ಹರಪನಹಳ್ಳಿ:
ನವೆಂಬರ್ ಒಂದರಂದು ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್ ಕರಾಳ ದಿನ ಆಚರಿಸಲು ಉದ್ದೇಶಿಸಿದ್ದು, ಇದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಬಸವರಾಜ ಹುಲಿಯಪ್ಪನವರು ಮಾತನಾಡಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ವೀರರಾಣಿ ಕಿತ್ತೂರು ಚನ್ನಮ್ಮನ ನೆಲೆವೀಡು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕರ್ಮಭೂಮಿಯಾಗಿದೆ. ಇಂತಹ ಪುಣ್ಯಭೂಮಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕನ್ನಡ ರಾಜ್ಯೋತ್ಸವದ ದಿನದಂದು ಕರಾಳ ದಿನಾಚರಣೆ ಮಾಡುತ್ತಾ ಬಂದಿದೆ. ಕನ್ನಡಿಗರ ಮೇಲೆ ಮರಾಠಿಗರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ಈ ಬಾರಿ ಕರಾಳ ದಿನಾಚರಣೆ ನೆಪದಲ್ಲಿ ಗಲಭೆ ನಡೆಸಲು ಕುತಂತ್ರವಾಗಿದೆ. ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕರಾಳ ದಿನಕ್ಕೆ ಅವಕಾಶ ಕೊಡಬಾರದು. ಸಂಘರ್ಷ ಹುಟ್ಟಿಸುವ ಎಂಇಎಸ್ ಸಂಘಟನೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕರವೇ ಉಪಾಧ್ಯಕ್ಷ ನಾಗರಾಜ ಗಿರಜ್ಜಿ, ಯುವಘಟಕದ ಅಧ್ಯಕ್ಷ ಅಶೋಕ, ವಿದ್ಯಾರ್ಥಿ ಘಟಕದ ಕಾಶಿನಾಥ, ಮಲ್ಲಿಕಾರ್ಜುನ, ಮಾಗಳದ ಸಂತೋಷ, ಮಂಜುನಾಥ, ಗಣೇಶ್, ಸಂದೀಶ್, ಚಂದ್ರು, ಅಭಿ, ಎನ್.ಶಿವಕುಮಾರ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ