ಬೆಂಗಳೂರು
ದೇಶದ 5 ಲಕ್ಷ ಗ್ರಾಮಗಳನ್ನು ಕೇಂದ್ರ ಸರ್ಕಾರ ಬಯಲು ಶೌಚಮುಕ್ತ ಗ್ರಾಮಗಳು ಎಂದು ಘೋಷಿಸಿದೆ ಎಂದು ಕೇಂದ್ರದ ಮಾಜಿ ಸಚಿವರೂ ಆದ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ.
ದಾವಣಗೆರೆ ತಾಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಲಿಕಟ್ಟೆ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತಿ ಕಟ್ಟಡ, ವ್ಯಾಯಾಮಶಾಲೆ ಕಟ್ಟಡ ಹಾಗೂ ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 2014 ರ ನಂತರ ದೇಶದಲ್ಲಿ ಸ್ವಚ್ಚಭಾರತ ಯೋಜನೆಯಡಿ ದೊಡ್ಡ ಕ್ರಾಂತಿಯೇ ಆಗಿದೆ. 2014 ಕ್ಕಿಂತ ಮುಂಚೆ ಶೇ 45 ರಷ್ಟಿದ್ದ ಶೌಚಾಲಯ ಹೊಂದಿದವರ ಪ್ರಮಾಣ 2018 ಕ್ಕೆ ಶೇ.88 ಕ್ಕೇರಿದೆ. 2014 ರಿಂದ ಇಲ್ಲಿಯವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 8 ಕೋಟಿ 10 ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ, 19 ರಾಜ್ಯಗಳ 427 ಜಿಲ್ಲೆಗಳಲ್ಲಿ ಸುಮಾರು 5 ಲಕ್ಷ ಗ್ರಾಮಗಳನ್ನು ಬಯಲು ಶೌಚಾಲಯ ಮುಕ್ತ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ ಎಂದರು.
ಕೇಂದ್ರ ಸರ್ಕಾರ ಹಲವಾರು ವಿಮಾ ಯೋಜನೆಗಳನ್ನು ಜಾರಿಗೆ ತಂದಿದೆ, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತ ಯೋಜನೆಗಳನ್ನು ಜಾರಿಗೆ ತಂದಿದೆ, ಇವುಗಳ ಸಮರ್ಪಕ ಅನುಷ್ಟಾನ ಗ್ರಾಮ ಪಂಚಾಯತಿ ಸದಸ್ಯರುಗಳ ಹೆಗಲಮೇಲಿದೆ, ಆಯಾ ಗ್ರಾಮಗಳಲ್ಲಿ ಎಷ್ಟು ಜನ ವಿಮೆ ಮಾಡಿಸಿದ್ದಾರೆ, ಇನ್ನು ಎಷ್ಟು ಜನ ವಿಮೆ ಮಾಡಿಸುವವರಿದ್ದಾರೆ, ಅಪಘಾತವಾದವರಿಗೆ ಹಾಗೂ ಮೃತರಾದ ಎಷ್ಟು ಜನರಿಗೆ ವಿಮೆ ಹಣ ಬರಬೇಕಾಗಿದೆ ಎನ್ನುವ ಸಂಪೂರ್ಣ ಮಾಹಿತಿ ಸದಸ್ಯರುಗಳ ಬಳಿಯಿರಬೇಕು ಎಂದರು.
ಉಜ್ವಲ ಯೋಜನೆಯಡಿ ಎಷ್ಟು ಜನ ಫಲಾನುಭವಿಗಳಿದ್ದಾರೆ ನಮ್ಮ ಗ್ರಾಮವನ್ನು ಹೊಗೆರಹಿತ ಗ್ರಾಮವನ್ನಾಗಿ ಮಾಡಲು ಇನ್ನು ಎಷ್ಟು ಜನರಿಗೆ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಕೊಡಿಸಬೇಕು ಎನ್ನುವ ಬಗ್ಗೆಯೂ ಅವರು ಗಮನಹರಿಸಬೇಕು ಎಂದು ಸಂಸದರು ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








