ದಾವಣಗೆರೆ 

ಮಹಿಳಾ ಮೀಸಲಾತಿಯಿಂದ ಮಾತ್ರ ಮಹಿಳಾ ಸಬಲೀಕರಣ ಸಾಕಾರಗೊಳ್ಳಲು ಸಾಧ್ಯವಾಗಲಿದೆ ಎಂದು ಜಿ.ಪಂ.ಅಧ್ಯಕ್ಷೆ ಶೈಲಜಾ ಬಸವರಾಜ್ ಅಭಿಪ್ರಾಯಪಟ್ಟರು.ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಮತ್ತು ಸ್ತ್ರೀಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾಳೆ. ಪ್ರತಿ ಮಹಿಳೆಯರಲ್ಲೂ ತನ್ನದೇಯಾದ ಪ್ರತಿಭೆ ಇದ್ದು, ತಮ್ಮಲ್ಲಿರುವ ಪ್ರತಿಭೆಯನ್ನು ಈಗಾಗಲೇ ಮಹಿಳೆಯರು ಅನಾವರಣಗೊಳಿಸಿದ್ದಾಳೆ. ಆದರೆ, ರಾಜಕಾರಣದಲ್ಲಿ ಮಹಿಳೆಯರು ಪ್ರತಿಭೆ ಕಾಣುವುದು ತುಸು ಕಡಿಮೆಯೇ. ಏಕೆಂದರೆ, ಸಾಮಾನ್ಯವಾಗಿ ಮೀಸಲು ಕ್ಷೇತ್ರಗಳಲ್ಲಿ ಗಂಡನಿಗೆ ಸ್ಥಾನವಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ನಿಲ್ಲಿಸುತ್ತಾರೆ. ಈ ಮಧ್ಯೆಯೂ ಇತ್ತೀಚೆಗೆ ಮಹಿಳೆಯರು ಪರಿವರ್ತನೆಯಾಗಿದ್ದು, ಪತಿಗೆ ಮಾರ್ಗದರ್ಶನ ಮಾಡಿ, ತಮ್ಮ ನಿಲುವನ್ನು ವ್ಯಕ್ತಪಡಿಸುವ ವಾತಾವರಣ ಸೃಷ್ಟಿಯಾಗಿದುರವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಮಹಿಳಾ ದಿನಾಚರಣೆ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗದೇ, ಕುಟುಂಬದ, ಸಮಾಜದ ಎಲ್ಲ ಪುರುಷರು ಸೇರಿ ಆಚರಿಸುವಂತಾಗಬೇಕು. ಪತಿ-ಪತ್ನಿ ಸಂಸಾರದ ಎರಡು ಚಕ್ರಗಳಿದ್ದಂತೆ, ಮಹಿಳೆಯರು ಅಡುಗೆ, ಊಟ, ಪ್ರೀತಿ ತೋರುವುದು ಗಂಡ ಹಾಗೂ ಮಕ್ಕಳಿಗಾಗಿ, ಆದ್ದರಿಂದ ಮಹಿಳಾ ದಿನಾಚರಣೆಯನ್ನು ಮಹಿಳೆಯರೇ ಆಚರಿಸಿದರೆ, ಅದು ಪರಿಪೂರ್ಣವಾಗುವುದಿಲ್ಲ. ಎಲ್ಲರೂ ಸೇರಿ ಆಚರಿಸುವಂತಾಗಬೇಕೆಂದು ಪ್ರತಿಪಾದಿಸಿದರು.
ಪರಿವರ್ತನೆ ಜಗದ ನಿಯಮ. ಹಿಂದಿನದ್ದಕ್ಕೇ ಅಂಟಿಕೊಳ್ಳದೇ ಎಲ್ಲ ಕ್ಷೇತ್ರದಲ್ಲಿ ಬದಲಾವಣೆ ಆಗುತ್ತಿದೆ. ಅದೇ ರೀತಿ ಆಡಳಿತದಲ್ಲಿಯೂ ಕಾನೂನಿನ ಚೌಕಟ್ಟಿನೊಳಗೆ ಕೆಲವು ಬದಲಾವಣೆ ಮಾಡಿಕೊಂಡು, ಹೊಂದಾಣಿಕೆಯಿಂದ ಆಡಳಿತ ನಡೆಸಿದರೆ ಯಾವುದೇ ಸಮಸ್ಯೆ ಬರುವುದಿಲ್ಲ. ಹಾಗೆಯೇ ಕುಟುಂಬದಲ್ಲಿಯೂ ಸಹ ಏಕತಾ ಮನೋಭಾವದಿಂದ ಅತ್ತೆ, ಸೊಸೆಯನ್ನು ಮಗಳಂತೆ, ಸೊಸೆ ಅತ್ತೆಯನ್ನು ತಾಯಿಯಂತೆ ಕಂಡು ಪ್ರೀತಿಯಿಂದ ನಡೆದುಕೊಂಡರೆ ಕುಟುಂಬದಲ್ಲೂ ಬಿರುಕು ಮೂಡುವುದಿಲ್ಲ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಇಲಾಖೆಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸುತ್ತಾರೆ. ಅದೇರೀತಿ ಅತ್ತೆ, ಮಾವ, ಮೈದುನ, ನಾದಿನಿ ಹೀಗೆ ಕೂಡು ಕುಟುಂಬದಲ್ಲಿರುವವರನ್ನು ಗುರುತಿಸಿ ಸನ್ಮಾನಿಸಬೇಕು ಎಂದರು.ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಮಾತನಾಡಿ, ತಾಯಿಯೇ ಮೊದಲ ಗುರುವಾಗಿದ್ದು, ಮಹಿಳೆಯು ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಎಲ್ಲಾ ರೀತಿಯ ಪಾತ್ರ ವಹಿಸುತ್ತಾಳೆ. ಈ ದಿನದ ಕೀರ್ತಿ 12 ನೇ ಶತಮಾನದ ಶರಣರಿಗೆ ಸಲ್ಲುತ್ತದೆ. 12 ನೇ ಶತಮಾನದ ಬಸವಾದಿ ಶರಣರು, ವಚನಕಾರರು ಸಮಾನತೆಗಾಗಿ, ಮಹಿಳಾ ಸ್ವಾತಂತ್ರ್ಯ ಸಮಾನತೆಗಾಗಿ ಹೋರಾಡಿದ್ದು, ಸುಮಾರು 800 ವರ್ಷಗಳ ಬಳಿಕ ಸಾಫಲ್ಯ ಕಾಣುತ್ತಿದೆ ಎಂದರು.
ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಹೋರಾಡಿ ತನ್ನ ಸ್ಥಾನಮಾನ ಪಡೆಯುತ್ತಿರುವುದು ಅಭಿನಂದನಾರ್ಹವಾಗಿದೆ. ಅನುಭವ ಮಂಟಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿರಬೇಕೆಂದು ಬಸವಣ್ಣನವರು ಬಯಸಿದ್ದರು. ಅಕ್ಕಮಹಾದೇವಿ, ಸಂಕವ್ವ, ಬಾಳವ್ವ ಇತರೆ ಅನೇಕ ವಚನಕಾರ್ತಿಯರು, ಸಾಹಿತಿಗಳು ಅಂದು ಕ್ರಾಂತಿ ಮಾಡಿದ್ದರು. ಒಂದು ಸದೃಢ ಸಮಾಜವನ್ನು ಕಟ್ಟುವ ಶಕ್ತಿ-ದಾಷ್ಟ್ರ್ಯತೆ ಇರುವುದು ಮಹಿಳೆಯರಲ್ಲಿ ಮಾತ್ರ ಎಂದು ಹೇಳಿದರು.
ಪುರುಷ ಸ್ವಾರ್ಥಿಯಾಗಿದ್ದಾನೆ. ಆದರೆ, ಮಹಿಳೆ ಹಾಗಲ್ಲ. ಎಲ್ಲವನ್ನು ಒಳಗೊಂಡು ಭಾವಾವೇಶವನ್ನು ಜಗತ್ತಿನಾದ್ಯಂತ ಪಸರಿಸುತ್ತಾಳೆ. ಆಕೆಗೆ ಕೊಂಚ ಶೈಕ್ಷಣಿಕವಾಗಿ ಅವಕಾಶಗಳು ಕಡಿಮೆ ದೊರೆತಿದ್ದೇ ಕೆಲವರಲ್ಲಿನ ಕೀಳರಿಮೆಗೆ ಕಾರಣ. ಹಿಂದಿನ ದಿನಗಳಲ್ಲಿ ಶಿಕ್ಷಣಕ್ಕಾಗಿ, ಸ್ಥಾನಮಾನಕ್ಕಾಗಿ ಹಂತಹಂತದಲ್ಲೂ ಹೋರಾಡಿದ ಮಹಿಳೆಯರನ್ನೂ ಕಾಣಬಹುದು. ಇಂದಿನ ಆಧುನಿಕತೆ, ವೈವಿಧ್ಯತೆಯ ಬದುಕನ್ನು ಸ್ವಾವಲಂಬಿಯಾಗಿ ಕಟ್ಟಿಕೊಳ್ಳುತ್ತಿರುವ ಹೆಣ್ಣುಮಕ್ಕಳನ್ನೂ ಕಾಣುತ್ತಿದ್ದೇವೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ರಾಜ್ಯ ಒಕ್ಕೂಟದ ಅಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಮಹಿಳೆ ಇಂದಿಗೂ ಹೊರಗೆ ಮತ್ತು ಒಳಗೆ ವಿವಿಧ ಸಾಮಾಜಿಕ ಸಮಸ್ಯೆಗೆ ತುತ್ತಾಗುತ್ತಿದ್ದಾಳೆ. ಶಿಕ್ಷಣವೊಂದೇ ಈ ಎಲ್ಲ ಸಮಸ್ಯೆಗೆ ಪರಿಹಾರವಾಗಿದ್ದು, ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಭಾರತ ದೇಶದಲ್ಲಿ 77 ನಿಮಿಷಕ್ಕೊಬ್ಬ ಮಹಿಳೆ ಮರಣ ಹೊಂದುತ್ತಿದ್ದು, ಪ್ರತಿ 6 ಗಂಟೆಗೆ ಒಬ್ಬ ಮಹಿಳೆ ಸುಟ್ಟು ಮರಣವನ್ನುಪ್ಪುತ್ತಿದ್ದಾರೆ. ಇಂತಹ ಅನೇಕ ದೌರ್ಜನ್ಯ ದಬ್ಬಾಳಿಕೆ ತಡೆಯಲು ಮೊದಲು ಶಿಕ್ಷಣ ಪಡೆಯಬೇಕು. ಸಮಾನತೆಗಾಗಿ ಜಾಗೃತರಾಗಿ ಸಂಘಟಿತರಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉತ್ತಮ ಅಂಗನವಾಡಿ ಕಾರ್ಯಕರ್ತೆಯರಾದ ದಾವಣಗೆರೆಯ ವಿಜಯನಗರದ ಅಂಗನವಾಡಿ ಕೇಂದ್ರದ ಲೀಲಾವತಿ ಆರ್.ಎಸ್, ಹರಿಹರದ ಯಲವಟ್ಟಿ-ಸಿ ಅಂಗನವಾಡಿ ಕೇಂದ್ರದ ಕವಿತಾ, ಜಗಳೂರಿನ ಐನಳ್ಳಿ ಅಂಗನವಾಡಿ ಕೇಂದ್ರದ ಲಲಿತಮ್ಮ, ಹರಪನಹಳ್ಳಿಯ ನೀಲಗುಂದ ಅಂಗನವಾಡಿ ಕೇಂದ್ರದ ಸುಮ, ಹೊನ್ನಾಳಿಯ ಮಾದನಬಾವಿ-1 ನೇ ಅಂಗನವಾಡಿ ಕೇಂದ್ರದ ಸಾಕಮ್ಮ, ಚನ್ನಗಿರಿ ಎರಡನೇ ಅಂಗನವಾಡಿ ಕೇಂದ್ರದ ಸಿ.ಭಾರತಿ ಇವರುನ್ನು ಹಾಗೂ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆಗೈದ ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆಯ ಶೃತಿ ಸ್ತ್ರೀಶಕ್ತಿ ಒಕ್ಕೂಟದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಜಿ.ಪಂ ಮಾಜಿ ಅಧ್ಯಕ್ಷೆ ಮಂಜುಳಾ ಟಿ.ವಿ ರಾಜು, ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷೆ ಮಂಗಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಬ, ಚಿಗಟೇರಿ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ನೀಲಾಂಬಿಕೆ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್. ವಿಜಯಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧೀಕ್ಷಕಿ ಸುಶೀಲಮ್ಮ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
