಳನ್ನು ಮೆಲುಕು ಹಾಕುವುದು ಅತ್ಯಂತ ಅಪರೂಪವೇ ಆಗಿದ್ದು ಅಂತಹ ಪ್ರಸಂಗಗಳು ಸ್ಮರಣೆಗೆ ಬಂದಾಗ ಗ್ರಾಮೀಣ ಬದುಕಿನಡಿಯ ಶಿಕ್ಷಣ ಮಹತ್ವದ ಪುಟಗಳನ್ನೇ ಹುಟ್ಟು ಹಾಕುತ್ತದೆ.

       5 ರಿಂದ 10 ಕಿ.ಮೀ. ದೂರವಿದ್ದ ಶಾಲೆಗೆ ನಡೆದು ಬರುವುದು, ಇರುವ ಒಂದೇ ಬಸ್ಸು ಭರ್ತಿಯಾದಾಗ ವಿಧಿ ಇಲ್ಲದೆ ಬಸ್ಸಿನ ಟಾಪ್ ಮೇಲೆ ಕೂತು ಬರುವುದು, ಮಳೆಗಾಲದಲ್ಲಿ ಹರಿಯುತ್ತಿದ್ದ ಹಳ್ಳಕೊಳ್ಳಗಳನ್ನು ದಾಟಿ ಪ್ರಾಣ ಭಯದಿಂದಲೇ ಶಾಲೆಗೆ ಬಂದು ಹೋಗುತ್ತಿದ್ದ ತ್ರಾಸದಾಯಕ ಬದುಕಿನ ಯಾತನೆಯನ್ನು ಇತ್ತೀಚೆಗಿನ ಶಾಲಾ ಮಕ್ಕಳು ಅನುಭವಿಸುವುದು ತುಂಬಾ ಕಡಿಮೆಯಾಗಿದೆ.

       ಕಳೆದ ಎರಡು ವರ್ಷಗಳ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ. ಫಲಿತಾಂಶಗಳನ್ನು ಗಮನಿಸಿದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರ್ತಿಸಿಕೊಳ್ಳುವಲ್ಲಿ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶವನ್ನೂ ಮೀರಿಸುವಷ್ಟರ ಮಟ್ಟಿಗೆ ವಿದ್ಯಾಭ್ಯಾಸದಲ್ಲಿ ಸುಧಾರಣೆ ಕಂಡಿರುವುದನ್ನು ಕಂಡಾಗ ಒಂದು ರೀತಿಯಲ್ಲಿ ಅಚ್ಚರಿಯ ಜೊತೆಗೆ ಮತ್ತೊಂದಿಷ್ಟು ಉತ್ತೇಜನವೂ ಅಗತ್ಯ ಅನ್ನಿಸುವುದು ಸರಿಯಷ್ಟೆ.

       ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಗಮನಿಸಿದರೆ ಜಿಲ್ಲೆಯ ನಗರ ಭಾಗದಲ್ಲಿ ಶೇ.70.5 ರಷ್ಟು ಫಲಿತಾಂಶ ಲಭಿಸಿದ್ದರೆ ಅದೇ ಗ್ರಾಮೀಣ ಭಾಗದಲ್ಲಿ 76.67 ರಷ್ಟು ಫಲಿತಾಂಶ ಲಭ್ಯವಾಗಿದೆ. ಅಂದರೆ ಪ್ರತೀ ವರ್ಷಕ್ಕೂ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸುತ್ತಿರುವುದರ ಬೆನ್ನ ಹಿಂದೆ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಾಕಷ್ಟು ಶ್ರಮವಿದೆ ಅನ್ನುವುದು ಅಕ್ಷರಶಃ ಸತ್ಯವೂ ಆಗಿದೆ.
ಜಿಲ್ಲೆಯಲ್ಲಿನ ಪಿ.ಯು.ಸಿ. ಹಾಗೂ ಎಸ್.ಎಸ್.ಎಲ್.ಸಿ. ಫಲಿತಾಂಶದ ಒಳಹೊಕ್ಕು ನೋಡಿದರೆ ಜಿಲ್ಲೆಯ ಅದೆಷ್ಟೋ ಸರ್ಕಾರಿ ಶಾಲಾ-ಕಾಲೇಜುಗಳು ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಗಳಿಸಿವೆಯಲ್ಲದೆ. ಗ್ರಾಮಾಂತರ ಶಾಲೆಗಳಲ್ಲಿನ ವಿದ್ಯಾರ್ಥಿಗಳೇ ತಾಲ್ಲೂಕಿಗೆ ಪ್ರಥಮ ಸ್ಥಾನಗಳನ್ನು ಪಡೆದ ಸ್ಪಷ್ಟ ನಿದರ್ಶನಗಳು ಬೆಳಕು ಕಂಡಿರುವುದನ್ನು ಕಂಡಾಗ ಗ್ರಾಮೀಣ ವಿದ್ಯಾರ್ಥಿಗಳು ನಗರದ ವಿದ್ಯಾರ್ಥಿಗಳಿಗಿಂತಲೂ ಕಡಿಮೆಯೇನಿಲ್ಲ ಅನ್ನಿಸುತ್ತದೆ.

       ಮಳೆ-ಬೆಳೆಗಳ ವೈಫಲ್ಯದ ನಡುವೆ ಕಳೆದ 20 ವರ್ಷಗಳಿಂದಲೂ ಗ್ರಾಮೀಣ ರೈತರ ಬದುಕು ಮೂರಾಬಟ್ಟೆಯಾಗಿ ಕೂತಿದೆ. ಮುಂಗಾರು ಚುರುಕಾಗಿ ಬಿತ್ತನೆಯೂ ನಡೆದಾಗ ರೈತನ ಮೊಗದಲ್ಲಿ ಸಂತಸ ಮೂಡಿ, ಬೆಳೆಯೂ ಕೈಗೆಟುಕಿದಾಗ ಮಕ್ಕಳ ಶೈಕ್ಷಣಿಕ ಬದುಕಿಗೆ ಪೋಷಕರೂ ಆಸರೆಯಾಗಲು ಅನುವಾಗುತ್ತದೆಯಾದರೂ ವರುಣನ ಕೋಪ ಇಮ್ಮಡಿಯಾದಾಗ ರೈತ ತನ್ನ ಬದುಕನ್ನೇ ಕಟ್ಟಿಕೊಳ್ಳಲು ಸಾಧ್ಯವಾಗದಾದಾಗ ಇನ್ನು ಮಕ್ಕಳ ಭವಿಷ್ಯವನ್ನು ಹಸನುಗೊಳಿಸುವುದಾದರೂ ಎಲ್ಲಿಂದ ಬಂತು…?.

       ಗ್ರಾಮೀಣ ಜನತೆಯ ಸಂಕಷ್ಟದ ಬದುಕು ಅದೆಷ್ಟೇ ಇದ್ದರೂ ಹೊಟ್ಟೆ ಬಟ್ಟೆಯನ್ನಾದರೂ ಕಟ್ಟಿ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಹಂಬಲವಂತೂ ಕಡಿಮೆಯಾಗಿಲ್ಲ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳೇ ಅಲ್ಲಿನ ಮಕ್ಕಳಿಗೆ ಅನಿವಾರ್ಯವೂ ಆದಾಗ ನಗರದಲ್ಲಿನ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ಸರಿ ಸಾಟಿಯಾಗಿ ಅಭ್ಯಾಸ ಮಾಡಲು ಹಳ್ಳಿಯ ಮಕ್ಕಳಿಗೆ ಕೊಂಚ ಕಷ್ಟ ಸಾಧ್ಯವೂ ಆಗುತ್ತದೆ.

        ಹಳೆಯದಾದ ಶಾಲಾ ಕಟ್ಟಡಗಳು, ಶಾಲೆಯ ಸುತ್ತಲೂ ಕಾಂಪೌಂಡ್‍ಗಳೇ ಇಲ್ಲದ ಶಾಲೆಗಳು, ಮುರಿದ ಹೆಂಚಿನ ಶಾಲೆಗಳಲ್ಲಿ ಕೂತು ವಿಧಿ ಇಲ್ಲದೆ ಸಾಗುವ ವಿದ್ಯಾರ್ಥಿಗಳ ಬದುಕು ಕಂಡರಿತವರಿಗೆ ಗೊತ್ತು. ಶಾಲೆಯ ಗಂಟೆ ಬಾರಿಸಿ ತರಗತಿಯೂ ಆರಂಭಗೊಂಡಾಗ ಶಾಲೆಗೆ ತಡವಾಗಿಯೇ ಬರುವ ಗ್ರಾಮೀಣ ಮಕ್ಕಳು ಅತ್ಯಂತ ದಡ್ಡರು ಎಂದು ಪರಿಗಣಿಸಿದರೆ ಅದು ನಿಜಕ್ಕೂ ತಪ್ಪು ಕಲ್ಪನೆ ಅನ್ನುವುದು ಇದೀಗ ಸಾಬೀತಾಗಿದೆ.

       ಬೆಳಗ್ಗೆಯಾದೊಡನೆ ಮುಖಕ್ಕಿಷ್ಟು ನೀರು ಸೋಕಿಸಿಕೊಂಡು ಪೋಷಕರು ಹೇಳುವ ಮನೆ ಕೆಲಸಗಳನ್ನು ಮಾಡುವುದು ಗ್ರಾಮೀಣ ವಿದ್ಯಾರ್ಥಿಗಳ ದಿನಚರಿಯಲ್ಲಿ ಅತ್ಯಂತ ಪ್ರಮುಖವೂ ಆಗಿದೆ. ಮನೆಯಲ್ಲಿ ಕಟ್ಟಿಕೊಂಡ ಒಂದೆರಡು ರಾಸುಗಳಿಗೆ ಮೇವು ಹಾಕಿ, ಸಗಣಿಯನ್ನು ಬಾಚಿ ಕಸದ ತೊಟ್ಟಿಗೆ ಹಾಕುವುದರಿಂದಾ ಹಿಡಿದು ಹಾಲಿನ ಡೈರಿಗೆ ಹಾಲು ನೀಡುವ, ಹೊಲದಲ್ಲಿನ ಸಣ್ಣಪುಟ್ಟ ಕೆಲಸಗಳನ್ನು ಮಾಡುವ, ಕೂಲಿಗಾರರನ್ನು ಜಮೀನಿನ ಕೆಲಸಕ್ಕೆ ಹೊಂಚುವಂತಹ ಕೆಲಸಗಳನ್ನೂ ಅನೇಕ ವಿದ್ಯಾರ್ಥಿಗಳು ಮಾಡಲೇಬೇಕಾದ ಅನಿವಾರ್ಯತೆಯೂ ಇದೆ.

       ಜೂನ್ ತಿಂಗಳು ಆರಂಭಗೊಳ್ಳುತ್ತಿದ್ದಂತೆಯೇ ಹಳ್ಳಿಯ ಭಾಗದ ಜನತೆ ಮಕ್ಕಳ ಶಿಕ್ಷಣಕ್ಕೆಂದು ಶಾಲೆಗೆ ಸೇರಿಸಲು ಕಿಸೆಯನ್ನು ತಡಕಾಡಿ ಹಣ ಹೊಂಚುವಷ್ಟರಲ್ಲಿ ಶಾಲಾ ಶುಲ್ಕ ಪಾವತಿಸುವ ಅಂತಿಮ ದಿನವೂ ಹತ್ತಿರಕ್ಕೆ ಬಂದುಬಿಟ್ಟಿರುತ್ತದೆ. ಕಷ್ಟವಾದರೂ ಹಣ ಹೊಂದಿಸಿ ಶಾಲಾ ಶುಲ್ಕ ಕಟ್ಟಿ ನಿಟ್ಟುಸಿರು ಬಿಡುವ ಜನರಲ್ಲಿ ಮಕ್ಕಳ ಉಜ್ವಲ ಭವಿಷ್ಯದ ಕನಸು ಕೂಡಾ ಇರುತ್ತದೆ ಅನ್ನುವುದನ್ನು ಮಕ್ಕಳು ಕೂಡಾ ಅರಿಯಬೇಕಾಗುತ್ತದೆ. ಇತ್ತೀಚೆಗೆ ಸರ್ಕಾರ ಉಚಿತವಾಗಿ ನೀಡುವ ಪಠ್ಯ ಪುಸ್ತಕ ಹಾಗೂ ನೋಟ್ ಪುಸ್ತಕಗಳ ನೆರವು ಮಕ್ಕಳಿಗೆ ಕೊಂಚ ನೆಮ್ಮದಿ ತಂದರೂ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಸರಿ ಇದ್ದರೆ ಮಕ್ಕಳ ಭವಿಷ್ಯ ನಿರೀಕ್ಷೆಯನ್ನು ಮೀರಿ ಬೆಳವಣಿಗೆ ಕಾಣುವುದರಲ್ಲಿ ಎರಡು ಮಾತಿಲ್ಲ.

     ನಗರ ಪ್ರದೇಶದ ಶಾಲಾ-ಕಾಲೇಜುಗಳು ಅತ್ಯಂತ ಗುಣಮಟ್ಟದ ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ನೀಡುವ ಪರಿ ದಿನ ದಿನಕ್ಕೂ ಹೆಚ್ಚಾಗುತ್ತಿದ್ದು ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹೋಲಿಕೆ ಮಾಡಿದಾಗ ಶೈಕ್ಷಣಿಕ ನೂತನ ವಿಷಯಗಳು ಹಳ್ಳಿಯ ಮಕ್ಕಳಿಗೆ ತಲುಪುವುದೇ ಕಷ್ಟವಾಗುತ್ತದೆ. ಅದು ನಗರ ಪ್ರದೇಶವಾಗಲಿ, ಗ್ರಾಮೀಣ ಪ್ರದೇಶವೇ ಆಗಲಿ ಮಕ್ಕಳು ಶಿಕ್ಷಕರು ಹೇಳುವ ಪಾಠ ಕೇಳಲು ಒಂದು ಉತ್ತಮ ಪರಿಸರ ನಿರ್ಮಾಣ ಅತ್ಯಗತ್ಯವಾಗುತ್ತದೆ. ಅಂತಹ ಸುಂದರ ವಾತಾವರಣವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆಯನ್ನು ಸರ್ಕಾರ ವಹಿಸಬೇಕಾಕುತ್ತದೆ. ಖಾಸಗಿ ಶಾಲೆಗಳಾದಲ್ಲಿ ಇಂತಹ ವಾತಾವರಣವನ್ನು ಆಡಳಿತ ಮಂಡಳಿಯೇ ನಿರ್ವಹಣೆ ಮಾಡಿಕೊಳ್ಳುವುದು ಅಗತ್ಯವಾಗುತ್ತದೆ.

      ನಗರದ ಖಾಸಗಿ ಶಾಲಾ-ಕಾಲೇಜುಗಳು ಪಡೆಯುವ ದುಬಾರಿಯ ಶಾಲಾ ಶುಲ್ಕಕ್ಕೆ ಸಮವಾಗಿ ಅತ್ಯಂತ ಹೆಚ್ಚಿನ ಫಲಿತಾಂಶವಷ್ಟೇ ಅಲ್ಲದೆ ಪೋಷಕರು ತಮ್ಮ ಮಗನ ಫಲಿತಾಂಶವನ್ನು ನಿರೀಕ್ಷೆ ಮಾಡಿಕೊಂಡಷ್ಟು ಬಾರದಿದ್ದಲ್ಲಿ ಶಾಲಾ ಆಡಳಿತ ಮಂಡಳಿಯ ಮೇಲೂ ಮುಗಿ ಬೀಳುವುದು ಸಹಜವಾಗುತ್ತಿದೆ. ದುಬಾರಿ ಶುಲ್ಕ ಪಡೆದ ನಗರ ಪ್ರದೇಶದ ಶಾಲೆಗಳ ಆಡಳಿತ ಮಂಡಳಿಗಳ ಮೇಲೆ ಮಕ್ಕಳ ಶಿಕ್ಷಣದ ಹೊರೆಯೂ ಹೆಚ್ಚಾಗಿರುತ್ತದೆ.

        ಈ ಕಾರಣದಿಂದಲೇ ನಗರದ ಶಾಲೆಗಳಲ್ಲಿ ತಿಂಗಳಿಗೊಂದು ಕಿರು ಪರೀಕ್ಷೆ, ಇಂತಹ ಕಿರು ಪರೀಕ್ಷೆಯ ಅಂಕಪಟ್ಟಿಯನ್ನು ಪೋಷಕರಿಗೆ ತಲುಪಿಸುವುದು, ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಶಾಲೆಯಲ್ಲಿ ಹಿಂದುಳಿದ ಮಕ್ಕಳನ್ನು ತಿದ್ದಿ ತೀಡುವುದರಲ್ಲಿಯೇ ಮಗ್ನರಾಗಿ ಪೋಷಕರಿಂದ ಒಂದಿಷ್ಟು ಭೇಷ್ ಎನ್ನಿಸಿಕೊಳ್ಳುವುದರ ಜೊತೆಗೆ ಉತ್ತಮ ಫಲಿತಾಂಶದ ನಿರೀಕ್ಷೆಯನ್ನೂ ಪ್ರತಿಷ್ಠಿತ ಶಾಲೆಗಳು ನಿರೀಕ್ಷಿಸುವುದು ಸಹಜವೂ ಆಗಿದೆ.

        ಪ್ರತಿಷ್ಠಿತ ಶಾಲೆಗಳು ಉತ್ತಮ ಫಲಿತಾಂಶ ತಂದುಕೊಳ್ಳುವುದು ಕೂಡಾ ಅನಿವಾರ್ಯವೂ ಆಗಿರುವ ಕಾರಣದಿಂದ ನುರಿತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದರಿಂದಾ ಹಿಡಿದು ವಿವಿಧ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಕೆಲಸ ಮಾಡುವುದು ಅನಿವಾರ್ಯವೂ ಆಗಿರುತ್ತದೆ. ಗ್ರಾಮೀಣ ಭಾಗದ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ, ಉಪನ್ಯಾಸಕರ ಕೊರತೆಯೂ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೂ ಮಕ್ಕಳು ಅಭ್ಯಾಸ ಮಾಡುವುದು ಅನಿವಾರ್ಯವಾಗತ್ತದೆ.

         ಹಳ್ಳಿಯ ಮಕ್ಕಳಿಗೆ ನುರಿತ ಶಿಕ್ಷಕರ ಕೊರತೆ ಹಾಗೂ ಅಭ್ಯಾಸಕ್ಕೆ ಉತ್ತಮ ವಾತಾವರಣದ ಅಗತ್ಯತೆಯ ಕೊರತೆಯೊಂದನ್ನು ಬಿಟ್ಟರೆ ಉಳಿದೆಲ್ಲಾ ಕ್ಷೇತ್ರಗಳಲ್ಲಿ ತಮ್ಮ ಬುದ್ದಿ ಚಿತ್ತತೆಗೆ ಮೆರಗು ನೀಡಿಕೊಳ್ಳುವ ಎಲ್ಲಾ ಶಕ್ತಿಗಳೂ ಗ್ರಾಮೀಣ ಮಕ್ಕಳಲ್ಲಿವೆ. ಹಳ್ಳಿಯ ಜಾನಪದ ಸೊಗಡಿನ ಚಿತ್ರಣ, ಪಶು-ಪಕ್ಷಿಗಳ ಸಂಕುಲಗಳನ್ನು ದಿನವಿಡೀ ಕಣ್ಣೆದುರೇ ನೋಡಿಕೊಂಡು ಬದುಕುವ ವಿದ್ಯಾರ್ಥಿಗಳಲ್ಲಿ ಅನುಕಂಪದ ಸಿಂಚನವೂ ಆಗುತ್ತದೆ.

          ಪಶುಪಾಲನೆ, ಕುರಿಗಾಯಿಕೆ, ಕೃಷಿಯ ಕಷ್ಟದ ಬದುಕಿನ ಚಿತ್ರಣ, ಪೋಷಕರು ದಿನವಿಡೀ ಜೀವನೋಪಾಯಕ್ಕೆ ಏನೆಲ್ಲಾ ಹರಸಾಹಸ ಮಾಡುವ ಕಷ್ಟದ ಪರಿಸ್ಥಿತಿಗಳನ್ನು ಹಳ್ಳಿಯ ಶಾಲಾ ಮಕ್ಕಳು ತಮ್ಮ ಕುಟುಂಬದೊಟ್ಟಿಗೆಯೇ ಇದ್ದು ಗಮನಿಸುವುದರಿಂದಾಗಿ ಮಕ್ಕಳ ಸಾಂಸ್ಕತಿಕ, ಸಾಮಾಜಿಕ ಹಾಗೂ ಸನ್ಮಾರ್ಗದ ದಾರಿಯತ್ತ ನಡೆಯಲು ಅನುವಾಗುತ್ತದೆ.

       ಪ್ರಸ್ತುತ ಉನ್ನತ ವ್ಯಾಸಂಗಗಳೊಟ್ಟಿಗೆ ಬಹುತೇಕ ಮಂದಿ ಐ.ಎ.ಎಸ್, ಐ.ಪಿ.ಎಸ್. ಕೆ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸಿರುವವರನ್ನು ಗಮನಿಸಿದರೆ ಬಹುತೇಕ ಗ್ರಾಮೀಣ ಪ್ರದೇಶದ ಪ್ರತಿಭಾವಂತರೇ ಹೆಚ್ಚಾಗಿರುವುದು ಅತ್ಯಂತ ಗಮನಾರ್ಹ ವಿಚಾರವೂ ಆಗಿದೆ. ಒಟ್ಟಾರೆ ದಿನ ದಿನಕ್ಕೂ ಶಿಕ್ಷಣವು ಕಠಿಣಗೊಳ್ಳುತ್ತಿದ್ದು ಕಠಿಣತೆಯ ನಡುವೆಯೂ ಗ್ರಾಮೀಣ ವಿದ್ಯಾರ್ಥಿಗಳು ತಮ್ಮದೇ ಶಿಕ್ಷಣದ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯವೂ ಆಗಿದೆ. ಆಳುವ ಸರ್ಕಾರಗಳು ನಗರ ಪ್ರದೇಶದ ಖಾಸಗಿ ಶಾಲೆಗಳು ನಡೆಸುವಷ್ಟು ಶಿಕ್ಷಣದ ಜವಾಬ್ದಾರಿಗಳನ್ನು ಹೊತ್ತು ಹೆಗಲಿಗೆ ಹೆಗಲು ನೀಡಿದ್ದೇ ಆದಲ್ಲಿ ಕುಗ್ರಾಮಗಳ ಹಳ್ಳಿ ಹೈಕಳ ಬದುಕು ಕೂಡಾ ಹಸನಾಗುವುದರಲ್ಲಿ ಎರಡು ಮಾತಿಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap