ಬೆಂಗಳೂರು
ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮ ಸಾಂಕೇತಿಕವಾಗಿತ್ತು. ಒಂದು ಕಡೆ ಬಿಜೆಪಿ ನಾಯಕರ ವಿರೋಧ, ಮತ್ತೊಂದೆಡೆ ಮೈತ್ರಿ ಸರ್ಕಾರದ ಬಂಡಿ ಎಳೆಯುತ್ತಿರುವ ಸಾರಥಿಗಳಾದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಗೈರು ಹಾಜರಿಯಲ್ಲಿ ಟಿಪ್ಪು ಜಯಂತಿ ಅತ್ಯಂತ ನೀರಸವಾಗಿತ್ತು.
ಕುಮಾರ ಸ್ವಾಮಿ ಅವರು ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಸಿಂಗಪುರದಲ್ಲಿ ಚಿಕಿತ್ಸೆ ಪಡೆಯತ್ತಿರುವ ತುಮಕೂರು ಜಿಲ್ಲೆಯ ಹಿರಿಯ ರಾಜಕಾರಣಿ ಚೆನ್ನಿಗಪ್ಪ ಅವರ ಆರೋಗ್ಯ ವಿಚಾರಿಸಲು ತೆರಳಿದ್ದರು.
ಈ ಗೈರು ಹಾಜರಿಯಲ್ಲಿ ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ನಡೆದ ಸಮಾರಂಭ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸರ್ಕಾರಿ ಕಾರ್ಯಕ್ರಮದಂತೆ ಭಾಸವಾಗಲಿಲ್ಲ. ರಾಜ್ಯ ಹಲವು ಜಿಲ್ಲೆಗಳಲ್ಲೂ ನಡೆದ ಕಾರ್ಯಕ್ರಮದಲ್ಲಿ ಮೈತ್ರಿ ಸರ್ಕಾರದ ಉಭಯ ಪಕ್ಷಗಳ ನಾಯಕರು ಲಗುಬಗೆಯಿಂದ ಪಾಲ್ಗೊಳ್ಳಲಿಲ್ಲ.
ಹಿಂದಿನ ಸರ್ಕಾರ ಜಾರಿಗೆ ತಂದ, ಅದರಲ್ಲೂ ಹಾಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಕಾಲದಲ್ಲಿ ಅಸ್ಥಿತ್ವಕ್ಕೆ ಬಂದ ಟಿಪ್ಪು ಜಯಂತಿ ರಾಜಕೀಯ ಕಾರಣಗಳಿಗಾಗಿ ಸೊರಗುವಂತಾಗಿದೆ. ಒಂದು ರೀತಿಯಲ್ಲಿ ಕದ್ದು ಮುಚ್ಚಿ ಸಮಾರಂಭ ಮಾಡಿದಂತೆ ಕಂಡು ಬಂತು.
ರಾಜ್ಯ ಸರ್ಕಾರದಿಂದ ಇಂದು ವಿಧಾನ ಸೌಧದ ಬ್ವಾಂಕ್ವೆಟ್ ಹಾಲ್‍ನಲ್ಲಿ ನಡೆದ ಟಿಪ್ಪು ಸುಲ್ತಾನ್ ಜಯಂತಿ ಪ್ರಧಾನ ಕಾರ್ಯಕ್ರಮದಲ್ಲಿ ಜನರೇ ಇರಲಿಲ್ಲ. ಹಿಂದಿನ ವರ್ಷಗಳಷ್ಟು ಉತ್ಸಾಹ, ಸಂಭ್ರಮ ಕಂಡು ಬರಲಿಲ್ಲ.
ಹಾಲಿ ಮೈತ್ರಿ ಸರ್ಕಾರ ವಿವಾದವನ್ನು ಬೆಳೆಸಲು ಬಯಸಿದಂತೆ ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳಲು ಬಯಸಲಿಲ್ಲ.
ವಿಧಾನಸೌಧದ ಕಾರ್ಯಕ್ರಮವನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಉದ್ಘಾಟಿಸಿ, ಟಿಪ್ಪು ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿದರು.
ನಂತರ ಮಾತನಾಡಿದ ಶಿವಕುಮಾರ್, ಮುಖ್ಯಮಂತ್ರಿಗಳಿಗೆ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ ಹಿನ್ನಲೆಯಲ್ಲಿ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಮಾಜಿ ಸಚಿವ ಚೆನ್ನಿಗಪ್ಪ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಆರೋಗ್ಯ ವಿಚಾರಿಸಲು ಇಂದು ವಿದೇಶಕ್ಕೆ ತೆರಳಿದ್ದಾರೆ. ಉಪ ಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಅವರು ಸಹ ಈ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದ ಕಾರಣ ಸರ್ಕಾರದ ಪರವಾಗಿ ನಾನು ಭಾಗವಹಿಸಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರ ಕ್ಷೇತ್ರ ಶಾಸಕ ಹಾಗೂ ಮಾಜಿ ಸಚಿವ ಆರ್. ರೋಷನ್‍ಬೇಗ್ ಅವರು ಮಾತನಾಡಿ, ಟಿಪ್ಪು ಸುಲ್ತಾನ್ ಅವರು ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಿದ್ದರು ಎಂದು ನೆನಪಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ: ಜಯಮಾಲ ಅವರು ಮಾತನಾಡಿ ಒಬ್ಬ ವ್ಯಕ್ತಿ ಕೇವಲ ಅಧಿಕಾರ ಹಾಗೂ ಹಣದ ಬಲದಿಂದ ಚರಿತ್ರೆಯಲ್ಲಿ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಜನಸಾಮಾನ್ಯರ ಬದುಕನ್ನು ಉತ್ತಮಗೊಳಿಸಿದ ವ್ಯಕ್ತಿ ಮಾತ್ರ ಇತಿಹಾಸದಲ್ಲಿ ಉಳಿದುಕೊಳ್ಳುತ್ತಾರೆ ಅಂತಹ ವ್ಯಕ್ತಿಗಳಲ್ಲಿ ಟಿಪ್ಪು ಸುಲ್ತಾನ್ ಒಬ್ಬರು ಎಂದು ತಿಳಿಸಿದರು.
ಆಹಾರ ಮತ್ತು ನಾಗರೀಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆ ಸಚಿವ ಬಿ.ಝಡ್. ಜಮೀರ್ ಅಹ್ಮದ್‍ಖಾನ್ ಅವರು ಮಾತನಾಡಿ ಮೈಸೂರು ಹುಲಿ ಎಂದು ಪ್ರಸಿದ್ದರಾಗಿರುವ ಟಿಪ್ಪುಸುಲ್ತಾನ್ ಜಯಂತಿಯನ್ನು ಇಂದು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಆಚರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಜರತ್ ಟಿಪ್ಪು ಸುಲ್ತಾನ್ ಬಗ್ಗೆ ಕಳುಹಿಸಿದ ಸಂದೇಶವನ್ನು ಕನ್ನಡ ಮತ್ತು ಸಂಸ್ಕತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ವಾಚಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಹಜರತ್ ಮೌಲಾನ ಸಗೀರ್ ಅಹ್ಮದ್‍ಖಾನ್ ಸಾಹೇಬ್ ರಷಾದಿ ಅಮೀರ್-ಎ-ಷರಿಯತ್ ಅವರು ವಹಿಸಿದ್ದರು. ಇದೇ ಸಂದರ್ಭಲ್ಲಿ ರೂಮಿ ಹರೀಶ್ ಮತ್ತು ತಂಡದಿಂದ ಸೂಫಿ ಗಾಯನ ಏರ್ಪಡಿಸಲಾಗಿತ್ತು.
ಮಡಿಕೇರಿಯಲ್ಲಿ ಸರ್ಕಾರದಿಂದ ಆಯೋಜಿತವಾಗಿದ್ದ ಟಿಪ್ಪುಜಯಂತಿ ಕಾರ್ಯಕ್ರಮದಲ್ಲಿ ಸಭಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಚುಟುಕಾಗಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಸೋಮವಾರಪೇಟೆ, ವಿರಾಜಪೇಟೆಗಳಲ್ಲಿಯೂ ಟಿಪ್ಪುಜಯಂತಿಯನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿರೋಧಿಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ವಿರಾಜಪೇಟೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಬಂಧಿಸಲಾಗಿದೆ. ಟಿಪ್ಪುಜಯಂತಿ ವಿರೋಧಿಸಿ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಸ್ವಯಂ ಪ್ರೇರಿತ ಕೊಡಗು ಬಂದ್ ಬಹುತೇಕ ಯಶಸ್ವಿಯಾಗಿತ್ತು. ಕೊಡಗಿನಾದ್ಯಂತ ಅಂಗಡಿಗಳು ಮುಚ್ಚಿದ್ದವು. ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಖಾಸಗಿ ಬಸ್‍ಗಳು ಮತ್ತು ಆಟೋ ಸಂಚಾರ ಇರಲಿಲ್ಲ.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಪಟ್ಟಣಗಳು ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು. ಕೊಡಗು ಜಿಲ್ಲಾಡಳಿತ ಭಾನುವಾರ ಮುಂಜಾನೆವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ 2000 ಪೊಲೀಸರನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ. 200 ಸಿ.ಸಿ.ಕ್ಯಾಮರಾಗಳ ಕಣ್ಗಾವಲು ಹಾಕಲಾಗಿತ್ತು. 20 ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗಿದ್ದು ಪ್ರತಿ ವಾಹನವನ್ನೂ ತಪಾಸಣೆಗೊಳಪಡಿಸಲಾಗುತ್ತಿತ್ತು.
ಕೊಡಗು ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಟಿಪ್ಪುಜಯಂತಿ ವಿರೋಧಿಸಿ ಪ್ರತಿಭಟನೆ ಮಾಡಿದ ಆರೋಪದ ಮೇರೆಗೆ 174 ಜನರನ್ನು ಬಂಧಿಸಲಾಗಿದೆ ಎಂದು ದಕ್ಷಿಣ ವಲಯ ಪೆಲೀಸ್ ಮಹಾನಿರೀಕ್ಷಕ ಕೆ.ವಿ. ಶರತ್ ಚಂದ್ರ ಮಾಹಿತಿ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇಂದು ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಕೃಷಿ ಸಚಿವ ಎನ್. ಹೆಚ್. ಶಿವಶಂಕರ್ ರೆಡ್ಡಿ ಉದ್ಘಾಟಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಜಯಂತಿಗೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಿ.ಟಿ. ರವಿ ಮತ್ತು ಇನ್ನಿತರೆ ಕಾರ್ಯಕರ್ತರನ್ನು ಚಿಕ್ಕಮಗಳೂರಿನಲ್ಲಿ ಪೆಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಯಿತು.
ದೇವನಹಳ್ಳಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಟಿಪ್ಪು ಜನ್ಮಸ್ಥಳದ ಬಳಿ ಟಿಪ್ಪು ಪ್ರತಿಮೆಗೆ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಟಿಪ್ಪು ದೇಶದಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸಿದ ವ್ಯಕ್ತಿ ಎಂದು ಹೇಳಿದರು. ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಹಾಗೂ ಹೊಸಕೋಟೆ ತಾಲ್ಲೂಕಿನಲ್ಲೂ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








