ಪಾವಗಡ
ತಾಲ್ಲೂಕು ಹಲವು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದು, ಈಗ ತಾಲ್ಲೂಕಿನ ಪ್ರತಿ ಕೆರೆಗಳಿಗೂ ನೀರು ಹರಿಸುವ ಕೆಲಸವನ್ನು ಇನ್ನೆರಡು ವರ್ಷಗಳಲ್ಲಿ ಮಾಡಲಾಗುತ್ತದೆ ಎಂದು ಶಾಸಕ ವೆಂಕಟರವಣಪ್ಪ ಭರವಸೆ ನೀಡಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕೊರೋನಾ ನಿಯಮಗಳನ್ನು ಪಾಲಿಸುವ ಮೂಲಕ 74ನೇ ಸ್ವಾತಂತ್ರ್ಯ ದಿನದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಈ ನೀರು ಆಸರೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶಾದ್ಯಂತ ಕೊರೋನಾ ಎಂಬ ಮಹಾಮಾರಿ ದಿನೇ ದಿನೇ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ಆಚರಿಸಬೇಕಿದ್ದ ದೇಶದ ಹಬ್ಬವನ್ನು ತುಂಬಾ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಈಗ ಕೊರೋನಾ ಹಳ್ಳಿಗಳ ಕಡೆಗೂ ಸಹ ತುಂಬಾ ವೇಗವಾಗಿ ಹಬ್ಬುತ್ತಿದೆ. ಆದ್ದರಿಂದ ಹಳ್ಳಿಯ ಜನರು ಬೇಜವಾಬ್ದಾರಿತನ ತೋರದೆ ಜಾಗೃತರಾಗಿರಬೇಕು. ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವ ಮೂಲಕ ಈ ಹೆಮ್ಮಾರಿಯನ್ನು ನಮ್ಮ ದೇಶದಿಂದ ಹೊಡೆದೋಡಿಸಬೇಕು. ಅಧಿಕಾರಿಗಳು ಕೂಡ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ವೈದ್ಯರು ತಮ್ಮ ಜೀವದ ಹಂಗನ್ನೆ ತೊರೆದು ಕೊರೋನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ತಹಸೀಲ್ದಾರ್ ಡಿ.ಎನ್.ವರದರಾಜು ಮಾತನಾಡಿ, ಇಂದು ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯ ಸಿಕ್ಕ ಸುದಿನ. ಈ ದೇಶದ ಸ್ವಾತಂತ್ರ್ಯ, ಸ್ವಾಭಿಮಾನಕ್ಕಾಗಿ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್, ಭಗತ್ ಸಿಂಗ್‍ರಂತಹ ದೇಶಪ್ರೇಮಿಗಳು ಹಗಲು ಇರುಳು ಹೋರಾಟ ನಡೆಸಿ ತಮ್ಮ ಬದುಕನ್ನೆ ಬಲಿದಾನಗೈದ ಪುಣ್ಯ ಭೂಮಿ ಇದು ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಹಗಲು ರಾತ್ರಿ ಎನ್ನದೇ ಕೊರೋನಾ ನಿಯಂತ್ರಣ ಮಾಡುತ್ತಿದ್ದ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪುರಸಭೆ ಹಾಗೂ ಸರ್ಕಾರಿ ನೌಕರರನ್ನು ಕೊರೋನಾ ವಾರಿಯರ್ಸ್ ಎಂದು ಗುರ್ತಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ತಾ.ಪಂ.ಪ್ರಭಾರ ಅಧ್ಯಕ್ಷ ಐ.ಜೆ.ನಾಗರಾಜು, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ನರಸಿಂಹಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಜಿ.ನವೀನ್ ಚಂದ್ರ, ವೃತ್ತ ನಿರೀಕ್ಷಕ ನಾಗರಾಜು, ತಾಲ್ಲೂಕು ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಪೂಜಾರಪ್ಪ, ಅಂತರಗಂಗೆ ಶಂಕರಪ್ಪ, ಕರ್ನಾಟಕ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಆರ್.ಟಿ.ಖಾನ್, ಕಂದಾಯ ನಿರೀಕ್ಷಕ ರಾಜ್ ಗೋಪಾಲ್, ಗ್ರಾಮ ಲೆಕ್ಕಿಗ ಮಹೇಶ್, ಶಿಕ್ಷಕರು ಹಾಗೂ ಪುರಸಭೆ ಸಿಬ್ಬಂದಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
