ಸಮಸ್ಯೆಗಳ ಸಾಗರದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ

ತುಮಕೂರು

 ವಿಶೇಷ ವರದಿ : ರಾಕೇಶ್.ವಿ

     ನಗರದ ಸರ್ಕಾರಿ ಬಸ್ ನಿಲ್ದಾಣವು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಮಾಡಲು ನೀಲ ನಕ್ಷೆ ತಯಾರಾಗಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ನೂತನ ಬಸ್ ಟರ್ಮಿನಲ್‍ಗೆ ಗುದ್ದಲಿ ಪೂಜೆ ನೆರವೇರಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಸನ್ನದ್ದರಾಗುತ್ತಿದ್ದಾರೆ. ಆದರೆ ಇಲ್ಲಿ ಅದಕ್ಕೆ ಮಾರಕವೆಂಬಂತೆ ಕಸದ ರಾಶಿಗಳು ರಾರಾಜಿಸಿದರೆ, ಬಸ್ ನಿಲ್ದಾಣದ ಮುಂಭಾಗ ಊಟದ ಪ್ಲೇಟ್‍ಗಳು, ಪ್ಲಾಸ್ಟಿಕ್ ವಸ್ತುಗಳ ರಾಶಿಗಳು ಕಂಡು ಬರುತ್ತಿವೆ.

      ನಗರದ ಸರ್ಕಾರಿ ಬಸ್ ನಿಲ್ದಾಣದಿಂದ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣ ಮಾಡುತ್ತಾರೆ. ಕೆಲಸದ ನಿಮಿತ್ತ ಕೇವಲ ತುಮಕೂರಿನಿಂದ ಬೆಂಗಳೂರಿಗೆ ಓಡಾಡುವರ ಸಂಖ್ಯೆಯೇ ಹೆಚ್ಚಿನದಾಗಿದೆ. ಇದರ ಜೊತೆಗೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಸ್ ನಿಲ್ದಾಣವನ್ನು ಸ್ಮಾರ್ಟ್‍ಟರ್ಮಿನಲ್ ಮಾಡುವ ಉದ್ದೇಶ ಒಳ್ಳೆಯದೇ ಆದರೂ ಅಭಿವೃದ್ಧಿ ಮಾಡುವುದಕ್ಕೂ ಮುಂಚೆಯಿಂದಲೇ ಈಗನ ನಿಲ್ದಾಣವನ್ನು ಕಡೆಗಣಿಸಲಾಗಿದೆ ಎಂಬಂತೆ ನಿಲ್ದಾಣದ ಒಳಭಾಗದಲ್ಲಿ, ಮುಂಭಾಗದಲ್ಲಿ ಕಸ ಸೇರಿದಂತೆ ವಿವಿಧ ಸಮಸ್ಯೆಗಳು, ಪ್ರಯಾಣಿಕರಿಂದ ವಿವಿಧ ಆರೋಪಗಳು ಕೇಳಿ ಬರುತ್ತಿವೆ.

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು

     ಬೆಳಗ್ಗೆಯಿಂದ ರಾತ್ರಿಯವರೆಗೆ ಅನೇಕ ಪ್ರಯಾಣಿಕರು ಊರುಗಳಿಗೆ ಪ್ರಯಾಣಿಸುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಬಸ್ಸುಗಳು ಬರುವುದೇ ಇಲ್ಲ. ಉದಾಹರಣೆಗೆ 8 ಗಂಟೆಗೆ ಬರಬೇಕಾದ ಬಸ್ಸು 9 ಗಂಟೆಯಾದರೂ ಬರುವುದೇ ಇಲ್ಲ. ಇದರಿಂದ ಬೇಸತ್ತ ಅದೆಷ್ಟೋ ಪ್ರಯಾಣಿಕರು ಖಾಸಗಿ ಬಸ್‍ಗಳತ್ತ ಮುಖ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಉತ್ತಮ ಸಾರಿಗೆ ಸಂಸ್ಥೆ ಎಂದು ಪ್ರಶಸ್ತಿಗಳನ್ನು ಪಡೆದಿರುವ ಕೆ.ಎಸ್‍ಆರ್‍ಟಿಸಿ ವಿಭಾಗ ಇದೀಗ ಜನರ ಛೀಮಾರಿಗೆ ಒಳಗಾಗುತ್ತಿವೆ.

ನಿಲ್ದಾಣದ ಒಳಭಾಗದಲ್ಲಿ ವಿಲೇವಾರಿಯಾಗದ ಕಸ

    ಬಸ್ ನಿಲ್ದಾಣದ ಒಳಭಾಗದ ಮೂಲೆ ಮೂಲೆಗಳಲ್ಲಿ ಕಸದ ರಾಶಿ ಎದ್ದು ಕಾಣುತ್ತದೆ. ದಿನನಿತ್ಯ ಕಸ್ವನ್ನು ವಿಲೇವಾರಿ ಮಾಡಬೇಕಾದವರು ಅದನ್ನು ಮಾಡದೆ ಕಸವನ್ನು ಗುಡ್ಡೆ ಹಾಕಿ ಅದಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಿಲ್ದಾಣದ ಎಡಭಾಗದಲ್ಲಿರುವ ಶೌಚಾಲಯ ಪಕ್ಕದಲ್ಲೇ ಕಸದ ರಾಶಿಗೆ ಬೆಂಕಿ ಹಚ್ಚಲಾಗಿದ್ದು, ಇದರಿಂದ ಹೊಗೆ ಹಾಗೂ ದುರ್ವಾಸನೆ ಬೀರುತ್ತಿದೆ. ಇದರಿಂದ ಹಾಸನದ ಕಡೆಗೆ ತೆರಳುವ ಬಸ್ಸುಗಳು ನಿಲ್ಲುವ ಭಾಗದಲ್ಲಿ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಕಾಯಬೇಕು. ಇಂತಹ ದುಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ನಿಲ್ದಾಣದ ಹಿಂಭಾಗದ ಪ್ರವೇಶದಲ್ಲಿಯ ವಾಹನ ನಿಲುಗಡೆಯ ಬಳಿಯೂ ಕಸದ ರಾಶಿ ಕಂಡು ಬರುತ್ತದೆ.

ಮುಂಭಾಗದಲ್ಲಿ ಪ್ಲಾಸ್ಟಿಕ್ ಪ್ಲೇಟ್‍ಗಳ ದರ್ಶನ

     ಕೆಎಸ್‍ಆರ್‍ಟಿಸಿ ಮುಂಭಾಗದಲ್ಲಿ ಪ್ರತಿ ದಿನ ರಾತ್ರಿ ಮೊಬೈಲ್ ಕ್ಯಾಂಟೀನ್‍ನವರು ವ್ಯಾಪಾರ ಮಾಡುತ್ತಾರೆ. ರಾತ್ರಿ ಮನೆಗೆ ತೆರಳುವ ವೇಳೆಗೆ ಕೆಲವರು ತಿಂದ ಪ್ಲೇಟ್‍ಗಳನ್ನು ಪಕ್ಕದ ಖಾಲಿ ಜಾಗದಲ್ಲಿ ಎಸೆಯುತ್ತಾರೆ. ಪಾಲಿಕೆಯ ನಿರ್ದೇಶನಗಳಿದ್ದರೂ ತಿಂದ ಪೇಪೆರ್ ಪ್ಲೇಟ್‍ಗಳು, ಪ್ಲಾಸ್ಟಿಕ್ ಬಾಟಲ್‍ಗಳನ್ನು, ಸೇರಿದಂತೆ ಪ್ಲಾಸ್ಟಿಕ್ ಪೇಪರ್‍ಗಳನ್ನು ಎಸೆಯಬಾರದು ಎಂದಿದ್ದರೂ ಅದನ್ನು ಪಾಲಿಸದೆ ಬಸ್ ನಿಲ್ದಾಣದ ಮುಂಭಾಗದ ದ್ವಿಚಕ್ರ ವಾಹನಗಳ ನಿಲುಗಡೆ ಸ್ಥಳದಲ್ಲಿ ಎಸೆದಿರುತ್ತಾರೆ. ಬೆಳಗ್ಗೆ ಅದನ್ನು ಸ್ವಚ್ಚ ಮಾಡಬೇಕಾದವರೂ ಅದನ್ನು ನೋಡಿದರೂ ನೋಡಿಲ್ಲ ಎಂಬಂತೆ ಹೋಗುತ್ತಿರುವುದರಿಂದ ಕೆಲ ಪ್ರಯಾಣಿಕರು ಬೇಸರ ವ್ಯಕ್ತ ಪಡಿಸುತ್ತಾರೆ.

ದುರ್ವಾಸನೆ ಬೀರುವ ಶೌಚಾಲಯಗಳು

      ನಗರದ ಬಸ್ ನಿಲ್ದಾಣದ ಎಡ ಹಾಗೂ ಬಲ ಭಾಗದಲ್ಲಿ ಶೌಚಾಲಯಗಳಿದ್ದು, ಶೌಚಾಲಯಗಳ ನಿರ್ವಹಣೆ ಸರಿಯಿಲ್ಲದ ಕಾರಣ ದುರ್ವಾಸನೆ ಬೀರುತ್ತದೆ. ಎಡಭಾಗದಲ್ಲಿ ಪುರುಷರಿಗೆ ಮೂತ್ರ ವಿಸರ್ಜನೆಗೆಂದು ಮಾಡಲಾದ ಶೌಚಾಲಯದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಅಲ್ಲಿ ಸ್ವಚ್ಛ ಮಾಡುವವರು ಇಲ್ಲ. ನೀರು ಬಿಡಲು ಯಾವುದೇ ಸೌಲಭ್ಯ ಮಾಡಿಲ್ಲ. ಅದರಂತೆಯೇ ಮಹಿಳಾ ಶೌಚಾಲಯದಲ್ಲಿಯೂ ಕೂಡ ಸ್ವಚ್ಛತೆಯ ಕೊರತೆಯಿದ್ದು ಬಳಕೆಗೆ ಬಾರದಂತಿವೆ ಎಂಬುದು ಪ್ರಯಾಣಿಕರು ಮಾಡುವ ಆರೋಪಗಳಾಗಿವೆ.
ಶುದ್ಧಕುಡಿಯುವ ನೀರಿನ ಘಟಕದಲ್ಲಿ ಬಾರದ ಸಿಹಿ ನೀರು

     ಈ ಹಿಂದೆ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡರ ಅಧಿಕಾರದ ಅವಧಿಯಲ್ಲಿ ಸಂಸದರ ನಿಧಿಯಿಂದ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಅನ್ನು ಆರಂಭ ಮಾಡಲಾಗಿತ್ತು. ಆರಂಭದಲ್ಲಿ ಅದರಿಂದ ಶುದ್ಧ ನೀರು ಲಭ್ಯವಾಯಿತು. ಆದರೆ ಅದು ಬರು ಬರುತ್ತಾ ಅದರಲ್ಲಿಂದ ಉಪ್ಪು ನೀರು ಬರಲು ಶುರುವಾಗಿದೆ. ಈಗಲೂ ಕೂಡ ವಾಟರ್ ಫಿಲ್ಟರ್ ನಲ್ಲಿ ಉಪ್ಪು ನೀರು ಬರುತ್ತಿದ್ದು, ಕುಡಿಯಲು ಯೋಗ್ಯವಿಲ್ಲವಾಗಿದೆ. ಇದನ್ನು ಅರಿಯ ಪ್ರಯಾಣಿಕರು ಕುಡಿಯುವ ನೀರಿಗೆ ಬೆಲೆ ಕಟ್ಟಿ ಬಾಟಲ್ ನೀರನ್ನು ಬಳಕೆ ಮಾಡುತ್ತಿದ್ದಾರೆ. ಇನ್ನು ಕೆಲವರು ದಾಹ ತೀರಿಸಿಕೊಳ್ಳಲು ನಿರ್ವಾ ಇಲ್ಲದೆ ಅದನ್ನೇ ಕುಡಿಯುತ್ತಾರೆ.

ನೋ ಪಾರ್ಕಿಂಗ್ ನಲ್ಲಿ ವಾಹನಗಳ ನಿಲುಗಡೆ

    ಬೆಂಗಳೂರು ಬಸ್‍ಗಳು ನಿಲ್ಲುವ ಸ್ಥಳದಲ್ಲಿ ಕಚೇರಿಗೆ ಅಂಟಿಕೊಂಡು ಇರುವ ಖಾಲಿ ಜಾಗದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲೆಂದು ಆಸನದ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ದ್ವಿಚಕ್ರ ವಾಹನಗಳು ನಿಲುಗಡೆ ಮಾಡಬಾರದು ಎಂದು ನಾಮಫಲಕವನ್ನು ಹಾಕಿದ್ದರೂ ಸಹ ಕೆಲವರು ತಮ್ಮ ದುರ್ಬುದ್ದಿಯನ್ನು ತೋರುತ್ತಾ ನಾಮಫಲಕ ಮುಂಭಾಗದಲ್ಲಿಯೇ ವಾಹನಗಳನ್ನು ಬಿಟ್ಟು ಹೋಗಿರುತ್ತಾರೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು ಕೆಎಸ್‍ಆರ್‍ಟಿಸಿ ವಿಭಾಗದ ಅಧಿಕಾರಿಗಳು ಗಮನ ಹರಿಸಬೇಕಿದೆ.

 


 ಬಸ್ ನಿಲ್ದಾಣದ ಪ್ರಾಂಗಣದಲ್ಲಿನ ಕಸದ ವಿಲೇವಾರಿ ಖಾಸಗಿ ವ್ಯಕಿಗಳಿಗೆ ಟೆಂಡರ್ ನೀಡಲಾಗಿದ್ದು, ಅದರ ನಿರ್ವಹಣೆ ಕಾರ್ಯ ಅವರೇ ನೋಡಿಕೊಳ್ಳಬೇಕು. ಈ ಬಗ್ಗೆ ಅವರಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಕಸದ ಸಮಸ್ಯೆ ಪರಿಹಾರ ಮಾಡುತ್ತೇವೆ. ಉಳಿದ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸುತ್ತೇವೆ.

ಗಜೇಂದ್ರ, ವಿಭಾಗೀಯ ನಿಯಂತ್ರಣಾಧಿಕಾರಿ, ತುಮಕೂರು    


ನಗರದ 5ನೇ ವಾರ್ಡ್ ನಮ್ಮ ವ್ಯಾಪ್ತಿಗೆ ಬರುತ್ತದೆ. ರಂಜಾನ್ ಹಬ್ಬ ಇದ್ದ ಕಾರಣದಿಂದಾಗ ಬಸ್ ನಿಲ್ದಾಣದ ಪಕ್ಕದಲ್ಲಿ ಎಂಜಿ ರಸ್ತೆಯಲ್ಲಿ ಸ್ವಲ್ಪ ಕಸವು ಕಾಣಿಸಿಕೊಂಡಿದೆ. ಇದನ್ನು ಸ್ವಚ್ಛ ಮಾಡಲು ನೌಕರರಿಗೆ ಆದೇಶ ನೀಡಲಾಗಿದೆ. ಪ್ರತಿನಿತ್ಯ ಸ್ವಲ್ಪ ತಡವಾದರೂ ಸಂಪೂರ್ಣವಾಗಿ ಸ್ವಚ್ಛ ಮಾಡಿಸುತ್ತೇವೆ.

ರುದ್ರೇಶ್, ಆರೋಗ್ಯ ನಿರೀಕ್ಷಕರು  

  ತುಮಕೂರು ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ಬಸ್ ನಿಲ್ದಾಣದಲ್ಲಿ ಮಾತ್ರ ಗಬ್ಬು ನಾರುತ್ತಿದೆ. ನಿಲ್ದಾಣದ ಮೂಲೆಗಳಲ್ಲಿ ಕಸದ ರಾಶಿಗಳು ಕಂಡುಬರುತ್ತಿವೆ. ಒಂದು ಕಡೆ ಕಸದ ರಾಶಿಗೆ ಬೆಂಕಿ ಹಚ್ಚಿದ್ದಾರೆ. ಕೆಲವು ಕಡೆ ಹಾಗೇ ಬಿಟ್ಟಿದ್ದಾರೆ. ಸಿದ್ದಗಂಗಾದಂತಹ ಪುಣ್ಯ ಕ್ಷೇತ್ರ ಇರುವ ತುಮಕೂರು ನಗರಕ್ಕೆ ಇಂತಹ ಕೆಲ ಸಮಸ್ಯೆಗಳಿಂದ ಕಳಂಕ ಬರುತ್ತಿದೆ.

ರಮೇಶ, ಪ್ರಯಾಣಿಕ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap