ಚಿತ್ರದುರ್ಗ:
ಪ್ರಾಚೀನ ಕಾಲದಿಂದ ಇಂದಿನ ವೈಜ್ಞಾನಿಕ ಯುಗದವರೆಗೂ ರಂಗಭೂಮಿ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ ಎಂದು ಪ್ರೊ.ಬಸವರಾಜ್ ಟಿ.ಬೆಳಗಟ್ಟ ಹೇಳಿದರು.
ಗಾನಯಾನ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಅಮಕುಂದಿ ಮೊಳಕಾಲ್ಮುರು ತಾಲೂಕು, ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಚಿತ್ರದುರ್ಗ ಹಾಗೂ ಹಂಸಗಾನ ಕಲಾ ಸಂಘ ಇವರುಗಳ ಸಹಯೋಗದೊಂದಿಗೆ ಬಿ.ಎಡ್. ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವರಂಗಭೂಮಿ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಮನುಷ್ಯನನ್ನು ಅತಿ ಎತ್ತರದ ಮಟ್ಟಕ್ಕೆ ಕೊಂಡೊಯ್ಯುತ್ತದೆ.
1842 ರಲ್ಲಿ ಆರಂಭಗೊಂಡ ರಂಗಭೂಮಿ ಅನೇಕ ದಿಗ್ಗಜ್ಜರುಗಳನ್ನು ಕೊಡುಗೆಯಾಗಿ ನೀಡಿದೆ. ಗುಬ್ಬಿ, ಬಸವೇಶ್ವರ ಕಲಾ ಪೋಷಿತ ನಾಟಕ ಮಂಡಳಿ, ನೀನಾಸಂ ಕಲಾ ಕ್ಷೇತ್ರ, ಪದ್ಮಭೂಷಣ ದಿವಂಗತ ಡಾ.ರಾಜ್‍ಕುಮಾರ್, ಲೋಕೇಶ್, ಉಮಾಶ್ರಿಯಂತಹ ಕಲಾವಿದರು ಬೆಳೆದಿದ್ದು ರಂಗಭೂಮಿಯಿಂದ ಎಂದು ಸ್ಮರಿಸಿ ನೀವು ಕೂಡ ರಂಗಭೂಮಿ ಪ್ರವೇಶಿಸಿದರೆ ಬದುಕು ಹಸನಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿಶ್ವರಂಗಭೂಮಿ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಪದನಿಮಿತ್ತ ಉಪನಿರ್ದೇಶಕರಾದ ಎಂ.ರೇವಣಸಿದ್ದಪ್ಪ ಮಾತನಾಡುತ್ತ ಕಲೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಾಗಿದೆ. ಪ್ರಶಿಕ್ಷಣಾರ್ಥಿಗಳಾದ ನೀವುಗಳು ಮುಂದೆ ವಿದ್ಯಾರ್ಥಿಗಳಿಗೆ ರಂಗಕಲೆಯ ಬಗ್ಗೆ ಶಿಕ್ಷಣ ನೀಡಬೇಕಾಗಿದೆ. ತರಬೇತಿಗಳಲ್ಲಿ ರಂಗಭೂಮಿ, ರಂಗಕಲೆ ಕುರಿತು ಪಠ್ಯದ ಅವಶ್ಯಕತೆಯಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ರಂಗಕಲಾವಿದರನ್ನು ಕರೆಸಿ ಉಪನ್ಯಾಸ ತರಬೇತಿಗಳನ್ನು ಕೊಡಿಸಲಾಗುವುದು ಎಂದರು.
ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ ರಂಗಭೂಮಿ ಬೆಳೆದು ಬಂದ ಹಾದಿಯ ಕುರಿತು ವಿದ್ಯಾರ್ಥಿಗಳಿಗೆ ರಂಗ ಸಂದೇಶ ನೀಡಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ಜಾನಪದ ಹಾಡುಗಾರ ಎಂ.ಕೆ.ಹರೀಶ್, ಜಿಲ್ಲಾ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಓ.ಮುರಾರ್ಜಿ, ಪ್ರವಾಚಕರಾದ ಟಿ.ಜಿ.ಲೀಲಾವತಿ, ಉಪನ್ಯಾಸಕ ಎಂ.ವಿ.ರಾಜಣ್ಣ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಳಲಿ ಶ್ರೀನಿವಾಸ್, ಕುಮಾರ್, ಉಪನ್ಯಾಸಕ ಎಂ.ವಿ.ರಾಜಣ್ಣ ವೇದಿಕೆಯಲ್ಲಿದ್ದರು.