ದಾವಣಗೆರೆ :
ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಆಶ್ವಾಸನೆ ನೀಡುವ ಹಾಗೂ ಸುಳ್ಳು ಪ್ರಣಾಳಿಕೆ ಪ್ರಕಟಿಸುವ ರಾಜಕೀಯ ಪಕ್ಷಗಳ ವಿರುದ್ಧ 420 ಕಾಯ್ದೆಯಡಿ ಪ್ರಕರಣ ದಾಖಲಿಸಲು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಘಟಕ ತೀರ್ಮಾನಿಸಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಗೆಲುವು ಸಾಧಿಸುವ ದುರುದ್ದೇಶದಿಂದ ರೈತರಿಗೆ ಅಧಿಕಾರಕ್ಕೆ ಬಂದಾದ ಮೇಲೆ ಅದು ಮಾಡುತ್ತೇವೆ. ಇದು ಮಾಡುತ್ತೇವೆಂಬುದಾಗಿ ಆಶ್ವಾಸನೆಗಳನ್ನು ನೀಡಿ, ಗೆದ್ದು ಅಧಿಕಾರಕ್ಕೆ ಬಂದಾದ ಮೇಲೆ ಆ ಆಶ್ವಾಸನೆಗಳನ್ನು ಈಡೇರಿಸದ ಜನಪ್ರತಿನಿಧಿ, ರಾಜಕೀಯ ಪಕ್ಷಗಳ ವಿರುದ್ಧ ಫೋರ್‍ಟ್ವೆಂಟಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಸ್ತುತ ವೈಜ್ಞಾನಿಕ ಬೆಂಬಲ ಬೆಲೆ ಇಲ್ಲ, ಉತ್ತಮ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಕೃಷಿ ಉತ್ಪಾದನೆಗಿಂತ ವೆಚ್ಚವೇ ಹೆಚ್ಚಾಗುತ್ತಿದೆ. ಹೀಗಾಗಿ ರೈತರನ್ನು 4ನೇ ದರ್ಜೆಯ ವ್ಯಕ್ತಿಯನ್ನಾಗಿ ಭಿಕ್ಷೆ ಬೇಡುವವರಿಗಿಂತಲೂ ಕೀಳಾಗಿ ಕಾಣಲಾಗುತ್ತಿದೆ. ಆದ್ದರಿಂದ ಸ್ವಾಭಿಮಾನಿ ಬದುಕು ಸಿಗದ ಕಾರಣ ಆತ್ಮಹತ್ಯೆಯ ಕಡೆ ಮುಖ ಮಾಡಿದ್ದಾನೆಂದು ಆರೋಪಿಸಿದರು.
ಮುಂದೆ ನೂತನವಾಗಿ ಅಧಿಕಾರಕ್ಕೆ ಬರುವ ಸರ್ಕಾರವು, ರೈತರ ಆತ್ಮಹತ್ಯೆ ತಡೆಗಟ್ಟಲು, ಅನ್ನದಾತನನ್ನು ಮೊದಲ ದರ್ಜೆಯ ಪ್ರಜೆಯನ್ನಾಗಿಸಲು ರೈತರನ್ನು ಋಣಮುಕ್ತರನ್ನಾಗಿಸುವುದು ಸೇರಿದಂತೆ ರೈತರ ಶಾಶ್ವತ ಪರಿಹಾರಕ್ಕಾಗಿ ರೈತರೊಂದಿಗೆ ಚರ್ಚಿಸಿ ಯೋಜನೆಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು.
ಕಂದಾಯ ಇಲಾಖೆಯಲ್ಲಿ ರೈತರ ಖಾತೆ ವರ್ಗಾವಣೆಗೆ ಸಂಬಂಧಿಸಿದಂತೆ ಅಲೆದಾಡಿಸದೇ, ಅನಗತ್ಯವಾಗಿ ವಿಳಂಬ ಮಾಡುವುದನ್ನು ತಪ್ಪಿಸಿ, 30 ದಿನಗಳಲ್ಲಿ ಖಾತೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಬೇಕು. ಪಹಣಿಯಲ್ಲಿ ತಪ್ಪಾಗಿ ವಿವರ ದಾಖಲಾಗದಂತೆ ನೋಡಿಕೊಳ್ಳಬೇಕೆಂಬುದು ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ರೈತರಿಗೆ ಸಿಗುವ ಸೇವೆಯನ್ನು ತ್ವರಿತಗತಿಯಲು ತಲುಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಾವು ತಯಾರಿಸುವ ಪ್ರಣಾಳಿಕೆಗೆ ಯಾವ ಪಕ್ಷದ ಅಭ್ಯರ್ಥಿ ಸಮ್ಮತಿ ನೀಡಿ, ಅಧಿಕಾರಕ್ಕೆ ಬಂದಾದ ನಂತರ ನಮ್ಮ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಹಾಗೂ ಆ ಪಕ್ಷ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ಪ್ರಯತ್ನಿಸುತ್ತದೆಯೋ ಆ ಪಕ್ಷದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಬೆಂಬಲಿಸುತ್ತೇವೆಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎನ್.ಮಲ್ಲಿಕಾರ್ಜುನಪ್ಪ, ಪ್ರಧಾನ ಕಾರ್ಯದರ್ಶಿ ನಂಜುಂಡಸ್ವಾಮಿ, ಜಿ.ಎಸ್.ತಿಪ್ಪೇಶ್, ಎಸ್.ಕೆ.ನಾಗರಾಜ್, ಶ್ರೇಣಿಕ್ ಜೈನ್, ಪಿ.ಸಿ.ರಮೇಶ್‍ಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
